Site icon Vistara News

BBMP | ರಸ್ತೆ ಬದಿಯ, ಪಾದಚಾರಿ ಮಾರ್ಗದಲ್ಲಿನ ಪೈಪ್‌, ಕಟ್ಟಡ ತ್ಯಾಜ್ಯಗಳ ತೆರವಿಗೆ ಮುಖ್ಯ ಆಯುಕ್ತರ ಆದೇಶ

BBMP

ಬೆಂಗಳೂರು: ಬೆಂಗಳೂರು ಎಂದರೆ ಸಾಕು ಟ್ರಾಫಿಕ್‌ ಕಿರಿಕಿರಿಯ ಜತೆಗೆ ರಸ್ತೆ ಬದಿಗಳಲ್ಲಿ, ಪಾದಚಾರಿ ಮಾರ್ಗಗಳಲ್ಲಿ ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯಗಳು, ಪೈಪ್‌ಗಳು ಬಿದ್ದಿರುತ್ತವೆ. ಇದು ಸಾಕಷ್ಟು ಕಿರಿಕಿರಿಯನ್ನು ಉಂಟು ಮಾಡುತ್ತಲಿದ್ದು, ಎಲ್ಲದಕ್ಕೂ ಟ್ಯಾಕ್ಸ್‌ ಪಡೆಯುವ ಸರ್ಕಾರಕ್ಕೆ ಇವುಗಳ ಸ್ವಚ್ಛತೆಯ ಜವಾಬ್ದಾರಿ ಇಲ್ಲವೇ ಎಂದು ನಾಗರಿಕರು ಹಿಡಿಶಾಪ ಹಾಕಿಕೊಂಡು ಓಡಾಡುವ ಪರಿಸ್ಥಿತಿ ಇತ್ತು. ಈಗ ಈ ನಿಟ್ಟಿನಲ್ಲಿ ಬಿಬಿಎಂಪಿ (BBMP) ದಿಟ್ಟ ಹೆಜ್ಜೆ ಇಟ್ಟಿದ್ದು, ಬೆಂಗಳೂರು ಸ್ವಚ್ಛ-ಸುಂದರ ನಗರಿಯಾಗಿ ಕಾಣಿಸಿಕೊಳ್ಳಲು ಸಜ್ಜಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಹಲವು ಕಡೆಗಳಲ್ಲಿ ರಸ್ತೆ ಬದಿ ಮತ್ತು ಪಾದಚಾರಿ ಮಾರ್ಗದಲ್ಲಿರುವ ಕಟ್ಟಡ ತ್ಯಾಜ್ಯಗಳು (ಕಟ್ಟಡ ನಿರ್ಮಾಣ ವಸ್ತು) ಮತ್ತು ಪೈಪುಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಆದೇಶ ಹೊರಡಿಸಿದ್ದಾರೆ.

ಈ ತ್ಯಾಜ್ಯಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ತಕ್ಷಣದಿಂದ ಆಯಾ ವಲಯದ ಎಲ್ಲ ಮುಖ್ಯ ಇಂಜಿನಿಯರ್‌ಗಳು ರಸ್ತೆ ಬದಿ ಮತ್ತು ಪಾದಚಾರಿ ಮಾರ್ಗದಲ್ಲಿ ಇರುವ ಪೈಪ್‌, ಕಟ್ಟಡ ತ್ಯಾಜ್ಯಗಳನ್ನು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಜತೆಗೆ ತೆರವುಗೊಳಿಸಿರುವ ಬಗ್ಗೆ ಜಿಯೋ ಟ್ಯಾಗ್ ಫೋಟೊ ಸಮೇತ ವರದಿಯನ್ನು ಎಲ್ಲ ವಿಭಾಗಗಳ ಕಾರ್ಯಪಾಲಕ ಅಭಿಯಂತರರು ಆಗಸ್ಟ್‌ ೨೧ರ ಸಂಜೆ 4 ಗಂಟೆ ಒಳಗಾಗಿ ಪ್ರಧಾನ ಅಭಿಯಂತರರಿಗೆ ವರದಿ ನೀಡಲು ಆದೇಶ ನೀಡಲಾಗಿದೆ.

ಇದನ್ನೂ ಓದಿ | BBMP ಮೀಸಲಾತಿ | ಕಾಂಗ್ರೆಸ್‌ ಪ್ರತಿಭಟನೆಗೆ ಕ್ಯಾರೇ ಎನ್ನದ ಸರ್ಕಾರ: ಯಥಾವತ್ತು ಪ್ರಕಟ

ಇವುಗಳನ್ನು ತೆರವುಗೊಳಿಸುವಲ್ಲಿ ವಿಫಲವಾದರೆ ಅಥವಾ ವರದಿ ನೀಡದಿದ್ದರೆ ಸಂಬಂಧಪಟ್ಟ ಮುಖ್ಯ ಅಭಿಯಂತರರು ಮತ್ತು ಕಾರ್ಯಪಾಲಕ ಅಭಿಯಂತರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ಆದೇಶದ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ | BBMP | ವಾರ್ಡ್‌ವಾರು ಮೀಸಲಾತಿಯ ಅಂತಿಮ ಅಧಿಸೂಚನೆ ಪ್ರಕಟ

Exit mobile version