ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಪಾರ್ಕ್‌ಗಳು ಈ ಹಿಂದೆ ಸೀಮಿತ ಸಮಯಕ್ಕೆ ಸಾರ್ವಜನಿಕರಿಗೆ ಲಭ್ಯವಿತ್ತು. ಆದರೆ, ಈಗ ಹೊಸ ರೂಲ್ಸ್ ಜಾರಿಯಾಗಿದ್ದು, ಬೆಳಗ್ಗೆ 5ರಿಂದ ರಾತ್ರಿ 8ರವರೆಗೆ ಜನರು ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಈ ಸಂಬಂಧ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಉದ್ಯಾನವನಗಳನ್ನು ವಾಯು ವಿಹಾರಕ್ಕೆಂದು ಪ್ರತಿ ದಿನ ಬೆಳಗ್ಗೆ 5.00 ರಿಂದ 10.00 ರವರೆಗೆ ಹಾಗೂ ಸಂಜೆ 4.00 ರಿಂದ ರಾತ್ರಿ 8.00 ರವರೆಗೆ ಮಾತ್ರ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಆದರೆ, ಇನ್ನು ಮುಂದೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲೆಂದು ಸಮಯವನ್ನು ಮಾರ್ಪಡಿಸಿ ಬೆಳಗ್ಗೆ 5.00 ರಿಂದ ರಾತ್ರಿ 8.00 ರವರೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಉದ್ಯಾನವನಗಳ ನಿರ್ವಹಣೆ ಇದ್ದರೆ ಬೆಳಗ್ಗೆ 10 ರಿಂದ ಮದ್ಯಾಹ್ನ 1.30ರವರೆಗೆ ಸಮಯವನ್ನು ನಿಗದಿಪಡಿಸಲಾಗಿದೆ. ಉದ್ಯಾನವನಗಳ ನಿರ್ವಹಣೆಯ ಸಮಯದಲ್ಲಿ ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ.