ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಸವರಾಜ್ ಬೊಮ್ಮಾಯಿ ಸರ್ಕಾರ ಪೌರಕಾರ್ಮಿಕರ (Bbmp Pourakarmikas) ಒತ್ತಡಕ್ಕೆ ಮಣಿದು ನೌಕರಿಯನ್ನು ಕಾಯಂಗೊಳಿಸುವ ನಿರ್ಧಾರ ಮಾಡಿತ್ತು. ಇದಕ್ಕಾಗಿ ಮೂರು ತಿಂಗಳ ಸಮಯವಕಾಶ ಕೇಳಿ ನೌಕರರ ಪ್ರತಿಭಟನೆ ಅಂತ್ಯಗೊಳಿಸಿತ್ತು. ಕಾಯಂ ನೇಮಕಾತಿಯ ಖುಷಿಯಲ್ಲಿದ್ದ ನೌಕರರಿಗೆ ಈಗ ಚುನಾವಣಾ ನೀತಿಸಂಹಿತೆ ತಣ್ಣೀರು ಎರಚಿದೆ.
ಹತ್ತಾರು ಬಾರಿ ಹಗ್ಗಜಗ್ಗಾಟದ ಬಳಿಕ ಬಿಬಿಎಂಪಿ ಸೇರಿದಂತೆ ರಾಜ್ಯದ 8 ಮಹಾನಗರ ಪಾಲಿಕೆಯ ಗುತ್ತಿಗೆ, ಹೊರಗುತ್ತಿಗೆ ಹಾಗೂ ನೇರ ವೇತನ ಪಾವತಿಯಡಿ ಕಾರ್ಯ ನಿರ್ವಹಿಸುತ್ತಿದ್ದ ಸುಮಾರು 14,980 ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿ ಬಿಜೆಪಿ ಸರ್ಕಾರ ಚುನಾವಣೆಗೂ ಮುನ್ನ ಆದೇಶ ಮಾಡಿತ್ತು. ಆದರೆ ಈ ನೇಮಕಾತಿ ಆದೇಶಕ್ಕೆ ಈಗ ಚುನಾವಣೆ ನೀತಿಸಂಹಿತೆಯ ಗ್ರಹಣ ಹಿಡಿದಿದೆ.
ಚುನಾವಣೆ ಸಮೀಪಿಸುತ್ತಿದಂತೆ ಬಿಜೆಪಿ ಸರ್ಕಾರ ಕಳೆದ ಫೆಬ್ರವರಿಯಲ್ಲಿ ಬಿಬಿಎಂಪಿ ಸೇರಿದಂತೆ ರಾಜ್ಯದ ಇನ್ನು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರ ನೇಮಕಾತಿಗೆ ಸಂಬಂಧಿಸಿದಂತೆ ನಿಯಮ ರೂಪಿಸಿತ್ತು. ಕೆಲವು ನೇಮಕಾತಿ ನಿಯಮಗಳನ್ನು ಸಡಿಲಗೊಳಿಸಿ ಅರ್ಜಿ ಆಹ್ವಾನಿಸಿ ತಾತ್ಕಾಲಿಕ ನೇಮಕಾತಿ ಪಟ್ಟಿಯನ್ನೂ ಬಿಡುಗಡೆ ಮಾಡಿತ್ತು.
ಕಳೆದ ವರ್ಷ ಮಾರ್ಚ್‌ನಲ್ಲಿ ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರು ಎಲ್ಲರೂ ಏಕಕಾಲಕ್ಕೆ ಕಾಯಂಗೊಳಿಸಬೇಕೆಂದು ಪಟ್ಟುಹಿಡಿದ ಹಿನ್ನೆಲೆ ಹೆಚ್ಚುವರಿಯಾಗಿ 14 ಸಾವಿರ ಪೌರ ಕಾರ್ಮಿಕರನ್ನು ಕಾಯಂಗೊಳಿಸುವುದಾಗಿ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಇದೀಗ ನೀತಿಸಂಹಿತೆ ಜಾರಿ ಇರುವುದರಿಂದ ಪೌರಕಾರ್ಮಿಕರು ಕಂಗಾಲಾಗಿದ್ದಾರೆ.
ಇದಕ್ಕೆ ಕಾರಣ ವಿಧಾನಸಭಾ ಚುನಾವಣೆ. ಹೌದು ಚುನಾವಣೆ ಮುಕ್ತಾಯಗೊಂಡು ಸರ್ಕಾರ ರಚನೆ ಆಗಬೇಕು. ಬಳಿಕ ಸಂಬಂಧಪಟ್ಟ ಇಲಾಖೆಗೆ ಸಚಿವರ ನೇಮಕವಾಗುವವರೆಗೆ ಸುಮಾರು 6 ತಿಂಗಳ ನಂತರ ಪೌರ ಕಾರ್ಮಿಕರ ನೇಮಕಾತಿ ಪ್ರಕ್ರಿಯೆ ಮರು ಚಾಲನೆ ದೊರೆಯುವ ಸಾಧ್ಯತೆ ಇದೆ.
ಚುನಾವಣೆ ಹೊತ್ತಿನಲ್ಲಿ ರಾಜ್ಯ ಸರ್ಕಾರ ತರಾತುರಿಯಲ್ಲಿ ಗುತ್ತಿಗೆ ಪೌರಕಾರ್ಮಿಕರ ಒತ್ತಡಕ್ಕೆ ಮಣಿದು ಕಾಯಂಗೊಳಿಸುವುದಕ್ಕೆ ಸಂಬಂಧಿಸಿದಂತೆ ಆದೇಶ ಮಾಡಿದೆ. ಆದರೆ ಮುಂದೆ ಅಸ್ತಿತ್ವಕ್ಕೆ ಬರುವ ಸರ್ಕಾರ, ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸುವುದಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಮುಂದಿನ ಪ್ರಕ್ರಿಯೆ ನಡೆಯಲಿದೆ.
ಇದನ್ನೂ ಓದಿ: Shivamogga Jail: ಶಿವಮೊಗ್ಗ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಸಾವು; ಕೊಲೆಯೆಂದು ಕುಟುಂಬಸ್ಥರ ಆರೋಪ
ಹೀಗಾಗಿ, ಗುತ್ತಿಗೆ ಪೌರಕಾರ್ಮಿಕರ ಕಾಯಂಗೊಳಿಸುವ ಪ್ರಕ್ರಿಯೆ ಮೇಲೆ ತೂಗುಗತ್ತಿ ನೇತಾಡುತ್ತಿದೆ. ಇದೇ ಭೀತಿಯಲ್ಲಿರುವ ಪೌರಕಾರ್ಮಿಕರು ಈಗ ಮತ್ತೆ ಹೋರಾಟಕ್ಕೆ ಯೋಜನೆ ರೂಪಿಸಿದ್ದಾರೆ. ನಮಗೆ ಅದಷ್ಟು ಬೇಗ ನೇಮಕಾತಿ ಆದೇಶ ನೀಡಬೇಕು, ಇಲ್ಲವಾದರೆ ರಾಜ್ಯ ವ್ಯಾಪ್ತಿ ಹೋರಾಟ ಮಾಡುವುದಾಗಿ ಬಿಬಿಎಂಪಿ ಪೌರಕಾರ್ಮಿಕರ ಮುಖಂಡ ಬಾಬು ಎಚ್ಚರಿಕೆ ನೀಡಿದ್ದಾರೆ.