Site icon Vistara News

Ganesh Chaturthi: ಗಮನಿಸಿ; ಹಬ್ಬದ ಹಿನ್ನೆಲೆ ಪ್ರಾಣಿವಧೆ, ಮಾಂಸ ಮಾರಾಟ ನಿಷೇಧಿಸಿದ ಬಿಬಿಎಂಪಿ

BBMP Office

BBMP Prohibits Animal Slaughter, Meat Sale On Ganesh Chaturthi

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಗಣೇಶ ಚತುರ್ಥಿ (Ganesh Chaturthi) ಹಬ್ಬದ ಸಂಭ್ರಮ ಮನೆಮಾಡಿದೆ. ಬೆಂಗಳೂರಿನ ದೊಡ್ಡಗಣಪತಿ ದೇವಾಲಯದಲ್ಲಂತೂ ಬೆಳಗ್ಗೆಯಿಂದಲೇ ನೂರಾರು ಜನ ವಿಶೇಷ ಪ್ರಾರ್ಥನೆ, ಪೂಜೆ ಮಾಡುತ್ತಿದ್ದಾರೆ. ಹೂ, ಹಣ್ಣು ಸೇರಿ ಪೂಜಾ ಸಾಮಗ್ರಿಗಳ ಖರೀದಿ ಭರಾಟೆಯೂ ಜೋರಾಗಿದೆ. ಇದರ ಬೆನ್ನಲ್ಲೇ, ಬಿಬಿಎಂಪಿಯು ಹಬ್ಬದ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 18ರಂದು ಪ್ರಾಣಿಗಳ ವಧೆ ಹಾಗೂ ಮಾಂಸದ ಮಾರಾಟವನ್ನು ನಿಷೇಧಿಸಿದೆ.

“ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 18ರಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಣಿಗಳನ್ನು ಸಂಹಾರ ಮಾಡುವುದು ಹಾಗೂ ಮಾಂಸವನ್ನು ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ” ಎಂದು ಬಿಬಿಎಂಪಿ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಈಗಾಗಲೇ ಸಾಂಪ್ರದಾಯಿಕ ಹಾಗೂ ಶಿಸ್ತುಬದ್ಧವಾಗಿ ಗಣೇಶ ಚತುರ್ಥಿಯ ಆಚರಣೆಗಾಗಿ ನಗರದಲ್ಲಿ ಫ್ಲೆಕ್ಸ್‌, ಬ್ಯಾನರ್‌ಗಳ ಅಳವಡಿಕೆಯನ್ನು ಈಗಾಗಲೇ ಬಿಬಿಎಂಪಿ ನಿಷೇಧಿಸಿದೆ. ಬೆಂಗಳೂರಿನಲ್ಲಿ ಪರವಾನಗಿ ಹೊಂದಿರುವ 3 ಸಾವಿರ ಕಸಾಯಿಖಾನೆ ಹಾಗೂ ಮಾಂಸ ಮಾರಾಟದ ಅಂಗಡಿಗಳಿವೆ.

ಮಣ್ಣಿನ ಗಣೇಶ ಕೂರಿಸಿ, ಪಿಒಪಿ ಬೇಡ: ಪ್ರಮುಖ ಸೂಚನೆಗಳು

  1. ಯಾರೆಲ್ಲ ಗಣೇಶ ಕೂರಿಸುತ್ತಾರೋ ಅವರೆಲ್ಲರೂ ಮಣ್ಣಿನ ಗಣೇಶನನ್ನೇ ಕೂರಿಸಬೇಕು, ಯಾವುದೇ ಕಾರಣಕ್ಕೂ ಪ್ಲಾಸ್ಟರ್‌ ಆಪ್‌ ಪ್ಯಾರಿಸ್‌ನಿಂದ ಮಾಡಿದ ಗಣೇಶನ ಮೂರ್ತಿ ಬಳಸಬಾರದು. ಬೆಂಗಳೂರಿನಲ್ಲಿ ಪಿಒಪಿ ಗಣೇಶ ಮೂರ್ತಿ ಮಾರಾಟಕ್ಕೂ ನಿರ್ಬಂಧವಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.
  2. ಒಂದು ಪ್ರದೇಶದಲ್ಲಿ ದೊಡ್ಡ ಗಣೇಶನ ಮೆರವಣಿಗೆ ಯಾವ ಮಾರ್ಗವಾಗಿ ಸಾಗುತ್ತದೋ ಅದೇ ರೂಟ್‌ನಲ್ಲಿ ಉಳಿದವುಗಳನ್ನು ಸಾಗಿಸುವುದು ಉತ್ತಮ.
  3. ವಾರ್ಡ್‌ನಲ್ಲಿ ಎರಡು ಕಡೆ ವಾಟರ್‌ ಟ್ಯಾಂಕ್‌ ಇಡುತ್ತೇವೆ, ಅಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಬಹುದು.
  4. ಗಣೇಶ ಮೂರ್ತಿ ಇಡುವವರು ಅನುಮತಿ ಪಡೆಯಬೇಕು. ಬೆಸ್ಕಾಂ, ಪೊಲೀಸ್, BBMP ಅಧಿಕಾರಿಗಳು ಒಂದೇ ಕಡೆ ಇದ್ದು ಅನುಮತಿ ನೀಡುವ ವ್ಯವಸ್ಥೆ ಮಾಡುತ್ತೇವೆ.
  5. ಬಟ್ಟೆಯಲ್ಲಿ ತಯಾರಿಸುವ ಬ್ಯಾನರ್​ ಬಳಸಬಹುದು. ಬಟ್ಟೆ ಮೇಲೆ ಪೈಂಟ್‌ನಲ್ಲಿ ಬರೆಯಬಹುದು. ಇದು ಪೆಂಡಾಲ್‌ನಲ್ಲಿ ಹಾಕಬಹುದಾದ ಬ್ಯಾನರ್‌. ಫ್ಲೆಕ್ಸ್‌ಗಳನ್ನು ಹಾಕುವಂತಿಲ್ಲ.
  6. ಹಲಸೂರು ಕೆರೆಯಲ್ಲಿ ಗಣೇಶ ವಿಸರ್ಜನೆ ಕೌಂಟರ್ ನಲ್ಲಿ ಹೂಳು ತುಂಬಿದೆ. ಅದನ್ನು ಸರಿ ಮಾಡುತ್ತೇವೆ.
  7. ಗಣೇಶ ಮೂರ್ತಿಯನ್ನು ಕೆರೆಯಲ್ಲಿ ವಿಸರ್ಜಿಸುವಾಗ ಅದರ ಮೇಲಿರುವ ಎಲ್ಲ ಹೂಗಳನ್ನು ತೆಗೆಯಬೇಕು. ಹೂಗಳ ಸಹಿತ ಮೂರ್ತಿ ವಿಸರ್ಜನೆ ಮಾಡುವುದರಿಂದ ಹೂಳು ಹೆಚ್ಚಾಗಿದೆ.
  8. ಮೆರವಣಿಗೆಯಲ್ಲಿ ತಂದ ಮೂರ್ತಿಗಳನ್ನು ಹೇಗೆ ಬೇಕೆಂದ ಹಾಗೆ ಎಸೆಯಬೇಡಿ. ಅದಕ್ಕೆ ಧಾರ್ಮಿಕ ಭಾವನೆ ಇದೆ. ನಿಧಾನವಾಗಿ ನೀರಿಗೆ ಬಿಡಿ

ಇದನ್ನೂ ಓದಿ: Ganesh Chaturthi: ಗಣೇಶನಿಗೆ ಇವೆ 108 ಹೆಸರುಗಳು! ಪ್ರತಿ ಹೆಸರಿನ ಅರ್ಥವೂ ವಿಶೇಷ!

Exit mobile version