ಬೆಂಗಳೂರು: “ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ (Brihat Bangalore Mahanagara Palike-BBMP Schools) ಸರ್ಕಾರಿ ಶಾಲೆಗಳನ್ನು (Government Schools) ಶಿಕ್ಷಣ ಇಲಾಖೆಯ (Education department) ಸುಪರ್ದಿಗೆ ನೀಡಲು ತೀರ್ಮಾನಿಸಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ತಿಳಿಸಿದ್ದಾರೆ. ಬೆಂಗಳೂರಿನ ಸಮಗ್ರ ಶಿಕ್ಷಣ ಇಲಾಖೆ (Integrated Education Department) ಕಚೇರಿಯಲ್ಲಿ ನಡೆದ ಮಹತ್ವದ ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಪ್ರತಿ ವರ್ಷ ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕುಸಿತ ಕಂಡಿರುವುದನ್ನು ನಾವು ಗಮನಿಸಿದ್ದೇವೆ. ಇದಕ್ಕೆ ಅವಕಾಶ ನೀಡಬಾರದು. ಖಾಸಗಿ ಶಾಲೆಗಳಿಗೆ ಸರಿಸಮನಾಗಿ ಗುಣಮಟ್ಟದ ಶಿಕ್ಷಣ ನೀಡಲು ಈ ತೀರ್ಮಾನ ಮಾಡಲಾಗಿದೆ. ಶಿಕ್ಷಣ ನೀಡುವಂತಹ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆಗೆ ನೀಡಲಾಗುತ್ತಿದ್ದು, ಈ ಶಾಲೆಗಳ ಮೂಲ ಸೌಕರ್ಯಗಳ ಉನ್ನತೀಕರಣ ಹಾಗೂ ಅವುಗಳ ನಿರ್ವಹಣೆಯನ್ನು ಬಿಬಿಎಂಪಿಯಿಂದ ಮಾಡಲಾಗುವುದು. ಶಾಲೆಯ ಜಾಗ, ಕಟ್ಟಡ ನಿರ್ವಹಣೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯವನ್ನು ಪಾಲಿಕೆಯಿಂದಲೇ ಮಾಡಲಾಗುವುದು. ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
500 ಕೆಪಿಎಸ್ ಶಾಲೆ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ
ಸಿಎಸ್ಆರ್ ನಿಧಿಯ ಮೂಲಕ ಪಂಚಾಯ್ತಿ ಮಟ್ಟದಲ್ಲಿ 2 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣ ಮಾಡುವ ಗುರಿ ಸರ್ಕಾರದ ಮುಂದಿದ್ದು, ಮೊದಲ ವರ್ಷ 500 ಶಾಲೆಗಳ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಮುಂದಿನ ತಿಂಗಳು ಮೊದಲನೇ ಅಥವಾ ಎರಡನೇ ವಾರದಲ್ಲಿ ಎಲ್ಲಾ ಸಿಎಸ್ಆರ್ ಕಂಪನಿಗಳನ್ನು ಕರೆದು ಅವರಿಗೆ ಈ ಶಾಲೆಗಳ ನಿರ್ಮಾಣ ಯೋಜನೆಗಳನ್ನು ನೀಡುತ್ತೇವೆ. ಅವರು ನಮಗೆ ಗುಣಮಟ್ಟದ ಮೂಲಸೌಕರ್ಯವಿರುವ ಶಾಲೆಗಳನ್ನು ನಿರ್ಮಿಸಿ ಕೊಡಲಿದ್ದಾರೆ. ಪ್ರತಿ ಶಾಲೆಯ ಮೂಲಭೂತ ಸೌಕರ್ಯಕ್ಕೆ ಕನಿಷ್ಠ 4 ಕೋಟಿಯಿಂದ 7 ಕೋಟಿ ರೂ.ವರೆಗೂ ವೆಚ್ಚವಾಗಲಿದೆ. ನಾವು ಈಗಾಗಲೇ ಕೆಲವು ಕಂಪನಿಗಳ ಜತೆ ಚರ್ಚೆ ಮಾಡಿದ್ದು, ಮತ್ತೊಂದು ಸುತ್ತಿನ ಸಭೆ ಮಾಡುತ್ತೇವೆ ಎಂದು ಡಿ.ಕೆ. ಶಿವಕುಮಾರ್ ವಿವರಿಸಿದರು.
ಕಂಪನಿ ಅಥವಾ ಸಂಸ್ಥೆಗಳು ಸರ್ಕಾರಕ್ಕೆ ಸಿಎಸ್ಆರ್ ಹಣ ನೀಡುವ ಅಗತ್ಯವಿಲ್ಲ. ಶಾಲೆ ನಿರ್ಮಾಣಕ್ಕೆ ಬೇಕಾದ ಭೂಮಿಯನ್ನು ಕನಿಷ್ಠ 2 ಎಕರೆಯಿಂದ ಮೂರ್ನಾಲ್ಕು ಎಕರೆಯಷ್ಟು ಜಾಗವನ್ನು ಸರ್ಕಾರ ನೀಡಲಿದ್ದು, ಅಲ್ಲಿ ಈ ಸಂಸ್ಥೆಗಳು ಶಾಲೆ ನಿರ್ಮಿಸಲಿವೆ. ಶಾಲೆಯಲ್ಲಿ ಲೈಬ್ರರಿ, ತರಗತಿ, ಪ್ರಯೋಗಾಲಯ, ಶೌಚಾಲಯ ಸೇರಿದಂತೆ ಎಲ್ಲದರ ಯೋಜನೆ ನೀಡಲಾಗುವುದು. ಅವರು ಬೇಕೆಂದರೆ ಇನ್ನು ಉತ್ತಮ ಯೋಜನೆ ಮಾಡಿಕೊಂಡು ಶಾಲೆ ನಿರ್ಮಾಣ ಮಾಡಬಹುದು. ಈ ಬಗ್ಗೆ ರಾಮನಗರ ಜಿಲ್ಲೆಯಲ್ಲಿ ಪ್ರಯೋಗ ಆರಂಭವಾಗಿದೆ ಎಂದು ಉಪಮುಖ್ಯಮಂತ್ರಿಗಳು ವಿವರಿಸಿದರು.
ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳ ಹೊಣೆಗಾರಿಕೆ ಉತ್ತಮ ಶಿಕ್ಷಣ ಸಂಸ್ಥೆಗಳಿಗೆ
ʻʻನಮ್ಮಲ್ಲಿರುವ ಉತ್ತಮ ಶೈಕ್ಷಣಿಕ ಸಂಸ್ಥೆಗಳು ಈ ಕರ್ನಾಟಕ ಪಬ್ಲಿಕ್ ಶಾಲೆಗಳ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿವೆ. ಎಲ್ಲೆಲ್ಲಿ ಶಿಕ್ಷಕರ ಕೊರತೆ ಇದೆ. ಅಲ್ಲಿ ಈ ಸಂಸ್ಥೆಗಳು ಶಿಕ್ಷಕರನ್ನು ನೇಮಿಸಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿ ವಹಿಸಿಕೊಳ್ಳಲಿವೆ. ಒಂದು ಶಿಕ್ಷಣ ಸಂಸ್ಥೆ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಒಂದು ಅಥವಾ ಎರಡು ಮೂರು ಶಾಲೆಗಳ ಜವಾಬ್ದಾರಿಯನ್ನು ಪಡೆಯಬಹುದಾಗಿದೆ. ಸರ್ಕಾರಿ ಶಿಕ್ಷಕರ ಜತೆಗೆ ಈ ಶಿಕ್ಷಣ ಸಂಸ್ಥೆಗಳು ಶಿಕ್ಷಕರನ್ನು ಒದಗಿಸಲಿವೆʼʼ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಈಗಾಗಲೇ ಇದರ ಬಗ್ಗೆ ಕೆಲವು ಶಿಕ್ಷಣ ಸಂಸ್ಥೆಗಳ ಜತೆ ಚರ್ಚೆ ಮಾಡಲಿದ್ದು, ಎಲ್ಲಾ ಪಬ್ಲಿಕ್ ಶಾಲೆಗಳು ಸರ್ಕಾರಿ ಶಾಲೆಯಾಗಿ ಕಾರ್ಯನಿರ್ವಹಿಸಲಿವೆ. ಈ ಮೂಲಕ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣಕ್ಕಾಗಿ ನಗರಗಳತ್ತ ವಲಸೆ ಬರುವುದನ್ನು ತಪ್ಪಿಸಲಾಗುವುದು. ಈ ವಿಚಾರವಾಗಿ ಸಮಿತಿ ರಚನೆ ಬಗ್ಗೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದರು.
1900 ಕೋಟಿ ರೂ. ಸಿಎಸ್‌ಆರ್ ನಿಧಿ ಲಭ್ಯತೆ
ಈಗಾಗಲೇ ನಮ್ಮ ಬಳಿ 1900 ಕೋಟಿ ರೂ.ಗಳಷ್ಟು ಸಿಎಸ್ಆರ್ ನಿಧಿ ನೀಡಲು ಹಲವು ಸಂಸ್ಥೆಗಳು ಮುಂದೆ ಬಂದಿವೆ. ಇದಕ್ಕಾಗಿ ನೀಲನಕ್ಷೆ ಸಿದ್ಧವಾಗಿದೆ. ಮುಂದಿನ 15ರಿಂದ 20 ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ಸಿಎಸ್ಆರ್ ಸಂಸ್ಥೆಗಳನ್ನು ಕರೆಸಿ ಸಭೆ ಮಾಡುತ್ತೇವೆ. ಈ ಶಾಲೆಗಳು ತಾಲೂಕು ಅಥವಾ ಜಿಲ್ಲಾ ಕೇಂದ್ರದಲ್ಲಿ ಇರುವುದಿಲ್ಲ. ಈ ಶಾಲೆಗಳೇನಿದ್ದರೂ ಹೊಬಳಿ ಅಥವಾ ಪಂಚಾಯ್ತಿ ಮಟ್ಟದಲ್ಲಿ ಮಾತ್ರ ಇರುತ್ತವೆ. ಒಂದು ದೊಡ್ಡ ಸಾಹಸಕ್ಕೆ ನಮ್ಮ ಸರ್ಕಾರ ಮುಂದಾಗಿದೆ ಎಂದು ಅವರು ತಿಳಿಸಿದರು.
ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದವರ ವಿರುದ್ಧ ಕಾನೂನು ಕ್ರಮ
ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಪ್ರಕರಣದಲ್ಲಿ ಸರ್ಕಾರ ಕಾನೂನು ಕ್ರಮ ಕೈಗೊಂಡಿದ್ದು, ಸಂಬಂಧಪಟ್ಟವರನ್ನು ಅಮಾನತು ಮಾಡಲಾಗಿದೆ. ಈ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ನಮ್ಮ ದೇಶದಲ್ಲಿ ಇಂತಹ ಘಟನೆಗಳಿಗೆ ಅವಕಾಶವಿಲ್ಲ. ಯಾರೇ ತಪ್ಪು ಮಾಡಿದರೂ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಪ್ರತಿಕ್ರಿಯೆ ನೀಡಿದರು.
ಅನುದಾನಿತ ಶಾಲೆಗಳಲ್ಲಿ ಸೂಕ್ತ ಮಕ್ಕಳ ನೋಂದಣಿ ಇರಬೇಕು
ಮಕ್ಕಳ ನೋಂದಣಿ ಕಡಿಮೆ ಹಿನ್ನೆಲೆಯಲ್ಲಿ ಸರ್ಕಾರಿ ಅನುದಾನಿತ ಶಾಲೆಗಳನ್ನು ಮುಚ್ಚಲು ನೋಟೀಸ್ ನೀಡಿರುವ ಬಗ್ಗೆ ಕೇಳಿದಾಗ, “ಯಾವುದೇ ಸೊಸೈಟಿ ಅಥವಾ ಟ್ರಸ್ಟ್ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದರೆ ಅವರಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ಅವರು ಸರ್ಕಾರದಿಂದ ಅನುದಾನ ಪಡೆಯುತ್ತಿರುವಾಗ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಬೇರೆ ಮಕ್ಕಳನ್ನು ಶಾಲೆಗೆ ಸೇರುವಂತೆ ಸೆಳೆಯಬೇಕು. ಅವರಿಗೆ ಅವರದೇ ಆದ ಹೊಣೆಗಾರಿಕೆ ಇರಬೇಕು. ಅವರು ಶಾಲೆ ನಿರ್ವಹಣೆ ಮಾಡಿದರೆ ಸಾಲದು” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಗುರುತಿಸಿದ್ದು, ಸಂಚಾರದ ಸಮಸ್ಯೆ ಇರುವುದಿಲ್ಲವೇ ಎಂದು ಕೇಳಿದಾಗ, “ನಾವು ಮನೆ ಬಾಗಿಲಲ್ಲೇ ಶಾಲೆ ಆರಂಭಿಸಲು ಆಗುವುದಿಲ್ಲ. ಸ್ಥಳೀಯ ಮಟ್ಟದಲ್ಲಿ ಅದರ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಬೆಂಗಳೂರು ಅಥವಾ ಇತರೆ ನಗರಗಳಿಗೆ ವಲಸೆ ಬರುವುದನ್ನು ತಪ್ಪಿಸುವ ಉದ್ದೇಶದಿಂದ ಪಂಚಾಯ್ತಿ ಮಟ್ಟದಲ್ಲಿ ಶಾಲೆ ಮಾಡುತ್ತಿದ್ದೇವೆ. ಕೆಲವು ಕಡೆಗಳಲ್ಲಿ ಬಸ್ ವ್ಯವಸ್ಥೆಗಳನ್ನು ಮಾಡಲಾಗುವುದು” ಎಂದು ತಿಳಿಸಿದರು.