Site icon Vistara News

BBMP Tax: ಬಿಬಿಎಂಪಿ ಆಸ್ತಿ ತೆರಿಗೆ ಬರೆ; ಸಚಿವ ರಾಮಲಿಂಗಾರೆಡ್ಡಿ ಕಿಡಿಕಿಡಿ!

14 Medium and Large Irrigation Projects Completed in Kalyana Karnataka says Minister Ramalinga reddy

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಸ್ವತ್ತುಗಳ ಆಸ್ತಿ ತೆರಿಗೆಯನ್ನು (BBMP Tax) ಪರಿಷ್ಕರಣೆ ಮಾಡಿರುವ ಬಿಬಿಎಂಪಿ ಕ್ರಮಕ್ಕೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಕಿಡಿಕಿಡಿಯಾಗಿದ್ದು, ಬಿಬಿಎಂಪಿ ವಿರುದ್ಧವೇ ಪತ್ರ ಬರೆದಿದ್ದಾರೆ.

ಬಿಬಿಎಂಪಿ ನಿಯಮಬಾಹಿರವಾಗಿ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಿದ್ದು, ಸಿಲಿಕಾನ್ ಸಿಟಿ ಜನತೆಗೆ ಆಸ್ತಿ ತೆರಿಗೆ ಬರೆ ಎಳೆದಿದೆ ಎಂದು ಪರೋಕ್ಷವಾಗಿ ಬೆಂಗಳೂರು ಅಭಿವೃದ್ಧಿ ಸಚಿವರಿಗೆ ರಾಮಲಿಂಗಾರೆಡ್ಡಿ ಅವರು ಚಳಿ ಬಿಡಿಸುವ ಯತ್ನ ಮಾಡಿದ್ದಾರೆ.

ಕಳೆದ 2016-17ನೇ ಸಾಲಿನಿಂದಲೇ ಪರಿಷ್ಕೃತ ದರವನ್ನು ಪಾವತಿಸುವಂತೆ ಆಸ್ತಿ ಮಾಲೀಕರಿಗೆ ಬಿಬಿಎಂಪಿ ನೋಟೀಸ್ ನೀಡುತ್ತಿದೆ. 7 ವರ್ಷಗಳ ಹಿಂದಿನ ತೆರಿಗೆ ವಸೂಲಿಗೆ ಈಗ ನೋಟೀಸ್ ನೀಡುತ್ತಿದೆ. ಬಿಬಿಂಪಿಯ ಈ ಅವೈಜ್ಞಾನಿಕ ಆಸ್ತಿ ತೆರಿಗೆ ಪರಿಷ್ಕರಣೆಯನ್ನು ವಾಪಸ್‌ ಪಡೆಯುವಂತೆ ರೆಡ್ಡಿ ಪತ್ರ ಬರೆದಿದ್ದಾರೆ. ನಗರಾಭಿವೃದ್ಧಿ ಸಚಿವ, ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಪತ್ರ ಬರೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ರೆಡ್ಡಿ ಪತ್ರದಲ್ಲಿ ಏನಿದೆ?

ಬಿಬಿಎಂಪಿ ಆಸ್ತಿ ತೆರಿಗೆ ಪರಿಷ್ಕರಣೆಯನ್ನು ಯಾವುದೇ ಮಾರ್ಗಸೂಚಿಗಳನ್ನು ಅನುಸರಿಸದೆ 2016-17 ಸಾಲಿನಿಂದ ಏಳು ವರ್ಷಗಳಿಗೆ ಪರಿಷ್ಕರಣೆ ನೋಟಿಸ್ ಜಾರಿ‌ ಮಾಡಿರುವುದು ಕಂಡುಬಂದಿದೆ. ಈ ರೀತಿ ಸಾರ್ವಜನಿಕರ ಮೇಲೆ ಒತ್ತಡ ತರುತ್ತಿರುವುದು ಉತ್ತಮವಲ್ಲ. ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆ (ಕೆಎಂಸಿ)-1976 ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಾಯ್ದೆ-2020 ಅನ್ವಯ ಒಮ್ಮಲೇ 7 ವರ್ಷಗಳ ಆಸ್ತಿ ತೆರಿಗೆಯನ್ನು ಪರಿಷ್ಕರಿಸುವುದು ನಿಯಮಬಾಹಿರವಾಗಿರುತ್ತದೆ.

ಬಿಬಿಎಂಪಿ ವಿಧಿಸುತ್ತಿರುವ ಆಸ್ತಿ ತೆರಿಗೆ ಪರಿಷ್ಕರಣೆ ಕುರಿತು ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಬೇಕು. ಈ ಮೂಲಕ ಬೆಂಗಳೂರಿನ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಸಂಬಂಧಿಸಿದವರಿಗೆ ಅಗತ್ಯ ನಿರ್ದೇಶನ ನೀಡಬೇಕು ಎಂದು ರಾಮಲಿಂಗರೆಡ್ಡಿ ಒತ್ತಾಯ ಮಾಡಿದ್ದಾರೆ.

ಯಾರ ಗಮನಕ್ಕೂ ಬಾರದಂತೆ ಆಸ್ತಿ ತೆರಿಗೆ ಹೆಚ್ಚಿಸಿರುವ ಬಿಬಿಎಂಪಿ, ಉಸ್ತುವಾರಿ ಸಚಿವರ ನಿರ್ದೇಶನದಂತೆ ತೆರಿಗೆ ಹೆಚ್ಚಳ ಮಾಡಿದೆ ಎನ್ನಲಾಗಿದೆ. ಬಿಬಿಎಂಪಿ ನಡೆಗೆ ಸ್ವಪಕ್ಷೀಯ ಹಿರಿಯ ಸಚಿವರಿಂದಲೇ ಈಗ ವಿರೋಧ ವ್ಯಕ್ತವಾಗಿದೆ.

ಇದನ್ನೂ ಓದಿ: Kannada Name plate: ಜ.15ರೊಳಗೆ ಕನ್ನಡ ನಾಮಫಲಕ ಕಡ್ಡಾಯವೆಂದು ಬಿಬಿಎಂಪಿ ಆದೇಶ; ಬೋರ್ಡ್‌ ರೇಟ್‌ ದುಪ್ಪಟ್ಟು

Exit mobile version