Site icon Vistara News

BBMP Teachers: ಬೋಧನಾ ಸಾಮರ್ಥ್ಯದಲ್ಲಿ ಕೊರತೆ ಇರುವ ಬಿಬಿಎಂಪಿ ಶಿಕ್ಷಕರಿಗೆ ಗೇಟ್‌ಪಾಸ್! ಟಿಇಟಿ ಪಾಸ್ ಆದರಷ್ಟೇ ಅವಕಾಶ

#image_title

ಬೆಂಗಳೂರು: ಇತ್ತೀಚೆಗಷ್ಟೇ ಎಸ್ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲಿ (BBMP Teachers) ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳ ಫಲಿತಾಂಶ ಮಾತ್ರ ಸಮಾಧಾನಕರವಾಗಿರಲಿಲ್ಲ. ಇದು ವಿದ್ಯಾರ್ಥಿಗಳ ಸಮಸ್ಯೆ ಅಲ್ಲ, ಬದಲಾಗಿ ಶಿಕ್ಷಕರ ಸಮಸ್ಯೆ ಎಂದು ಬಿಬಿಎಂಪಿಗೆ ಅರಿವಾಗಿದೆ. ಹೀಗಾಗಿ ಬೋಧನಾ ಸಾಮರ್ಥ್ಯದಲ್ಲಿ ಕೊರತೆ ಇರುವ ಶಿಕ್ಷಕರನ್ನು ಬದಲು ಮಾಡಲು ಪಾಲಿಕೆ ಸಜ್ಜಾಗಿದೆ.

ಬಿಬಿಎಂಪಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಇಳಿಕೆ ಆಗಿದೆ. ಇದರಿಂದ ಬೋಧನಾ ಸಾಮರ್ಥ್ಯದಲ್ಲಿ ಕೊರತೆ ಇರುವ ಗುತ್ತಿಗೆ ಆಧಾರದ ಶಿಕ್ಷಕರು ಮತ್ತು ಉಪನ್ಯಾಸಕರನ್ನು ತೆಗೆದು ಹಾಕಲು ಪಾಲಿಕೆ ನಿರ್ಧರಿಸಿದೆ. ಅವಶ್ಯಕ ಸಾಮರ್ಥ್ಯ ಇಲ್ಲದಿರುವ ಸಿಬ್ಬಂದಿಯನ್ನು ತೆಗೆದು ಹಾಕಿ ಹೊಸಬರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಬಿಬಿಎಂಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಬಿಬಿಎಂಪಿ ಶಾಲಾ ಕಾಲೇಜುಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ 728 ಶಿಕ್ಷಕರು ಮತ್ತು ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಖಾಸಗಿ ಸಂಸ್ಥೆ ಮೂಲಕ 11 ತಿಂಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿತ್ತು. ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.68 ರಷ್ಟು ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.64ರಷ್ಟು ಫಲಿತಾಂಶ ಬಂದಿದೆ. ಕಡಿಮೆ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಬಿಬಿಎಂಪಿ ಈ ನಿರ್ಧಾರಕ್ಕೆ ಬಂದಿದೆ.

ಟಿಇಟಿ ಪರೀಕ್ಷೆಯಲ್ಲಿ ಫೇಲ್‌ ಆದವರಿಗೆ ಇಲ್ಲ ಇನ್ಮುಂದೆ ಅವಕಾಶ!

ಶಿಕ್ಷಕರ ಅಹರ್ತಾ ಪರೀಕ್ಷೆಯಲ್ಲಿ (ಟಿಇಟಿ) ಉರ್ತ್ತೀಣರಾಗುವುದಕ್ಕೆ ಬಿಬಿಎಂಪಿ ಈ ಹಿಂದೆ ಅವಕಾಶ ನೀಡಿತ್ತು. ಆದರೆ ಇಲ್ಲಿಯವರೆಗೂ ಟಿಇಟಿ ಪರೀಕ್ಷೆಯಲ್ಲಿ ಪಾಸ್‌ ಆಗದ ಹಾಗೂ ವಿಷಯವಾರು ಬೋಧನೆಯಲ್ಲಿ ಕಳಪೆ ಸಾಧನೆ ಮಾಡಿದವರನ್ನು ತೆಗೆದು ಹಾಕುವುದಕ್ಕೆ ಬಿಬಿಎಂಪಿ ಈಗ ನಿರ್ಧರಿಸಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಬಿಬಿಎಂಪಿಯ ಸುಪರ್ಧಿಯಲ್ಲಿ ಒಟ್ಟು 163 ಶಾಲಾ- ಕಾಲೇಜುಗಳಿವೆ. ಕೋವಿಡ್‌ ಬಳಿಕ ಬಿಬಿಎಂಪಿ ಶಾಲಾ ಕಾಲೇಜುಗಳಿಗೆ ದಾಖಲಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಬಿಬಿಎಂಪಿಯ ಜವಾಬ್ದಾರಿ ಆಗಿದೆ. ಶಾಲಾ ಕಾಲೇಜುಗಳ ಶಿಕ್ಷಣದ ಗುಣಮಟ್ಟ ಹೆಚ್ಚಾಗಬೇಕಾದರೆ, ಉತ್ತಮವಾಗಿ ಪಾಠ ಮಾಡುವ ಶಿಕ್ಷಕರ ಅಗತ್ಯವಿದೆ.

ಇದನ್ನೂ ಓದಿ: Weather Report: ಪ್ರಮಾಣ ವಚನಕ್ಕೆ ವರುಣನ ಕಾಟ; ಮೇ 20-21ರಂದು ಗುಡುಗು, ಮಿಂಚು ಸಹಿತ ಭಾರಿ ಮಳೆ ಸಾಧ್ಯತೆ

ಟಿಇಟಿಯಲ್ಲಿ ಪಾಸ್‌ ಆಗದೇ ಇರುವ ಶಿಕ್ಷಕರನ್ನು ಸೇವೆಯಿಂದ ತೆಗೆಯುವಂತೆ ಸೂಚನೆ ನೀಡಲಾಗಿದೆ. ವಲಯ ಮಟ್ಟದಲ್ಲೇ ಅರ್ಹತೆ ಪರಿಶೀಲಿಸಲು ವಲಯ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಿಬಿಎಂಪಿ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದಲೂ ಶ್ಲಾಘನೆ ವ್ಯಕ್ತವಾಗಿದೆ.

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version