ಮೈಸೂರು: ಕರ್ನಾಟಕ ರಾಜ್ಯದ ಗೃಹ ಸಚಿವನಾಗುವ ಶಕ್ತಿ ತಮಗೆ ಇದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ (B.C. Patil) ಶುಕ್ರವಾರ ಹೇಳಿದ್ದಾರೆ.
ರೈತರೊಂದಿಗೊಂದು ದಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೈಸೂರು ತಾಲೂಕು ಜಯಪುರ ಹೋಬಳಿಯ ತಳೂರು ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ನಾನು ಗೃಹ ಖಾತೆ ಬಗ್ಗೆ ಚಿಂತನೆ ಮಾಡಿಲ್ಲ. ಗೃಹ ಖಾತೆ ನೀಡೋದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು. ನಾನು 25 ವರ್ಷ ಪೊಲೀಸ್ ಕೆಲಸ ಮಾಡಿದ್ದೇನೆ. ಗೃಹ ಖಾತೆ ಕೊಟ್ಟರೆ ಸಮರ್ಥವಾಗಿ ನಿಭಾಯಿಸುವೆ. ಗೃಹ ಖಾತೆಯನ್ನು ನಿಭಾಯಿಸುವ ಶಕ್ತಿ ಖಂಡಿತ ಇದೆ ಎಂದಿದ್ದಾರೆ. ಆದರೆ ಈ ಮಾತಿನಿಂದ ಭವಿಷ್ಯದಲ್ಲಿ ತೊಂದರೆ ಆಗಬಹುದು ಎನ್ನುವುದನ್ನು ಊಹಿಸಿದ ಬಿ.ಸಿ. ಪಾಟೀಲ್, ಆರಗ ಜ್ಞಾನೇಂದ್ರ ಕೂಡ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬೇಡ ಎಂದು ಸುಮ್ಮನಾಗಿದ್ದಾರೆ.
ಪಿಎಸ್‌ಐ ಪರೀಕ್ಷೆ ಅಕ್ರಮದ ಕುರಿತು ಪ್ರತಿಕ್ರಿಯೆ ನೀಡಿದ ಪಾಟೀಲ್, ಇದು ನಿಜಕ್ಕೂ ದುರಂತದ ವಿಚಾರ. ಇದನ್ನು ಕೇಳಿ ನನಗೆ ಶಾಕ್ ಆಯ್ತು. ಪೊಲೀಸ್ ಆಗಲು ಪ್ರತಿಭೆ, ಪ್ರಾಮಾಣಿಕತೆ, ದಕ್ಷತೆ ಬೇಕು. ದುಡ್ಡಿನಿಂದ ಬಂದರೆ ಹೇಗೆ? ಪ್ರಾಮಾಣಿಕವಾಗಿ ಕೆಲಸ ಮಾಡಲು ಆಗುತ್ತದಾ? ಜನ ಸಾಮಾನ್ಯರಿಗೆ ಹೇಗೆ ನ್ಯಾಯ ಸಿಗುತ್ತದೆ ? ನಾನು ಪೊಲೀಸ್ ಪರೀಕ್ಷೆ ಬರೆದಾಗ ಈ ರೀತಿ ಇರಲಿಲ್ಲ. ಈ ಹಗರಣದಲ್ಲಿ ಯಾರು ಶಾಮೀಲಾಗಿದ್ದಾರೆ ಅವರ ಮೇಲೆ ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: PSI Scam: ಹಗರಣ ನಡೆದ ಕಲಬುರಗಿ ಜಿಲ್ಲೆಗಿಂದು CM ಭೇಟಿ: ಇನ್ನೂ ಸಿಗದ ದಿವ್ಯಾ ಹಾಗರಗಿ