ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಈ ವಿಧಾನಸಭೆಯ ಅಂತಿಮ ಬಜೆಟ್ ಮಂಡಿಸಲು ದಿನಾಂಕವನ್ನು ಅಧಿಕೃವಾಗಿ ಆಯ್ಕೆ ಮಾಡಿದೆ. ಫೆಬ್ರವರಿ 17ರಂದು ರಾಜ್ಯದ ಬಜೆಟ್ ಮಂಡನೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಶುಕ್ರವಾರ ನಿರ್ಧಾರ ಮಾಡಲಾಗಿದೆ.
ಸಂಪುಟ ಸಭೆಯ ನಂತರ ಈ ಕುರಿತು ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ, ಬಜೆಟ್ ಅಧಿವೇಶನವು ಫೆಬ್ರವರಿ 10ರಿಂದ ಆರಂಭವಾಗುತ್ತದೆ. ಫೆಬ್ರವರಿ 17ಕ್ಕೆ ಬಜೆಟ್ ಮಂಡನೆಯಾಗುತ್ತದೆ. ಎಷ್ಟು ದಿನ ಅಧಿವೇಶನ ನಡೆಸಬೇಕು ಎಂದು ಇನ್ನೂ ನಿರ್ಧಾರವಾಗಿಲ್ಲ. ಎಷ್ಟು ದಿನ ಅಧಿವೇಶನ ನಡೆಸಬೇಕು ಎನ್ನುವುದನ್ನು ಮುಂದೆ ನಿರ್ಧಾರ ಮಾಡಲಾಗುತ್ತದೆ ಎಂದರು.
ಚುನಾವಣೆಗೆ ಕೆಲವೇ ತಿಂಗಳು ಇರುವುದರಿಂದ ಇದು ಸಹಜವಾಗಿಯೇ ಚುನಾವಣಾ ಬಜೆಟ್ ಆಗುತ್ತದೆ ಎನ್ನುವುದರಲ್ಲಿ ಅಚ್ಚರಿಯಿಲ್ಲ. ಈಗಾಗಲೆ ಕಾಂಗ್ರೆಸ್ ಎರಡು ಘೋಷಣೆಗಳನ್ನು ಮಾಡುವ ಮೂಲಕ ಜನರ ಗಮನ ಸೆಳೆದಿದೆ. ಅದಕ್ಕೆ ಸಿಕ್ಕಿರುವ ಸ್ಪಂದನೆಯನ್ನು ಮೀರುವಂತಹ ಘೋಷಣೆ ಮಾಡುವ ಅನಿವಾರ್ಯತೆ ಸರ್ಕಾರಕ್ಕಿದೆ. ಹಾಗೆಂದು ಸುಖಾಸುಮ್ಮನೆ ಘೋಷಣೆ ಮಾಡಿದರೆ, ಆರ್ಥಿಕವಾಗಿ ಸಾಧುವಲ್ಲ ಎಂಬ ಅಪಹಾಸ್ಯಕ್ಕೆ ಒಳಗಾಗುವ ಅಪಾಯವೂ ಇದೆ. ಎಲ್ಲ ವಿಚಾರಗಳನ್ನೂ ಗಮನದಲ್ಲಿರಿಸಿ, ಜನಪ್ರಿಯವೂ, ಜನಪರವೂ ಆದ ಬಜೆಟ್ ಮಂಡಿಸಲು ಸಿಎಂ ಬಸವರಾಜ ಬೊಮ್ಮಾಯಿ ಎಷ್ಟು ಸಫಲರಾಗುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.
ಸಂಪುಟ ಸಭೆಯ ಇತರೆ ನಿರ್ಣಯಗಳು
- ಸರ್ಕಾರ ಸಕ್ಕರೆ ನಿಯಂತ್ರಣಕ್ಕೆ ಅನುಮತಿ…
- ಹಣಕಾಸು ಸಂಸ್ಥೆಗೆ 54 .6 ಕೋಟಿ ಶೇರು ಬಂಡವಾಳ ಎತ್ತುವಳಿ ಮಾಡಲು ಅನುಮತಿ…
- 114 ನಗರ ಆರೋಗ್ಯ ಕೇಂದ್ರ ಸ್ಥಾಪಿಸಲು ನಿರ್ಧಾರ. ನಮ್ಮ ರಾಜ್ಯದಲ್ಲಿ 500 ಆಸ್ಪತ್ರೆಯ ಟಾರ್ಗೆಟ್ ಇದೆ.
- ಕಿತ್ತೂರಲ್ಲಿನ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ತೀರ್ಮಾನ. 50 ಹಾಸಿಗೆ ಯಿಂದ 100 ಹಾಸಿಗೆ ಮೇಲ್ದರ್ಜೆಗೆ ಇದಕ್ಕಾಗಿ 19 ಕೋಟಿ ರೂ. ನೀಡಲು ಒಪ್ಪಿಗೆ
- ಕಲ್ಲತಿ ಹಳ್ಳಿಗೆ ಅಡ್ಡಲಾಗಿ ಕಿರು ಬ್ಯಾರೇಜ್ ನಿರ್ಮಾಣಕ್ಕೆ ಒಪ್ಪಿಗೆ
- ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಎಲೆಕ್ಟ್ರಾನಿಕ್ ಉಪಕರಣ ಖರೀದಿ ಮಾಡಲು ಆಡಳಿತಾತ್ಮಕ ಒಪ್ಪಿಗೆ 15 ಕೋಟಿ ನೀಡಲು ಒಪ್ಪಿಗೆ ನೀಡಲಾಗಿದೆ
- ಬೆಂಗಳೂರು ಕಲಾಸಿಪಾಳ್ಯ ಬಸ್ ನಿಲ್ದಾಣ ನಿರ್ಮಾಣಕ್ಕೆ 63 ಕೋಟಿ ರೂ. ಅನುಮೋದನೆ…
- ನಾರಾಯಣ ಗುರು ಸ್ಮರಣಾರ್ಥ ಹಿಂದುಳಿದವ ವರ್ಗದ ರೆಸಿಡೆನ್ಸಿಯಲ್ ಶಾಲೆ ತೆರೆಯಲು ಅನುಮತಿ
- ಸೊರಬ, ಭಟ್ಕಳ, ಬಂಟ್ವಾಳ ಕುಂದಾಪುರದಲ್ಲಿ ರೆಸಿಡೆನ್ಸಿಯಲ್ ಶಾಲೆ ತೆರೆಯಲು ಅನುಮತಿ…
- ಕಲ್ಲು ಕ್ವಾರಿ ಲೀಸ್ ಅವಧಿ ವಿಸ್ತರಣೆ. ಕಲ್ಲು ಸಂಗ್ರಹ ಮಾಡಲು ಅವಕಾಶ
- ನಗರಾಭಿವೃದ್ಧಿ ವಿಧೇಯಕಕ್ಕೆ ತಿದ್ದುಪಡಿ
- ಮೃತ ಸೈನಿಕ ಕುಟುಂಬಕ್ಕೆ ನಿವೇಶ ಹಂಚಿಕೆ, ಮಾಜಿ ಸೈನಿಕರ ಕುಟುಂಬಕ್ಕೆ ನಿವೇಶನ ನೀಡಿಕೆ
- ಬಾಲ್ಯ ವಿವಾಹ ತಡೆಗೆ ಕಾರ್ಯಕ್ರಮ. ಹೆಣ್ಣುಮಕ್ಕಳಿಗೆ ಕೌಶಲ್ಯಾಧರಿತ ಶಿಕ್ಷಣ. ಒಟ್ಟು ೧೨.೫೧ ಕೋಟಿ ರೂ. ಅನುದಾನ