Site icon Vistara News

ಆರೋಗ್ಯ ಜಾಗ್ರತೆ, ತಿಥಿ ಊಟಕ್ಕೆ ಹೋಗ್ಬೇಡಿ, ದಾನ ಧರ್ಮ ಮಾಡ್ಬೇಡಿ: ಸಿ.ಟಿ. ರವಿಗೆ ಹೀಗೆ ಬುದ್ಧಿವಾದ ಹೇಳಿದ್ದು ಯಾರು?

CT Ravi hasanambe

ಹಾಸನ: ನಿಮಗೆ ಎಲ್ಲಿ ಹೋದ್ರೂ ಅನ್ನ ಸಿಗುತ್ತೆ. ಅನ್ನ, ಬಟ್ಟೆಗೆ ಯಾವತ್ತೂ ತೊಂದರೆ ಆಗೊಲ್ಲ: ಹೀಗೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರಿಗೆ ಒಬ್ಬರು ಹೇಳಿದ್ದಾರೆ. ಅದೇ ವ್ಯಕ್ತಿ, ಆರೋಗ್ಯ ಸ್ವಲ್ಪ ಜಾಗ್ರತೆ ಮಾಡಿಕೊಳ್ಳಿ, ತಿಥಿ ಊಟಕ್ಕೆ ಹೋಗ್ಬೇಡಿ, ಸಿಕ್ಕಾಪಟ್ಟೆ ಉದಾರತೆ ತೋರಿಸಬೇಡಿ ಅಂತ ಬುದ್ಧಿವಾದಾನೂ ಹೇಳಿದ್ದಾರೆ.

ರಾಜ್ಯದಲ್ಲಿ ಸಚಿವರಾಗಿದ್ದೋರು, ಪ್ರಭಾವಿ ಶಾಸಕರು, ಹಲವು ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಉಸ್ತುವಾರಿ ನೋಡಿಕೊಂಡವರು, ಈಗ ಗುಜರಾತ್‌ನಂಥ ಪ್ರಭಾವಿ ರಾಜ್ಯದ ಚುನಾವಣೆ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಿ.ಟಿ. ರವಿಗೆ ಅವರಿಗೆ ಹೀಗೆ ಬಹಿರಂಗವಾಗಿ ಬುದ್ಧಿ ಮಾತು ಹೇಳುವ ವ್ಯಕ್ತಿ ಯಾರಿರಬಹುದು ಎಂಬ ಕುತೂಹಲ ನಿಮಗಿದೆಯಾ? ಹಾಗಿದ್ದರೆ ಹೀಗೆ ಬನ್ನಿ.

ಸಿ.ಟಿ. ರವಿ ಅವರು ಬುಧವಾರ ಹಾಸನಾಂಬೆ ದೇವಸ್ಥಾನಕ್ಕೆ ಹೋಗಿದ್ದರು. ವರ್ಷದಲ್ಲಿ ಕೇವಲ ೧೪ ದಿನಗಳು ಮಾತ್ರ ತೆರೆದಿರುವ ದೇವಸ್ಥಾನದಲ್ಲಿ ಈ ಅವಧಿಯಲ್ಲಷ್ಟೇ ದೇವರ ದರ್ಶನಕ್ಕೆ ಅವಕಾಶವಿದೆ. ಬುಧವಾರ ದೇವಸ್ಥಾನಕ್ಕೆ ಹೋಗಿ ಹೊರಗೆರ ಬರುತ್ತಿದ್ದಂತೆಯೇ ಅವರಿಗೆ ಒಬ್ಬ ಶಾಸ್ತ್ರ ಹೇಳುವವನು ಕಾಣಿಸಿದ.

ಒಮ್ಮೆ ಕಾರು ಹತ್ತಿದ್ದ ರವಿ ಅವರು ರಸ್ತೆ ಪಕ್ಕದಲ್ಲಿ ಕುಳಿತಿದ್ದ ಶಾಸ್ತ್ರದವನನ್ನು ನೋಡಿದ ಕೂಡಲೇ ಕಾರಿನಿಂದ ಇಳಿದು ಅವನಲ್ಲಿಗೆ ಹೋದರು. ಅವರ ಬೆಂಬಲಿಗರೂ ಜತೆಗಿದ್ದರು. ಪಕ್ಕದಲ್ಲಿದ್ದ ನಾಯಕರು ಕಾಣಿಕೆ ಇಡಲು ಮುಂದಾದರೂ ರವಿ ಅವರು ಬಿಡಲಿಲ್ಲ. ತಾನೇ ಕಾಣಿಕೆ ಇಟ್ಟರು.

ಹಾಸನದ ಹಾಸನಾಂಬೆ ದೇವಸ್ಥಾನದ ಬಳಿ ಶಾಸ್ತ್ರ ಕೇಳಿದ ಬಿಜೆಪಿ ನಾಯಕ ಸಿ.ಟಿ. ರವಿ

ಶಾಸ್ತ್ರ ಕೇಳುವ ಮುನ್ನ ಶಾಸ್ತ್ರ ಹೇಳುವವನ ಹೆಸರು, ಊರು, ಎಷ್ಟು ವರ್ಷದಿಂದ ಈ ವೃತ್ತಿಯನ್ನು ಮಾಡುತ್ತಿದ್ದೀರಿ ಎಂದೆಲ್ಲ ವಿಚಾರಿಸಿದರು. ತಾನು ರಾಯಚೂರಿನ ಮಾನ್ವಿ ತಾಲೂಕಿನವನು, ೨೫ ವರ್ಷದಿಂದ ಶಾಸ್ತ್ರ ಹೇಳುತ್ತಿದ್ದೇನೆ ಎಂದು ಆತನೂ ಹೇಳಿದ.

ಬಳಿಕ ಕಾರ್ಡ್‌ ಒಂದನ್ನು ತೆಗೆಯಲು ಹೇಳಿ, ಅದರ ಆಧಾರದಲ್ಲಿ ಮತ್ತು ಹಸ್ತ ರೇಖೆ ನೋಡಿ ಶಾಸ್ತ್ರ ಹೇಳಿದ. ʻʻನಿಮ್ಮ ಹಸ್ತ ರೇಖೆ ಚೆನ್ನಾಗಿದೆ, ಎಲ್ಲೇ ಹೋದರೂ ಅನ್ನ ಸಿಗುತ್ತದೆ, ಬಟ್ಟೆ ಅನ್ನಕ್ಕೆ ನಿಮಗೆ ತೊಂದರೆಯಿಲ್ಲ. ನಿಮಗೆ ಎಲ್ಲವೂ ಒಳ್ಳೆಯದಾಗುತ್ತದೆʼʼ ಎಂದಿದ್ದಾನೆ ಶಾಸ್ತ್ರದವನು.

ʻʻನಿಮ್ಮ ಆರೋಗ್ಯ ಹಾಗೂ ನೀವು ಮಾಡುವ ಕೆಲಸದ ಬಗ್ಗೆ ಹೆಚ್ಚು ಜಾಗ್ರತೆ ವಹಿಸಿ. ದಾನ ಧರ್ಮ ಮಾಡೋದ್ರಲ್ಲಿ ಉದಾರತೆ ಬೇಡ, ತಿಥಿ ಊಟ ಮಾಡೋದಕ್ಕೆ ಹೋಗಬೇಡಿʼʼ ಎನ್ನುವುದು ಶಾಸ್ತ್ರದವನು ನೀಡಿದ ಎಚ್ಚರಿಕೆ. ಈಗ ಹಣದ ವಿಚಾರಕ್ಕೆ ಕೈ ಹಾಕಿದ್ದೀರಿ. ಅದರಲ್ಲಿ ಒಳ್ಳೆಯದಾಗುತ್ತದೆ ಎಂದೂ ಹೇಳಿದ್ದಾರೆ. ಇದನ್ನೆಲ್ಲ ಕೇಳಿಕೊಂಡು ನಗುತ್ತಲೇ ಹೊರಟಿದ್ದಾರೆ ಸಿ.ಟಿ. ರವಿ.

ಇದನ್ನೂ ಓದಿ | ಬಿ.ಕೆ. ಹರಿಪ್ರಸಾದ್‌ ಹಫ್ತಾ ವಸೂಲಿ ಗ್ಯಾಂಗ್‌ ಲೀಡರ್‌, ಕೊತ್ವಾಲ್‌ ರಾಮಚಂದ್ರನ ಶಿಷ್ಯ: ಸಿ.ಟಿ. ರವಿ ವಾಗ್ದಾಳಿ

Exit mobile version