Site icon Vistara News

Sini Shetty | ಪ್ರತಿಷ್ಠಿತ ಫೆಮಿನಾ ಮಿಸ್‌ ಇಂಡಿಯಾ ವರ್ಲ್ಡ್‌ ಗೆದ್ದು ಕರ್ನಾಟಕಕ್ಕೆ ಮರಳಿದ ಚೆಲುವೆ ಸಿನಿ ಶೆಟ್ಟಿ

ಬೆಂಗಳೂರು: ಪ್ರತಿಷ್ಠಿತ ಫೆಮಿನಾ ಮಿಸ್‌ ಇಂಡಿಯಾ ವರ್ಲ್ಡ್‌ 2022 ಪೆಜೆಂಟ್‌ನ ವಿಜೇತರಾದ ಬಳಿಕ ಕರ್ನಾಟಕದ ಚೆಲುವೆ ಸಿನಿ ಶೆಟ್ಟಿ (Sini Shetty) ತವರಿಗೆ ಮರಳಿದ್ದಾರೆ. ಮುಂಬೈನಲ್ಲಿ ನಡೆದ ಗ್ರ್ಯಾಂಡ್‌ ಫಿನಾಲೆಯಲ್ಲಿ 30 ಸ್ಪರ್ಧಿಗಳನ್ನು ಹಿಮ್ಮೆಟ್ಟಿಸಿ ಫೆಮಿನಾ ಮಿಸ್‌ ಇಂಡಿಯಾ ಆಗಿ ಹೊರ ಹೊಮ್ಮಿದ್ದಾರೆ. ಈ ಗೆಲುವಿನ ಮೂಲಕ ಸಿನಿ ಅವರಿಗೆ ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಅವಕಾಶ ಕೂಡ ದೊರೆತಿದೆ.

ಸಿನಿ ಮೂಲತಃ ಮಂಗಳೂರಿನವರಾಗಿದ್ದು, ಇಲ್ಲಿನ ಸಂಸ್ಕೃತಿ, ಪರಂಪರೆ ಮತ್ತು ಪ್ರಾದೇಶಿಕತೆಗಳು ಅವರ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಪ್ರಮುಖ ಕೊಡುಗೆ ನೀಡಿವೆ. 21 ವರ್ಷ ವಯಸ್ಸಿನ ಸಿನಿ, ಅಕೌಂಟಿಂಗ್‌ ಮತ್ತು ಫೈನಾನ್ಸ್‌ನಲ್ಲಿ ಪದವಿ ಪಡೆದಿದ್ದು, ಒಂದು ಮಾರ್ಕೆಟಿಂಗ್‌ ಕಂಪನಿಯಲ್ಲಿ ಪ್ರಾಡಕ್ಟ್‌ ಎಕ್ಸಿಕ್ಯೂಟಿವ್‌ ಆಗಿ ಕೆಲಸ ಮಾಡುತ್ತಿದ್ದರು. ಸದಾ ಹೊಸತನ್ನು ಕಲಿಯುವ ಆಸಕ್ತಿಯೇ ಇಂದು ಇಡೀ ದೇಶವೇ ಗುರುತಿಸುವಂತೆ ಮಾಡಿದೆ. ಮಹತ್ವಕಾಂಕ್ಷಿ ಮತ್ತು ಆತ್ಮವಿಶ್ವಾಸದ ವ್ಯಕ್ತಿತ್ವವಿರುವ ಸಿನಿ, ತಮಗೆ ಬೇಕಾದ್ದನ್ನು ಸಾಧಿಸುವ ಛಲ ಉಳ್ಳವರಾಗಿದ್ದಾರೆ.

ಸಿನಿ ಸಾಂಪ್ರದಾಯಿಕ ಕುಟುಂಬದಲ್ಲಿ ಬೆಳೆದಿದ್ದು ಮಾತ್ರವಲ್ಲದೇ, ಮಿಸ್ ಇಂಡಿಯಾ ಸ್ಪರ್ಧೆಯ ಪಯಣದಲ್ಲಿ ಅವರಿಗೆ ಹೆತ್ತವರಿಂದ ಸಂಪೂರ್ಣ ಬೆಂಬಲ ದೊರೆತಿದೆ. ನೃತ್ಯದ ಬಗ್ಗೆ ಆಳವಾದ ಒಲವು ಹೊಂದಿರುವ ಸಿನಿ 14 ನೇ ವಯಸ್ಸಿನಲ್ಲೇ ಭರತನಾಟ್ಯದಲ್ಲಿ ತನ್ನ ರಂಗಪ್ರವೇಶ ಮಾಡಿದ್ದರು. ಕೋವಿಡ್ ಸಂದರ್ಭದಲ್ಲಿ ಇವರ ನೃತ್ಯ ಪ್ರೀತಿ, ಇವರನ್ನು ನೃತ್ಯ ತರಬೇತುದಾರರು ಹಾಗೂ ಸಂಯೋಜಕಿಯನ್ನಾಗಿ ಬದಲಾಯಿಸಿತು.

ಸಿನಿ ಶೆಟ್ಟಿ ಅವರು ಸಮಾಜಸೇವಾ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದಾರೆ. ರೋಟರಾಕ್ಟ್ ಕ್ಲಬ್‌ನೊಂದಿಗೆ ಕೆಲಸ ಮಾಡಿದ್ದಾರೆ ಮತ್ತು ದೇಣಿಗೆ ಶಿಬಿರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಇತ್ತೀಚೆಗೆ ರಾಜ್ಯದ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದ ಇವರು, ಮಹಿಳಾ ಸಬಲೀಕರಣದ ಉಪಕ್ರಮಗಳನ್ನು ಮುನ್ನಡೆಸುವ ಹಾಗೂ ಸೌಲಭ್ಯವಂಚಿತ ಮಹಿಳೆಯರಿಗೆ ಮೂಲಭೂತ ಹಕ್ಕುಗಳನ್ನು ಒದಗಿಸುವ ಯೋಜನೆಗಳ ಭಾಗವಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದರು.

ಇದನ್ನೂ ಓದಿ | Miss India 2022 | ಮಿಸ್‌ ಇಂಡಿಯಾ ಆಗಿರುವ ಕನ್ನಡತಿ ಸಿನಿ ಶೆಟ್ಟಿ ಬಗ್ಗೆ ನಿಮಗೆಷ್ಟು ಗೊತ್ತು?

Exit mobile version