ಬೆಂಗಳೂರು: ಬೇಡ ಜಂಗಮ ಮೀಸಲಿಗಾಗಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಶುಕ್ರವಾರ ಬೃಹತ್ ಸಮಾವೇಶ ನಡೆಯಿತು. ಸಮಾವೇಶಕ್ಕಾಗಿ ಬೆಂಗಳೂರಿಗೆ ಹೊರಟಿದ್ದ ಸಾವಿರಾರು ಮಂದಿಯನ್ನು ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲೇ ವಶಕ್ಕೆ ಪಡೆದರು. ಆದರೂ ಬೆಂಗಳೂರು ನಗರದ ಸುತ್ತಮುತ್ತಲ ಬೇಡ ಜಂಗಮರು ಮಳೆಯ ನಡುವೆಯೂ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ | ಬೇಡ, ಜಂಗಮ ಪ್ರತಿಭಟನೆ: ಹೆದ್ದಾರಿಯಲ್ಲಿ ಹಾಹಾಕಾರ
ಪ್ರತಿಭಟನೆಗೆ ಕರೆ ನೀಡಿದ್ದ ಬೀದರ್‌ನ ಮೇಕಾರ್ ಮಠಾಧೀಶ ರಾಜೇಶ್ವರ ಶ್ರೀಗಳು ಮಾತನಾಡಿ, ಪ್ರತಿಭಟನೆ ದಿನಾಂಕ ಘೋಷಣೆ ಮಾಡಿದಾಗ ಮಠಕ್ಕೆ ಪೊಲೀಸ್ ಅಧಿಕಾರಿಗಳು ಬಂದಿದ್ದರು. ಏನು ತೆಗೆದುಕೊಂಡು ಹೋಗುತ್ತಿದ್ದೀರಾ? ಚಾಕು ಚೂರಿ ಇದೇಯಾ ಎಂದು ಪ್ರಶ್ನೆ ಮಾಡಿದ್ದರು. ಜೂನ್ 12ರಿಂದಲ್ಲೇ ಮಠಾಧೀಶರನ್ನು ತಡೆಯಲು ಮುಂದಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಈ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುತ್ತಿದ್ದು, ಬೇಡ ಜಂಗಮ ಸರ್ಟಿಫಿಕೇಟ್ ನೀಡಿದರೆ ಅದಕ್ಕೊಂದು ನ್ಯಾಯ ಸಿಗುತ್ತದೆ. ನಾವು ನಮಗಾಗಿ ಬದುಕಿಲ್ಲ, ಸಮಾಜಕ್ಕಾಗಿ ಬದುಕಿದ್ದೇವೆ. ಬೇಡ ಜಂಗಮರಿಗೆ ಅನ್ಯಾಯ ಮಾಡಿದರೆ ಶಾಪ ತಟ್ಟುತ್ತೆ. ನಮ್ಮದು ಒಂದು ದಿನದ ಹೋರಾಟವಲ್ಲ. ತಾಲೂಕು, ಜಿಲ್ಲಾ ಮಟ್ಟದಲ್ಲಿ ಹೋರಾಟ ಆರಂಭ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಆಗಮಿಸಿದ್ದು, ನಿಮ್ಮ ಬೇಡಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಶೀಘ್ರದಲ್ಲೆ ಅಧಿಕೃತ ಆದೇಶ ಹೊರಡಿಸಲಾಗುವುದೆಂದು ಭರವಸೆ ನೀಡಿದರು. ಆರು ತಿಂಗಳಿನಿಂದ ಇದಕ್ಕೆ ಪ್ರಯತ್ನ ನಡೆದಿದೆ. ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಆದೇಶ ಗಮನದಲ್ಲಿಟ್ಟುಕೊಂಡು ಆದೇಶ ಮಾಡುವುದಾಗಿ ಹೇಳಿದರು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬೇಡ ಜಂಗಮ ಸಂಘಟನೆಯ ಅಧ್ಯಕ್ಷ ಹಿರೇಮಠ್, ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮೇಲೆ ನಂಬಿಕೆ ಇದೆ. ಜಿಲ್ಲಾಧಿಕಾರಿಗಳ ಜತೆಗೆ ಸಭೆ ನಡೆಸಿ, ಅಧಿಕೃತ ಆದೇಶ ಹೊರಡಿಸುವುದಾಗಿ ಹೇಳಿದ್ದಾರೆ. ಆದೇಶ ಬರುವ ತನಕ ಬೇಡ ಜಂಗಮ ಜನರು ಹಾಗೂ ಎಲ್ಲಾ ಮಠಾಧೀಶರು ಇಲ್ಲಿಯೇ ಇರಲಿದ್ದೇವೆ. ಅಧಿಕೃತ ಆದೇಶ ಪತ್ರ ಹಿಡಿದುಕೊಂಡೇ ಊರಿಗೆ ವಾಪಸಾಗುತ್ತೇವೆ ಎಂದರು.
ಇದನ್ನೂ ಓದಿ | ಗುರು ರಾಯರ ಮಠದ ಹೆಸರಿನಲ್ಲಿಯೂ ಆನ್‌ಲೈನ್‌ನಲ್ಲಿ ವಂಚನೆ; ಇಬ್ಬರ ಬಂಧನ