ಬೆಳಗಾವಿ: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Election 2023) ಇನ್ನು ಕೇವಲ ಮೂರು ದಿನವಷ್ಟೇ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಆಯಾ ಪಕ್ಷಗಳು ಮತಬೇಟೆಗೆ ತೀವ್ರ ಕಸರತ್ತುಗಳನ್ನು ನಡೆಸುತ್ತಿವೆ. ಕೇಂದ್ರ ನಾಯಕರು ಸಹ ರಾಜ್ಯಕ್ಕೆ ಭೇಟಿ ನೀಡಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತಿದ್ದಾರೆ. ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ್ (Dr Ravi Patil) ಸಹ ತಮ್ಮ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುತ್ತಿದ್ದು, ಮನೆ ಮನೆ ಭೇಟಿ, ಸಮಾವೇಶಗಳ ಮೂಲಕ ಮತದಾರರನ್ನು ಸೆಳೆಯುತ್ತಿದ್ದಾರೆ. ಈ ಬಾರಿ ತಮ್ಮ ಆಯ್ಕೆ ಖಚಿತ ಎಂದು ಅವರು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ವಿಸ್ತಾರ ನ್ಯೂಸ್ ಜತೆ ಮಾತನಾಡಿದ ಡಾ. ರವಿ ಪಾಟೀಲ್, ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆಯಿದೆ. ಪಕ್ಷ ನನ್ನ ಮೇಲೆ ನಂಬಿಕೆ ಇಟ್ಟು, ನನಗೆ ಟಿಕೆಟ್ ನೀಡಿದೆ. ನಾನು ಸಹ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಬೆಳಗಾವಿಯನ್ನು ಔದ್ಯೋಗೀಕರಣಗೊಳಿಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Modi In Karnataka: ಕಾಂಗ್ರೆಸ್ ಸುಳ್ಳಿನ ಬಂಡಲ್; ನಂಜನಗೂಡಿನಲ್ಲಿ ಮೋದಿ ಕಿಂಡಲ್
ಅನಕ್ಷರತೆ, ನಿರುದ್ಯೋಗ ಸಮಸ್ಯೆಯನ್ನು ಬೆಳಗಾವಿಯಿಂದ ತೊಲಗಿಸುವ ಉದ್ದೇಶವನ್ನು ಹೊಂದಿದ್ದೇನೆ. ಬೆಳಗಾವಿಯ ಸರ್ವತೋಮುಖ ಅಭಿವೃದ್ಧಿಗಾಗಿ ನಾನು ಶ್ರಮಿಸುತ್ತೇನೆ. ಪಕ್ಷವನ್ನು ನೋಡಿ ಹಾಗೂ ಪಕ್ಷದ ಸಾಧನೆಗಳನ್ನು ನೋಡಿ ನನಗೆ ಮತ ನೀಡಿ ಎಂದು ಹೇಳಿದರು.
ಕ್ಷೇತ್ರದ ಅಭ್ಯುದಯಕ್ಕೆ ನಾನು ಶ್ರಮಿಸುತ್ತೇನೆ
ಅನಿಲ್ ಬೆನಕೆಯವರು ನನ್ನ ಸಹೋದರನಿದ್ದಂತೆ, ಅವರೂ ಸಹ ನನ್ನ ಜತೆಗೆ ಪ್ರಚಾರ ಮಾಡುತ್ತಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿಯ ತೆಕ್ಕೆಯಲ್ಲಿಯೇ ಇರುವುದು ನನ್ನ ಗೆಲುವಿಗೆ ಸಹಕಾರಿ ಆಗಲಿದೆ. ಒಟ್ಟಿನಲ್ಲಿ ಕ್ಷೇತ್ರದ ಅಭ್ಯುದಯಕ್ಕೆ ನಾನು ಶ್ರಮಿಸುತ್ತೇನೆ ಎಂದು ಡಾ. ರವಿ ಪಾಟೀಲ್ ಹೇಳಿದರು.
ನಾನು ಈಗಾಗಲೇ ಒಂದು ಸುತ್ತಿನ ಕ್ಷೇತ್ರ ಸಂಚಾರವನ್ನು ಮಾಡಿದ್ದೇನೆ. ಎಲ್ಲ ಕಡೆ ಬಿಜೆಪಿ ಪರವಾದ ಅಲೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ದೇಶಭಕ್ತರಾಗಿದ್ದಾರೆ. ಅವರ ಸಲುವಾಗಿ ನಾವು ಬಿಜೆಪಿಗೇ ಮತ ಹಾಕುತ್ತೇವೆ. ಬಿಜೆಪಿಯನ್ನು ಬಿಟ್ಟು ಬೇರೆ ಯಾವ ಪಕ್ಷಕ್ಕೂ ಮತವನ್ನು ಹಾಕುವುದಿಲ್ಲ ಎಂದು ಮತದಾರರು ಹೇಳುತ್ತಿದ್ದಾರೆ. ಇದೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಿದೆ ಎಂದು ಡಾ. ರವಿ ಪಾಟೀಲ್ ಹೇಳಿದರು.
ಬೆಳಗಾವಿಯಲ್ಲಿ ತಮ್ಮ ಕನಸಿನ ಅಭಿವೃದ್ಧಿ ಬಗ್ಗೆ ಡಾ. ರವಿ ಪಾಟೀಲ್ ನೀಡಿದ ಉತ್ತರ ಇಲ್ಲಿದೆ
ಇದನ್ನೂ ಓದಿ: Modi in Karnataka : ಸುಡಾನ್‌ನಿಂದ ರಕ್ಷಿಸಲ್ಪಟ್ಟ ಹಕ್ಕಿಪಿಕ್ಕಿ ಸಮುದಾಯದ ಜನರಿಂದ ಮೋದಿಗೆ THANKS
ಕ್ಷೇತ್ರದಲ್ಲಿ ಜನರು ಡಾ. ರವಿ ಪಾಟೀಲ್ ಎನ್ನುವುದಕ್ಕಿಂತಲೂ ಬಿಜೆಪಿ ಎಂದು ನನ್ನನ್ನು ನೋಡುತ್ತಿದ್ದಾರೆ. ಕಳೆದ 17 ವರ್ಷಗಳಿಂದ ನಾನು ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ. ಈಗ ನನಗೆ ಟಿಕೆಟ್ ಕೊಟ್ಟಿರುವುದಕ್ಕೆ ಖುಷಿ ಮತ್ತು ಹೆಮ್ಮೆಯಾಗಿದೆ. ನಾನು ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿ ತೋರಿಸುತ್ತೇನೆ ಎಂದು ಡಾ. ರವಿ ಪಾಟೀಲ್ ಪ್ರತಿಕ್ರಿಯೆ ನೀಡಿದರು.