Site icon Vistara News

ಬೆಳಗಾವಿ| ಕಣ್ಣಾಮುಚ್ಚಾಲೆ ಆಡುತ್ತಿರುವ ಚಿರತೆಗೆ Honey trap! : ಏನಿದು ಹೆಣ್ಣು ಚಿರತೆಯ ಯೂರಿನ್‌ ಆಪರೇಷನ್?

belagavi elephant operation

ಬೆಳಗಾವಿ: ಇಲ್ಲಿನ ಜಾಧವ ನಗರ ಪ್ರದೇಶವನ್ನು ಕಳೆದ ೨೨ ದಿನಗಳಿಂದ ಇನ್ನಿಲ್ಲದಂತೆ ಕಾಡುತ್ತಿರುವ ಚಿರತೆಯ ಕಣ್ಣಾಮುಚ್ಚಾಲೆ ಮುಂದುವರಿದಿದೆ. ಅತಿ ಬಲಿಷ್ಠ ಸರ್ಚಿಂಗ್‌ ಟೀಮ್‌, ಆನೆಗಳ ತಂಡದ ಕೂಂಬಿಂಗ್‌, ವಾಸನೆಯಲ್ಲೇ ಸರ್ವವನ್ನೂ ಗ್ರಹಿಸಬಲ್ಲ ನಾಯಿಗಳ ಪವರ್‌, ಹಂದಿ ಹಿಡಿಯುವವರ ತಾಕತ್ತುಗಳೆಲ್ಲವನ್ನೂ ಧಾರೆ ಎರೆದ ಬಳಿಕವೂ ಚಿರತೆಯೊಂದು ಮನುಷ್ಯನ ಎಲ್ಲ ಸಾಹಸಗಳನ್ನು ವ್ಯರ್ಥ ಮಾಡುತ್ತಿದೆ. ಅಚ್ಚರಿ ಎಂದರೆ ಮತ್ತೆ ಮತ್ತೆ ಚಿರತೆಯ ಹೆಜ್ಜೆ ಗುರುತುಗಳು ಕಾಣಿಸಿಕೊಳ್ಳುತ್ತಿವೆ, ಟ್ರ್ಯಾಪ್‌ ಕ್ಯಾಮೆರಾಗಳಲ್ಲಿ ಚಿರತೆಯ ದಾಟುವಿಕೆಗಳು ದಾಖಲಾಗುತ್ತಿವೆ. ಆದರೆ.. ಚಿರತೆ ಮಾತ್ರ ಕೈಗೆ ಸಿಗುತ್ತಿಲ್ಲ.

ಜಾಧವ್‌ ನಗರದಲ್ಲಿ ಒಬ್ಬ ಕಾರ್ಮಿಕನ ಮೇಲೆ ದಾಳಿ ಮಾಡುವ ಮೂಲಕ ಮೊದಲ ಬಾರಿಗೆ ತನ್ನ ಇರವನ್ನು ಪ್ರಕಟಪಡಿಸಿದ ಈ ಚಿರತೆಯನ್ನು ಹಿಡಿಯಲು ಮಾಡಿದ ಇದುವರೆಗಿನ ಎಲ್ಲ ಪ್ರಯತ್ನಗಳು ವಿಫಲವಾಗಿವೆ. ೧೫೦ ಎಕರೆ ಪ್ರದೇಶದ ಗಾಲ್ಫ್‌ ಕ್ಲಬ್‌ನ ಕುರುಚಲಿನ ನಡುವೆ ಚಿರತೆ ಅಡಗಿಕೊಂಡಿದೆ ಎಂದು ಅಲ್ಲೆಲ್ಲ ಜಾಲಾಡಲಾಗಿದೆ. ಬಳಿಕ ಅದು ಪಕ್ಕದ ಹಿಂಡಲಗಾದಲ್ಲಿ ಕಂಡುಬಂತು. ಈಗ ಕೆಲವು ದಿನಗಳಿಂದ ಆನೆ, ನಾಯಿ, ಹಂದಿ ಹಿಡಿಯುವ ತಂತ್ರಗಳನ್ನೆಲ್ಲ ನಡೆಸಿದರೂ ಫಲ ಸಿಕ್ಕಿಲ್ಲ.

ಈಗ ಇನ್ನೊಂದು ಹೆಜ್ಜೆಯಾಗಿ ‘ಆಪರೇಷನ್ ಹನಿಟ್ರ್ಯಾಪ್’ ಮಾಡಲಾಗುತ್ತಿದೆ. ಆಪರೇಷನ್‌ ಗಜಪಡೆಯ ಬಳಿಕ ಆರಂಭವಾಗಿರುವ ಈ ಕಾರ್ಯಾಚರಣೆ ತುಂಬ ಕುತೂಹಲಕಾರಿಯಾಗಿದೆ.

ಗಾಲ್ಫ್ ಮೈದಾನದಲ್ಲಿ ಪ್ರತ್ಯಕ್ಷವಾದ ಚಿರತೆ ಮೇಲ್ನೋಟಕ್ಕೆ ಗಂಡು ಚಿರತೆ ಎಂಬ ಶಂಕೆ ಇದ್ದು, ಹೀಗಾಗಿ ಬೋನುಗಳಿಗೆ ಹೆಣ್ಣು ಚಿರತೆಯ ಮೂತ್ರವನ್ನು ಸಿಂಪಡಿಸಿ ಸೆಳೆಯಲು ಯತ್ನಿಸುವ ಹೊಸ ತಂತ್ರ ಇದಾಗಿದೆ. ಇದಕ್ಕಾಗಿ ಭೂತರಾಮನಹಟ್ಟಿ ಕಿರು ಮೃಗಾಲಯದಲ್ಲಿನ ಎರಡು ಹೆಣ್ಣು ಚಿರತೆಗಳ ಮೂತ್ರವನ್ನು ತರಲಾಗಿದೆ.

250 ಎಕರೆ ಪ್ರದೇಶಗಳಲ್ಲಿ ಅಳವಡಿಸಿರುವ 8 ಬೋನುಗಳಿಗೆ ಹೆಣ್ಣು ಚಿರತೆಯ ಯೂರಿನ್ ಸ್ಪ್ರೇ ಮಾಡಲಾಗಿದೆ ಎಂದು ಎಸಿಎಫ್ ಮಲ್ಲಿನಾಥ ಕುಸನಾಳ ಹೇಳಿಕೆ ನೀಡಿದ್ದಾರೆ.

ಎಲ್ಲ ಕಾರ್ಯಾಚರಣೆ ಮುಂದುವರಿಕೆ
ಈ ನಡುವೆ ಆನೆ ಕಾರ್ಯಾಚರಣೆಯೂ ಮುಂದುವರಿಯಲಿದೆ. ಶಿವಮೊಗ್ಗ ಜಿಲ್ಲೆ ಸಕ್ರೆಬೈಲು ಆನೆ ಬಿಡಾರದಿಂದ ಬಂದಿರುವ ಆಲೆ, ಅರ್ಜುನ ಹೆಸರಿನ ಎರಡು ಆನೆಗಳನ್ನು ಬಳಸಿ ಶೋಧಿಸಲಾಗುತ್ತಿದೆ. ಎಂಟು ಟ್ರ್ಯಾಂಕುಲೈಸರ್ ಗನ್‌ಗಳು ಇದ್ದು ಮತ್ತೆ ನಾಲ್ಕು ಟ್ರಾಂಕುಲೈಸರ್ ಗನ್ ತರಿಸುತ್ತಿದ್ದೇವೆ ಎಂದು ಕುಸನಾಳ ತಿಳಿಸಿದ್ದಾರೆ. ಎರಡು ಕಿಲೋಮೀಟರ್ ವ್ಯಾಪ್ತಿಯ ಹಂದಿ ಹಿಡಿಯುವ ಬಲೆ ಬಳಕೆ ಮಾಡಲಾಗುತ್ತಿದೆ.

ಮತ್ತೆ ಚಿರತೆ ಹೆಜ್ಜೆ, ಸಂಚಾರ ಪತ್ತೆ
ಗುರುವಾರ ರಾತ್ರಿ ಗಾಲ್ಫ್ ಮೈದಾನದ ಗೇಟ್ ನಂಬರ್ 4ರಲ್ಲಿ ಚಿರತೆ ಹೆಜ್ಜೆ ಪತ್ತೆಯಾಗಿದ್ದರೆ, ಟ್ರ್ಯಾಪ್ ಕ್ಯಾಮರಾ ಸಂಖ್ಯೆ 3ರಲ್ಲಿ ಚಿರತೆ ಚಿತ್ರ ಸೆರೆ ಆಗಿದೆ.

ಇದನ್ನೂ ಓದಿ| Operation leopard | ಬೆಳಗಾವಿಯಲ್ಲಿ Meme ಹವಾ; ‘ಯಾರಪ್ಪಂದ್‌ ಏನೈತಿ, ಬೆಳಗಾವಿ ನಂದೈತಿ’ ಅಂತು ಚಿರತೆ

Exit mobile version