ಬೆಳಗಾವಿ: ನಟಿ ರಶ್ಮಿಕಾ ಮಂದಣ್ಣ ಅವರ ‘ಡೀಪ್‌ಫೇಕ್’ (Deepfake) ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ವಿಡಿಯೊ ಎಡಿಟ್ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ಬೆಳಗಾವಿಯಲ್ಲೊಬ್ಬ (Belagavi) ಯುವಕನು ಪ್ರೇಮ ನಿವೇದನೆ ಒಪ್ಪದ ಯುವತಿಯ ಫೋಟೊವನ್ನು ಅಶ್ಲೀಲವಾಗಿ ಚಿತ್ರಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಇದು ಕೂಡ ಡೀಪ್‌ಫೇಕ್‌ನಷ್ಟೇ ಅಪಾಯಕಾರಿಯಾಗಿದೆ ಎಂದು ಹೇಳಲಾಗುತ್ತಿದೆ.
ಬೆಳಗಾವಿ ಜಿಲ್ಲೆ ಖಾನಾಪುರ ಪಟ್ಟಣದ ಯುವಕ ಮಂಥನ್ ಪಾಟೀಲ್ (22) ಎಂಬಾತನು ಹೀನ ಕೃತ್ಯ ಎಸಗಿದ್ದಾನೆ. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಮಂಥನ್ ಪಾಟೀಲ್, ಖಾನಾಪುರ ಪಟ್ಟಣದ ಕಾಲೇಜು ವಿದ್ಯಾರ್ಥಿನಿಗೆ ಪ್ರೀತಿಸು ಎಂದು ಪೀಡಿಸುತ್ತಿದ್ದ. ಈತ ಎಷ್ಟು ಗೋಗರೆದರೂ ಯುವತಿಯು ಪ್ರೀತಿಯನ್ನು ಒಪ್ಪದ ಕಾರಣ ಆಕೆಯ ಫೋಟೊವನ್ನು ಬೇರೊಂದು ನಗ್ನ ಫೋಟೊ ಜತೆ ಎಡಿಟ್ ಮಾಡಿದ್ದಾನೆ. ಅಷ್ಟೇ ಅಲ್ಲ, ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು, ಅದನ್ನು ಅಪ್‌ಲೋಡ್ ಮಾಡಿದ್ದಾನೆ.
ಎಡಿಟ್ ಮಾಡಲಾದ ಫೋಟೊವನ್ನು ಯುವತಿಗೆ ತೋರಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಆಗಲೂ ಯುವತಿಯು ಪ್ರೀತಿಯನ್ನು ನಿರಾಕರಿಸಿದ್ದಾಳೆ. ಹಾಗೆಯೇ, ಯುವಕನಿಗೆ ಬಾಯಿಗೆ ಬಂದಹಾಗೆ ಬೈದಿದ್ದಾಳೆ. ಇದರಿಂದ ಮತ್ತಷ್ಟು ಕೆರಳಿದ ಮಂಥನ್ ಪಾಟೀಲ್, ಯುವತಿಯ ಮೂವರು ಗೆಳತಿಯರ ಫೋಟೊಗಳನ್ನೂ ನಗ್ನವಾಗಿ ಚಿತ್ರಿಸಿದ್ದಾನೆ. ಮೂವರು ಗೆಳತಿಯರ ಫೋಟೊಗಳನ್ನೂ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ.
ಇದನ್ನೂ ಓದಿ: DeepFake: ಡೀಪ್‌ಫೇಕ್ ವಿಡಿಯೊ ಮಾಡಿದ್ರೆ 3 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ ಪಕ್ಕಾ!
ಡೀಪ್‌ಫೇಕ್ ಮಾದರಿಯಲ್ಲೇ ಮತ್ತೊಂದು ಆ್ಯಪ್‌ನಲ್ಲಿ ಯುವಕನು ಯುವತಿಯರ ಫೋಟೊಗಳನ್ನು ಎಡಿಟ್ ಮಾಡಿದ್ದಾನೆ. ಪ್ರೀತಿಸು ಎಂದು ಯುವತಿ ಮೇಲೆ ಒತ್ತಡ ಹೇರುವುದು, ಪ್ರೀತಿ ಒಪ್ಪದಿದ್ದರೆ ಫೋಟೊಗಳನ್ನು ವೈರಲ್ ಮಾಡುತ್ತೇನೆ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಇದಾದ ಬಳಿಕ ಯುವತಿಯು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ನಂತರ ಖಾನಾಪುರ ಪೊಲೀಸರು ಮಂಥನ್ ಪಾಟೀಲ್‌ನನ್ನು ಬಂಧಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ