ವಿಧಾನ ಪರಿಷತ್: ಅನೇಕ ತಿಂಗಳುಗಳ ಹೋರಾಟದ ನಂತರ ವಿಧಾನ ಪರಿಷತ್ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಕೊನೆಗೂ ಅಧಿಕಾರ ಸ್ವೀಕರಿಸಿದ್ದಾರೆ. ಬುಧವಾರ ನಡೆದ ಔಪಚಾರಿಕ ಚುನಾವಣಾ ಪ್ರಕ್ರಿಯೆಯಲ್ಲಿ ವಿಧಾನ ಪರಿಷತ್ ಸಭಾಪತಿಯಾಗಿ, ರಾಜ್ಯದ ಅತ್ಯಂತ ಹಿರಿಯ ಪರಿಷತ್ ಸದಸ್ಯ ಹೊರಟ್ಟಿ ವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ, ಹಂಗಾಮಿ ಸಭಾಪತಿ ರಘುನಾಥರಾವ್ ಮಲ್ಕಾಪೂರೆ, ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಸೇರಿ ಅನೇಕ ನಾಯಕರು ಸಭಾಪತಿ ಕುರ್ಚಿಯಲ್ಲಿ ಹೊರಟ್ಟಿ ಅವರನ್ನು ಕೂರಿಸಿದರು.
ಜೂನ್ 15ರಂದು ಶಿಕ್ಷಕರ ಕ್ಷೇತ್ರದಿಂದ ಸತತ ಎಂಟನೇ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಇಲ್ಲಿವರೆಗೆ ಜೆಡಿಎಸ್‌ನಿಂದ ಆಯ್ಕೆಯಾಗುತ್ತಿದ್ದ ಹೊರಟ್ಟಿ ಈ ಬಾರಿ ಬಿಜೆಪಿ ಧ್ವಜ ಹಿಡಿದಿದ್ದರು. ಬಿಜೆಪಿ ನಾಯಕರೇ ಆಹ್ವಾನಿಸಿ, ಸಭಾಪತಿ ಮಾಡುವುದಾಗಿ ಆಶ್ವಾಸನೆ ನೀಡಿದ್ದರು.
ಆದರೆ ಜಯಗಳಿಸಿ ಆರು ತಿಂಗಳಾದರೂ ಬಿಜೆಪಿಯಿಂದ ಸಭಾಪತಿ ಕುರಿತು ಚರ್ಚೆ ಮುಂದುವರಿದಿರಲಿಲ್ಲ. ಪಕ್ಷದ ಮೂಲಗಳ ಪ್ರಕಾರ, ಹಂಗಾಮಿ ಸಭಾಪತಿ ರಘುನಾಥರಾವ್ ಮಲ್ಕಾಪೂರೆ ಅವರೇ ಮುಂದುವರಿಯಲು ಆಸಕ್ತಿ ಹೊಂದಿದ್ದರು. ಈ ಪ್ರಯತ್ನ ನಂತರದಲ್ಲಿ ಕುರುಬ ವರ್ಸಸ್ ಲಿಂಗಾಯತ ಎನ್ನುವ ಹಂತಕ್ಕೆ ಬಂದು ನಿಂತಿತು.
ಮಲ್ಕಾಪೂರೆ ಅವರು ಕುರುಬ ಸಮುದಾಯಕ್ಕೆ ಸೇರಿದವರು. ಕುರುಬ ಸಮುದಾಯಕ್ಕೆ ಪಕ್ಷದಲ್ಲಿ ಪ್ರಾಶಸ್ತ್ಯ ಸಿಕ್ಕಿಲ್ಲ, ಕೆ.ಎಸ್. ಈಶ್ವರಪ್ಪ ಅವರೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ತಮ್ಮನ್ನೇ ಮುಂದುವರಿಸುವಂತೆ ಮಲ್ಕಾಪೂರೆ ಕೋರಿದ್ದರು ಎನ್ನಲಾಗಿದೆ. ಇದೆಲ್ಲ ಕಾರಣಕ್ಕೆ ಪ್ರಕ್ರಿಯೆ ವಿಳಂಬವಾಗಿತ್ತು.
ಕೊನೆಗೂ ವೀರಶೈವ ಲಿಂಗಾಯತ ಸಮುದಾಯದ ಹೊರಟ್ಟಿ ಅವರನ್ನು ಆಯ್ಕೆ ಮಾಡಲು ಬಿಜೆಪಿ ನಿರ್ಧಾರ ಮಾಡಿದೆ. ಮಾತು ಕೊಟ್ಟು ಕರೆತಂದವರನ್ನು ಸಭಾಪತಿ ಮಾಡದೇ ಇರುವುದು ಸರಿಯಲ್ಲ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ದೂ ಈ ನಡೆಗೆ ಕಾರಣ ಎನ್ನಲಾಗುತ್ತಿದೆ.
ಬಸವರಾಜ ಹೊರಟ್ಟಿ ಸಭಾಪತಿಯವರನ್ನಾಗಿ ವೈ ಎ, ನಾರಾಯಣಸ್ವಾಮಿ, ತೇಜಸ್ವಿನಿ ಗೌಡ, ಶಾಂತಾರಾಮ್, ಅ ದೇವೇಗೌಡ ಅವರಿಂದ ಪ್ರಸ್ತಾಪ ಸೂಚನೆ ಮಂಡಿಸಲಾಯಿತು. ಅಯನೂರು ಮಂಜುನಾಥ್, ಆರ್ ಶಂಕರ್, ಎಸ್. ವ್ಹಿ. ಸಂಕನೂರು, ಪ್ರದೀಪ್ ಶೆಟ್ಟರ್ ಅವರಿಂದ ಅನುಮೋದನೆ ಮಾಡಲಾಯಿತು.
ಎಂಟನೇ ಬಾರಿ ಜಯಗಳಿಸಿರುವ ಹೊರಟ್ಟಿ ಈಗಿನ ಅವಧಿ ಪೂರ್ಣಗೊಳಿಸುವಾಗ ಪರಿಷತ್‌ನಲ್ಲಿ ಬರೊಬ್ಬರಿ 48 ವರ್ಷ ಕಳೆದಂತಾಗುತ್ತದೆ. ರಾಜ್ಯವಷ್ಟೆ ಅಲ್ಲದೆ ದೇಶದ ಅತ್ಯಂತ ಹಿರಿಯ ವಿಧಾನ ಪರಿಷತ್ ಸದಸ್ಯರೊಬ್ಬರು ಈಗ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಅಲ್ಲಿ ಮೆಸ್ಸಿ ಮೆಸ್ಸಿ ಎಂಬ ಸಮುದ್ರ ಘೋಷ ಉಕ್ಕುತಿದ್ದರೆ ಅವನು ಮಾತ್ರ ತಣ್ಣಗೆ ಎಂಬಪೆಯ ಭುಜದ ಮೇಲೆ ಕೈಇಟ್ಟಿದ್ದ!
ಸಭಾಪತಿಯಾಗಿ ಬಸವರಾಜ ಹೊರಟ್ಟಿ ಆಯ್ಕೆಯಾದ ನಂತರ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸರ್ವಾನುಮತದಿಂದ ಹೊರಟ್ಟಿ ಆಯ್ಕೆ ಆಗಿದ್ದು ಸಂತೋಷ. ತಮ್ಮ ಹಿರಿತನಕ್ಕೆ ಸದನ ಮನ್ನಣೆ ಕೊಟ್ಟಿದೆ. ಹಿರಿಯ ಸದಸ್ಯರಾಗಿ ಹಲವಾರು ಜವಾಬ್ದಾರಿ ನಿಭಾಯಿಸಿದ್ದೀರಿ. ಎಲ್ಲರ ವಿಶ್ವಾಸ, ಸ್ನೇಹಿ ಗಳಿಸಿದ್ದಕ್ಕೆ ಅವಿರೋಧ ಆಯ್ಕೆ ಆಗಿದೆ. ಇದಕ್ಕೆ ಆಡಳಿತ, ವಿಪಕ್ಷಗಳಿಗೆ ಧನ್ಯವಾದಗಳು.
ಮೊದಲ ಚುನಾವಣೆಯಿಂದಲೂ ನಿಮ್ಮನ್ನು ನಾನು ಬಲ್ಲೆ. ಶಿಕ್ಷಕರ ಸಂಘಟನೆಯಲ್ಲಿ ಒಳ್ಳೆಯ ಕೆಲಸ ಮಾಡಿ, ಶಿಕ್ಷಕರ ಪ್ರೀತಿಗೆ ಪಾತ್ರರಾಗಿದ್ದೀರಿ. ಮೊದಲ ಚುನಾವಣೆ ಗೆದ್ದ ಮೇಲೆ ಎಂದಿಗೂ ಹಿಂದೆ ತಿರುಗಿ ನೋಡಿಲ್ಲ. ಪ್ರತಿ ಚುನಾವಣೆಯಲ್ಲಿ ಹೆಚ್ಚೆಚ್ಚು ಜನರ ಪ್ರೀತಿ ಗಳಿಸಿದ್ದೀರಿ. ಇದು ಆದರ್ಶಪ್ರಾಯವಾದದು.
ಶಿಕ್ಷಕರ ಪ್ರತಿನಿಧಿಯಾಗಿ, ಆಡಳಿತದಲ್ಲಿ ಕಠಿಣ ನಿರ್ಧಾರ ಮಾಡಿದ್ದೀರಿ. ಶಿಕ್ಷಕರಾಗಿ ವರ್ಗಾವಣೆ, ಶಿಕ್ಷಕರ ಸೌಲಭ್ಯಗಳ ಚಿಂತನೆ ಮಾಡಿದ್ದೀರಿ. ಸ್ವಾತಂತ್ರ್ಯ ಭಾರತದ ನಂತರ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಕೊಡುಗೆ ಕೊಟ್ಟಿದ್ದು ಬಸವರಾಜ ಹೊರಟ್ಟಿ ಅವರದ್ದು. ನೇರ ನಿಷ್ಠುರ ಮಾತುಗಾರ. ಹೊರಟ್ಟಿಯವರು ಎಲ್ಲ ಸಿಎಂಗಳ ಜತೆಗೂ ಆತ್ಮೀಯರಾಗಿದ್ದಾರೆ. ಆದ್ದರಿಂದ ಅವರ ಕೆಲಸ ಆಗುತ್ತವೆ. ಹಾಲಿ, ಮಾಜಿ ಸಿಎಂ ಜತೆಗೆ ಆತ್ಮೀಯತೆ ಹೊಂದಿರುತ್ತಾರೆ. ಈ ಕಲೆ ನಮಗೂ ಸಹ ಹೇಳಿಕೊಡಿ. ನಾವು ಆಡಳಿತದಲ್ಲಿದ್ದಾಗ ಕೆಲಸಗಳು ಆಗುತ್ತವೆ. ಆದರೆ ವಿಪಕದಲ್ಲಿದ್ದಾಗಲೂ ಹೇಗೆ ನಮ್ಮ ಕೆಲಸ ಮಾಡಿಸಿಕೊಳ್ಳಬೇಕು ಎಂದು ನಮಗೂ ಹೇಳಿಕೊಡಿ ಎಂದರು.
ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಶಿಕ್ಷಕರೊಬ್ಬರು ಶಿಕ್ಷಣ ಮಂತ್ರಿ, ಆಗಿ ಹಂತಕ್ಕೆ ಬಂದಿದ್ದು ಇತಿಹಾಸ. ಹೊರಟ್ಟಿ ಅವರ ಸಾಧನೆ, ಇನ್ನೊಬ್ಬರು ಮಾಡುತ್ತಾರೆ ಎಂದು ಹೇಳಲಾಗದು. ಸುದೀರ್ಘ ರಾಜಕಾರಣದ ಅನುಭವ ಸದನಕ್ಕೆ ಸಿಕ್ಕಿದೆ. ಆಳವಾದ ಅಧ್ಯಯನ, ಅನುಭವ ಸದನ ಮುನ್ನಡೆಸಲು ಸಹಾಯ ಆಗಿದೆ. ಸದನದಲ್ಲಿ ಗುಣಾತ್ಮಕ ವಿಷಯಗಳು ಚರ್ಚೆ ಆಗುತ್ತವೆ. ಅದು ನಿಮ್ಮ ಮೂಲಕ ಆಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಟಿಪ್ಪಣಿ ಕೇಳದ ಸ್ಥಿತಿ ಯಾರಿಗೂ ಬರಬಾರದು. ವಿಪಕ್ಷಕ್ಕೂ ನಾವು ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಹಂಗಾಮಿ ಸಭಾಪತಿ ಆಗಿದ್ದ ರಘುನಾಥರಾವ್ ಮಲಕಾಪೂರೆ ಅವರಿಗೆ ಅಭಿನಂದನೆಗಳು. ವಿಪಕ್ಷಗಳಿಗೆ ಅವಕಾಶ ಕೊಡುತ್ತಾರೋ ಇಲ್ಲವೋ ಎಂದು, ಹೊಸದಾಗಿ ಬಂದಾಗ ಸಹಜವಾದ ಕುತೂಹಲ ಇರುತ್ತದೆ. ಆದರೂ ವಿಪಕ್ಷಗಳಿಗೆ ಅವಕಾಶ ಕೊಟ್ಟಿದ್ದಾರೆ.
ಸಭಾಪತಿಯಾಗಿ ಆಯ್ಕೆ ಆಗಬೇಕಾದರೆ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಕೊಡಬೇಕು. ರಚನಾತ್ಮಕ ಚರ್ಚೆಗೆ ಅವಕಾಶ ಆಗಬೇಕು. ನಿಮ್ಮನ್ನು ಕ್ರೀಡಾಪಟು ಆಗಿ ನಾವು ನೋಡಿದ್ದೇವೆ. ಕಬ್ಬಡಿ ಆಡಲು ಬಂದಿದ್ದೀರಿ. ರಾಮಕೃಷ್ಣ ಹೆಗಡೆ ಅವರ ಗರಡಿಯಲ್ಲಿ ಪಳಗಿದವರು. ಆದ್ಧರಿಂದ ನಿಮ್ಮ ಮೇಲೆ ನಿರೀಕ್ಷೆಗಳಿವೆ. ಅದಕ್ಕೇ ನಾವು ಅಭ್ಯರ್ಥಿ ಹಾಕಿಲ್ಲ. ಆದರೆ ವಿಪಕ್ಷಗಳಿಗೆ ಮಾತಾಡಲು ಅವಕಾಶ ಕೊಡಿ. ವಿಪಕ್ಷ ಮಾಡಿರುವ ಟೀಕೆ, ಟಿಪ್ಪಣಿಗಳನ್ನು ಆಡಳಿತ ಪಕ್ಷದವರು ಸ್ವೀಕರಿಸಬೇಕು. ಆದರೆ ಎಷ್ಟರಮಟ್ಟಿಗೆ ಕೆಳಗಿನಿಂದ ಮೇಲಿನವರೆಗೆ ಸಹಿಸುತ್ತಾರೆ ಗೊತ್ತಿಲ್ಲ. ಯಾಕೆಂದರೆ ಕೆಲವು ಇಲ್ಲಿಯವರೆಗೆ ಸುದ್ದಿಗೋಷ್ಟಿ ನಡೆಸಿಲ್ಲ ಎಂದು ಪ್ರಧಾನಿ ಮೋದಿಯವರನ್ನು ಟೀಕಿಸಿದರು.
ಜೆಡಿಎಸ್‌ನ ಭೋಜೇಗೌಡ ಮಾತನಾಡಿ, ನಿಮ್ಮ ಅನುಭವ ನಿರಂತರವಾಗಿರುವುದು. ಚಿಂತಕರ ಚಾವಡಿ ಇದು. ಎಲ್ಲ ಸಿಎಂಗಳಿಗೂ ಬೇಕಾದ ವ್ಯಕ್ತಿತ್ವ. ಪದೇಪದೇ ಆಡಳಿತ ಪಕ್ಷಕ್ಕೆ ಚುಚ್ಚುವುದನ್ನೂ ನಾವು ಕಡಿಮೆ ಮಾಡಬೇಕಾಗುತ್ತದೆ. ಇಸ್ರೇಲ್‌ನಲ್ಲಿ 10 ಸಾವಿರ ದನಕ್ಕೆ ಒಬ್ಬ ಕಾಯುವ ಇದ್ದಾನೆ. ಇಲ್ಲಿ 75 ಜನರಿಗೆ ನೀವು ಒಬ್ಬರೇ ಇದ್ದೀರ ಎಂದರು. ನಮ್ಮನ್ನು ದನಕ್ಕೆ ಹೋಲಿಸಿದಿರಲ್ಲ ಎಂದು ಕೆಲ ಸದಸ್ಯರು ಹೇಳಿದಾಗ, ಗೋವು ಶ್ರೇಷ್ಠವಾದ ಪ್ರಾಣಿ ಎಂದು ಭೋಜೇಗೌಡ ಸಮಜಾಯಿಷಿ ನೀಡಿದರು.
ಜೆಡಿಎಸ್‌ನ ಮರಿತಿಬ್ಬೇಗೌಡ ಮಾತನಾಡಿ, ನೀವು ಬೇರೆ ಪಕ್ಷದಲ್ಲಿ ಇದ್ದರೂ ಕೂಡ ನನಗೆ ವೋಟ್ ಕೊಡಿ ಎಂದು ಹೇಳಿದಿರಿ. ಚುನಾವಣೆ ಸಂದರ್ಭದಲ್ಲಿ ವೋಟ್ ಕೇಳಿದಿರಿ. ಇದನ್ನು ನಾನು ನೆನಪು ಮಾಡಿಕೊಳ್ಳುತ್ತೇನೆ. ಶಿಕ್ಷಣ ಕ್ಷೇತ್ರದಿಂದ ಆಯ್ಕೆ ಬಂದಿರಿ. ವಿಧಾನಸಭೆಗೆ ಹೋಗಲು ಮನಸ್ಸು ಮಾಡಿಲ್ಲ. ಇಲ್ಲಿಯೇ ಉಳಿದುಕೊಂಡಿರಿ. ವಿಧಾನಸಭೆಗೆ ಆಗಮಿಸುವಂತೆ ನನ್ನನ್ನು ಒತ್ತಾಯ ಮಾಡುತ್ತಾ ಇದ್ದಾರೆ. ಆ ಕ್ಷೇತ್ರಕ್ಕೆ ನಿಲ್ಲಿ, ಈ ಕ್ಷೇತ್ರಕ್ಕೆ ನಿಲ್ಲಿ ಎಂದು ಹೇಳುತ್ತಾರೆ. ಆದರೆ ನಾನು ನಿಮ್ಮ ಶಿಷ್ಯ. ಈ ಸದನ ಬಿಟ್ಟು ಹೋಗುವುದಿಲ್ಲ. ನಿಮ್ಮ ಹಾದಿಯಲ್ಲಿ ನಾನು ಸಾಗುತ್ತೇನೆ ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಎನ್. ರವಿಕುಮಾರ್, ಅವರ ಹಾದಿಯಲ್ಲೇ ಬನ್ನಿ ಎಂದು ಬಿಜೆಪಿಗೆ ಆಹ್ವಾನ ನೀಡಿದರು. ಮಾತು ಮುಂದುವರಿಸಿದ ಮರಿತಿಬ್ಬೆಗೌಡ, ಇಷ್ಟು ದಿನ ನಮ್ಮ ಜತೆ ಇದ್ದಿರಿ. ಈಗ ಬಿಜೆಪಿ ಕಡೆ ಹೋಗಿದ್ದೀರ. ಬಿಜೆಪಿಯವರು ಇಳಿ ವಯಸ್ಸಿನಲ್ಲಿ ನಿಮ್ಮನ್ನು ಚೆನ್ನಾಗಿ ನಡೆಸಿಕೊಳ್ಳಲಿ ಎಂದು ನಾನು ಆಶಿಸುತ್ತೇನೆ ಎಂದರು.
ಇದನ್ನೂ ಓದಿ | Prerane | ಸಂಪೂರ್ಣವಾದ ತೊಡಗುವಿಕೆಯೇ ಆನಂದದ ಮೂಲ