ಬೆಳಗಾವಿ: ಶ್ರೀರಾಮ ಸೇನೆ ಬೆಳಗಾವಿ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಮೇಲೆ ಗುಂಡಿನ ದಾಳಿ ಪ್ರಕರಣದ (Belagavi Shootout) ತನಿಖೆಗೆ 4 ಪ್ರತ್ಯೇಕ ತಂಡಗಳ ರಚನೆ ಮಾಡಲಾಗಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಬೋರಲಿಂಗಯ್ಯ ತಿಳಿಸಿದ್ದಾರೆ.
ಬೆಳಗಾವಿ ನಗರದಿಂದ ಹಿಂಡಲಗಾ ಗ್ರಾಮಕ್ಕೆ ರವಿ ಕೋಕಿತಕರ್ ತೆರಳುವಾಗ ಶನಿವಾರ ಸಂಜೆ 7.30ರ ಸುಮಾರಿಗೆ ದಾಳಿ ನಡೆದಿದೆ. ಹಂಪ್ ಹತ್ತಿರ ಕಾರು ವೇಗ ಕಡಿಮೆಯಾದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಫೈರಿಂಗ್ ಮಾಡಿದ್ದಾರೆ. ಮೊದಲಿಗೆ ರವಿ ಕೋಕಿತಕರ್ ಕೆನ್ನೆಗೆ ಗುಂಡು ತಾಕಿ ಬಳಿಕ ಚಾಲಕನ ಕೈ ಹೊಕ್ಕಿದೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಘಟನೆಗೆ ವೈಯಕ್ತಿಕ ಅಥವಾ ಇತರ ಕಾರಣವೋ ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಯಾರೂ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಪ್ರಕರಣದ ತನಿಖೆಗೆ ನಾಲ್ಕು ತಂಡ ರಚನೆ ಮಾಡಿದ್ದು, ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದೇವೆ. ಮುಂಜಾಗ್ರತಾ ಕ್ರಮವಾಗಿ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಗಾಯಳುಗಳ ಆರೋಗ್ಯ ವಿಚಾರಿಸಿದ ಮಾಜಿ ಶಾಸಕ ಸಂಜಯ್ ಪಾಟೀಲ್
ಮಾಜಿ ಶಾಸಕ ಸಂಜಯ್ ಪಾಟೀಲ್, ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಾದ ಹಿಂದು ಮುಖಂಡರ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾತನಾಡಿರುವ ಅವರು, ಈ ರೀತಿಯ ಘಟನೆ ನಡೆಯಬಾರದು. ಹಿಂದುತ್ವ ಪರ ಕೆಲಸ ಮಾಡುವ ರವಿ ಕೋಕಿತಕರ್ ಮೇಲೆ ಹಲ್ಲೆ ಒಳ್ಳೆಯ ಸಂಗತಿ ಅಲ್ಲ. ಪೊಲೀಸರು ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಬೆಳಗಾವಿಯಲ್ಲಿ ಗಡಿ ವಿವಾದ ಇದೆ, ಆದರೆ, ಈ ರೀತಿ ಘಟನೆ ನಡೆದಿಲ್ಲ. ಇದು ಬೆಳಗಾವಿಯಲ್ಲಿ ಒಳ್ಳೆಯ ವಾತಾವರಣ ಹಾಳು ಮಾಡುವ ಪ್ರಯತ್ನವಾಗಿದೆ ಎಂದರು.
ತಮ್ಮ ತಮ್ಮ ಧರ್ಮಗಳ ಬಗ್ಗೆ ಮಾತನಾಡುವ ಅಧಿಕಾರ ಎಲ್ಲರಿಗೂ ಇದೆ. ರವಿ ಹಿಂದು ಸಮಾಜದ ಪರ ಹೋರಾಟ ಮಾಡುತ್ತಿದ್ದಾರೆ. ಈ ರೀತಿ ಘಟನೆ ನೋಡಿದರೆ ನೀವು ಹೆದರುತ್ತೀರಿ ಎಂದು ಅರ್ಥ. ನಾವು ಕರ್ನಾಟಕದಲ್ಲಿ ಇದ್ದು, ಕನ್ನಡಪರ ಹೋರಾಟ ಮಾಡುತ್ತೇವೆ. ಮರಾಠಿಗರು ಮರಾಠಿಗರ ಪರ ಹೋರಾಟ ಮಾಡುತ್ತಾರೆ. ಎಲ್ಲರಿಗೂ ಪ್ರತಿಭಟನೆ ಮಾಡುವ ಅಧಿಕಾರ ಇದೆ. ಘಟನೆ ಕುರಿತು ಗೃಹಸಚಿವರ ಜತೆ ಮಾತನಾಡಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುವೆ ಎಂದು ತಿಳಿಸಿದರು.
ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ ಭೇಟಿ
ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಹಾಗೂ ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ ಭೇಟಿ ನೀಡಿ ಶ್ರೀರಾಮಸೇನೆ ಬೆಳಗಾವಿ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಅವರ ಆರೋಗ್ಯ ವಿಚಾರಿಸಿದರು. ಬಳಿಕ ಎಸಿಪಿ ಚಂದ್ರಪ್ಪ ಬಳಿ ಘಟನೆ ಬಗ್ಗೆ ಮಾಹಿತಿ ಪಡೆದರು. ಶಾಸಕರ ಜತೆ ನೂರಾರು ಬಿಜೆಪಿ ಮುಖಂಡರು ಹಾಗೂ ಹಿಂದು ಸಂಘಟನೆಯ ಕಾರ್ಯಕರ್ತರು ಆಸ್ಪತ್ರೆ ಬಳಿ ಜಮಾಯಿಸಿದ್ದರು.
ಇದನ್ನೂ ಓದಿ | Belagavi Shootout | ಬೆಳಗಾವಿಯಲ್ಲಿ ಶೂಟೌಟ್, ಇಬ್ಬರು ಹಿಂದು ಸಂಘಟನೆ ಮುಖಂಡರಿಗೆ ಗಾಯ, ಪರಿಸ್ಥಿತಿ ಉದ್ವಿಗ್ನ