Site icon Vistara News

Belagavi Shootout | ಶ್ರೀರಾಮಸೇನೆ ಜಿಲ್ಲಾಧ್ಯಕ್ಷನ ಮೇಲೆ ಫೈರಿಂಗ್ ಮಾಡಿದವರು 18 ಗಂಟೆಯಲ್ಲಿ ಬಂಧನ

Belagavi shootout

ಬೆಳಗಾವಿ: ಶ್ರೀರಾಮ ‌ಸೇನೆ ಬೆಳಗಾವಿ ಜಿಲ್ಲಾಧ್ಯಕ್ಷ ರವಿ‌ ಕೋಕಿತ್ಕರ್ ಅವರ ಮೇಲೆ ಗುಂಡು ಹಾರಿಸಿ (Belagavi Shootout) ಕೊಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕೇವಲ ೧೮ ಗಂಟೆಗಳ ಅವಧಿಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರಂಭದಿಂದಲೂ ಇದೊಂದು ಸಂಘಟನೆ ಇಲ್ಲವೇ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ನಡೆದ ಕೊಲೆ ಯತ್ನ ಆಗಿರಬಹುದು ಎಂಬ ಗುಮಾನಿ ಇತ್ತು. ಇದು ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿ ನಡೆದ ಕೃತ್ಯ ಎಂದು ಆರೋಪಿಗಳನ್ನು ಬಂಧಿಸಿದ ಪೊಲೀಸರು ತಿಳಿಸಿದ್ದಾರೆ.

ಬೆಳಗಾವಿ ನಿವಾಸಿ ಅಭಿಜಿತ್ ಭಾತ್ಕಾಂಡೆ, ಬಸ್ತವಾಡ ಗ್ರಾಮದ ನಿವಾಸಿ ರಾಹುಲ್ ಕೊಡಚವಾಡ, ಜ್ಯೋತಿಬಾ ಗಂಗಾರಾ ಬಂಧಿತರು. ಅಭಿಜಿತ್ ಹಾಗೂ ರವಿ ಕೋಕಿತಕರ್ ಮಧ್ಯೆ ರಿಯಲ್ ಎಸ್ಟೇಟ್ ವ್ಯವಹಾರ ಇತ್ತು. 2020ರ ಜನವರಿ 1ರಂದು ಅಭಿಜಿತ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಈ ಪ್ರಕರಣದಲ್ಲಿ ಗಾಯಾಳು ರವಿ ಕೋಕಿತಕರ್ ಪ್ರಮುಖ ಆರೋಪಿಯಾಗಿದ್ದ.

ಇದೇ ದ್ವೇಷವನ್ನು ಇಟ್ಟುಕೊಂಡು ಹಣಕಾಸಿನ ವ್ಯವಹಾರ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ರವಿ ಕೋಕಿತಕರ್‌ ಮೇಲೆ ಕೊಲೆ ಯತ್ನ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಅಭಿಜಿತ್ ಭಾತ್ಕಾಂಡೆ ಫೈರ್ ಮಾಡಿದ್ದಾನೆ‌. ಕಂಟ್ರಿ ಪಿಸ್ತೂಲ್ ಬಳಸಿ ಫೈರ್ ಮಾಡಿದ್ದು ಅದಕ್ಕೆ ಯಾವುದೇ ಲೈಸನ್ಸ್ ಇಲ್ಲ‌ ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿಗೋಷ್ಠಿ‌ ನಡೆಸಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ, ಈ ವಿಚಾರದಲ್ಲಿ ಯಾರೂ ವದಂತಿಗಳಿಗೆ ಕಿವಿಗೊಡಬಾರದು ಎಂದು ಹೇಳಿದರು.

ಶನಿವಾರ ರಾತ್ರಿ 7.30 ಸುಮಾರಿಗೆ ಬೆಳಗಾವಿ ‌ನಗರದಿಂದ ಹಿಂಡಲಗಾ ‌ಗ್ರಾಮದ ಕಡೆಗೆ ಹೊರಟಿದ್ದ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಸಂಗಡಿಗರಿದ್ದ ವಾಹನದ ಮೇಲೆ‌ ದುಷ್ಕರ್ಮಿಗಳು ‌ಗುಂಡು ಹಾರಿಸಿದ್ದರು. ದ್ವಿಚಕ್ರವಾಹನದಲ್ಲಿ ಬಂದಿದ್ದ ಮೂವರು ಫೈರಿಂಗ್ ಮಾಡಿದ್ದು, ಗುಂಡು ರವಿ ಅವರ ಗದ್ದಕ್ಕೆ ತಾಗಿ ಡ್ರೈವರ್‌ ಕೈಗೂ ಬಡಿದಿತ್ತು. ಅವರಿಬ್ಬರನ್ನು ಕೂಡಾ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅವರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ರಮೋದ್‌ ಮುತಾಲಿಕ್‌ಗೆ ಇನ್ನೂ ಅನುಮಾನ
ಅರೋಪಿಗಳ ಬಂಧನ ಸುದ್ದಿ ತಿಳಿದ ಬಳಿಕ ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭೇಟಿ ನೀಡಿದರು. ಘಟನೆ ನಡೆದು 18 ಗಂಟೆಯೊಳಗೆ ಆರೋಪಿಗಳ ಬಂಧಿಸಿದ್ದಕ್ಕೆ ನಗರ ಪೊಲೀಸ್ ಆಯುಕ್ತರಿಗೆ ಧನ್ಯವಾದ ತಿಳಿಸಿದರು.

ಬಳಿಕ ಮಾತನಾಡಿದ ಪ್ರಮೋದ್ ಮುತಾಲಿಕ್, ಘಟನೆಯ ಹಿಂದೆ ಯಾವುದೋ ಸಂಘಟನೆಯ ಕೈವಾಡ ಎಂದು ಶಂಕೆ ವ್ಯಕ್ತಪಡಿಸಿದರು. ಶ್ರೀರಾಮಸೇನೆ ಸಂಘಟನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದು ಘಟನಾ ಸ್ಥಳಕ್ಕೂ ಭೇಟಿ ನೀಡಿದ್ದೇನೆ‌‌. ನಗರ ಪೊಲೀಸ್ ಆಯುಕ್ತರಿಗೆ ಧನ್ಯವಾದ ಸಲ್ಲಿಸುತ್ತೇನೆ. ತಪ್ಪಿತಸ್ಥರನ್ನು 18 ಗಂಟೆಯೊಳಗೆ ಬಂಧಿಸಿದ್ದಕ್ಕೆ ಧನ್ಯವಾದ. ವೈಯಕ್ತಿಕ ಜಗಳ ಹಿನ್ನೆಲೆ ಘಟನೆ ನಡೆದಿದೆ ಅಂತ ಪೊಲೀಸರು ಹೇಳಿದ್ದಾರೆ. ಆದ್ರೆ ಆ ಘಟನೆ ನಡೆದು ಎರಡು ವರ್ಷ ಕಳೆದಿದೆ. ಇವತ್ತಿ‌ನ ವಿರಾಟ ಹಿಂದೂ ಸಮಾವೇಶದ ಕಾರ್ಯಕ್ರಮ ಹಿನ್ನೆಲೆ ಘಟನೆ ನಡೆದ ಅನುಮಾನ ಇದೆ. ಅದರ ಸಂಬಂಧ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ʻʻಶ್ರೀರಾಮಸೇನೆ ಕಾರ್ಯಕ್ರಮ ಡಿಸ್ಟರ್ಬ್ ಮಾಡಬೇಕು ಅಂತಾ ಈ ರೀತಿ ಕೃತ್ಯವೆಸಗಿದ್ದಾರೆ. ನಾಲ್ಕೈದು ದಿನಗಳಿಂದ ರವಿ ಕೋಕಿತಕರ್ ಫಾಲೋ ಮಾಡ್ತಿದ್ರು. ಇವತ್ತಿನ ಕಾರ್ಯಕ್ರಮ ಆಗಬಾರದು ಅಂತಾ ವಿಚಾರ ಇತ್ತು ಅನಿಸುತ್ತದೆʼʼ ಎನ್ನುವುದು ಮುತಾಲಿಕ್‌ ಅನುಮಾನ.

ʻʻಆರೋಪಿ ಅಭಿಜಿತ್ ಈ ಹಿಂದೆ ನಮ್ಮ ಜೊತೆ ಬಜರಂಗದಳದಲ್ಲಿ ಇದ್ದ, ಬಜರಂಗದಳ ಸಂಚಾಲಕನಾಗಿದ್ದ. ಇದರ ಹಿಂದೆ ಯಾವ ಸಂಘಟನೆ ಅನ್ನೋದು ತನಿಖೆ ಆಗಬೇಕು. ಚಲಿಸುತ್ತಿದ್ದ ವಾಹನ ಮೇಲೆ ಫೈರಿಂಗ್ ಮಾಡೋದು ಶಾರ್ಪ್ ಶೂಟರ್‌ಗೆ ಮಾತ್ರ ಸಾಧ್ಯ. ಶಾರ್ಪ್ ಶೂಟರ್ ಯಾರು ಎಂಬುದನ್ನು ತನಿಖೆ ಆಗಬೇಕು. ನಮಗೆ ಸಂಶಯ ಇದೆ. ಅದನ್ನ ಪೊಲೀಸ್ ಇಲಾಖೆ ಹೊರತಗೆಯಬೇಕು ಇಲ್ಲವಾದ್ರೆ ನಾವು ತಗೆಯುತ್ತೇವೆʼʼ ಎಂದರು ಮುತಾಲಿಕ್‌.

ಇದನ್ನೂ ಓದಿ | Santro Ravi Case : ಗೃಹ ಸಚಿವರ ಮನೆಯಲ್ಲಿ 15 ಲಕ್ಷ ರೂ. ಎಣಿಸಿದ ಸ್ಯಾಂಟ್ರೋ ರವಿ; ವಿಡಿಯೊ ಮಾಡಿದವರ ಬಗ್ಗೆ ತನಿಖೆಯಾಗಲಿ: ಎಚ್‌ಡಿಕೆ

Exit mobile version