ಬೆಳಗಾವಿ: ಭೌಗೋಳಿಕವಾಗಿ ಬಹಳ ವಿಸ್ತೀರ್ಣತೆಯನ್ನು ಹೊಂದಿರುವ, ರಾಜ್ಯದ 2ನೇ ರಾಜಧಾನಿ ಎಂಬ ಖ್ಯಾತಿಯ ಬೆಳಗಾವಿ ಜಿಲ್ಲೆಯನ್ನು ವಿಭಜನೆ (Divide of Belagavi District) ಮಾಡಬೇಕು ಎಂಬ ಕೂಗು ದಶಕಗಳಿಂದ ಕೇಳಿಬರುತ್ತಲೇ ಇದೆ. ಸತೀಶ್ ಜಾರಕಿಹೊಳಿ (Satish Jarkiholi) ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ಸಚಿವರಾಗಿ ಅಧಿಕಾರ ವಹಿಸಿಕೊಂಡು ಮೊದಲ ಬಾರಿಗೆ ಮಂಗಳವಾರ (ಮೇ 30) ಬೆಳಗಾವಿ ಭೇಟಿ ನೀಡಿದ್ದಾಗ ಮತ್ತೆ ಈ ವಿಷಯ ಮುನ್ನೆಲೆಗೆ ಬಂದಿತ್ತು. ಈಗ ಸತೀಶ್ ಜಾರಕಿಹೊಳಿ ಈ ಬಗ್ಗೆ ಪುನರುಚ್ಚಾರ ಮಾಡಿದ್ದು, ಬೆಳಗಾವಿಯನ್ನು ಎರಡಲ್ಲ, ಮೂರು ಜಿಲ್ಲೆಯನ್ನಾಗಿ ವಿಭಜಿಸಬೇಕು ಎಂದು ಹೇಳಿದ್ದಾರೆ.
ಈ ಹಿಂದೆ ಬಿಜೆಪಿಯಿಂದ ಸಚಿವರಾಗಿದ್ದ, ಬೆಳಗಾವಿ ಭಾಗದ ಪ್ರಬಲ ನಾಯಕರು ಅನೇಕ ಬಾರಿ ಪ್ರಸ್ತಾಪವನ್ನು ಮಾಡಿದ್ದರು. ಜತೆಗೆ ಅವರು ಪ್ರತ್ಯೇಕ ರಾಜ್ಯದ ಬೇಡಿಕೆಯನ್ನೂ ಇಟ್ಟಿದ್ದರು. ಅಲ್ಲದೆ, ಹಲವು ನಾಯಕರು ಪ್ರತ್ಯೇಕ ಜಿಲ್ಲೆಯ ಬಗ್ಗೆ ಧ್ವನಿ ಎತ್ತಿದ್ದರು. 2022ರಲ್ಲಿಯೂ ಒಮ್ಮೆ ಬೆಳಗಾವಿ ವಿಭಜನೆ ವಿಚಾರ ಮುನ್ನೆಲೆಗೆ ಬಂದಿತ್ತು. ಆಗ ಪ್ರತಿಕ್ರಿಯೆ ನೀಡಿದ್ದ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ಈ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ರಾಜ್ಯ ಮತ್ತು ಬೆಳಗಾವಿ ಜಿಲ್ಲೆಯ ಹಿತಾಸಕ್ತಿಗೆ ಅನುಗುಣವಾಗಿ ನಿರ್ಧಾರ ಮಾಡುತ್ತೇವೆ’ ಎಂದಿದ್ದರು.
ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅಲ್ಲದೆ, ಈ ಮೊದಲಿನಿಂದಲೂ ಸತೀಶ್ ಜಾರಕಿಹೊಳಿ ಅವರು ಬೆಳಗಾವಿಯನ್ನು ವಿಭಜನೆ ಮಾಡಿ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವ ಬಗ್ಗೆ ಆಸಕ್ತಿಯನ್ನು ಹೊಂದಿದ್ದರು. ಈಗ ಅವರು ಸಚಿವರೂ ಆಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕಿಯಾದರೂ ಈ ಐದು ವರ್ಷದ ಅವಧಿಯೊಳಗೆ ಪ್ರತ್ಯೇಕ ಜಿಲ್ಲೆಯನ್ನು ರಚನೆ ಮಾಡಬೇಕೆಂದು ನಿರ್ಧರಸಿದ್ದಾರೆಂದು ಮೂಲಗಳು ಹೇಳಿವೆ. ಅಲ್ಲದೆ, ಮಂಗಳವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗಲೂ ಈ ಬಾರಿ ಬೆಳಗಾವಿ ಜಿಲ್ಲೆ ವಿಭಜನೆಯಾಗಲೇ ಬೇಕು ಎಂದು ಹೇಳಿದ್ದರು. ಇದಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೂ ತಲೆಯಾಡಿಸಿದ್ದರು.
ಆಡಳಿತ ಸುಗಮಕ್ಕೆ ಬೇಕು ಪ್ರತ್ಯೇಕ ಜಿಲ್ಲೆ
ಬೆಳಗಾವಿ ವಿಭಜಿಸಿ ಚಿಕ್ಕೋಡಿ, ಗೋಕಾಕ ಕೇಂದ್ರವಾಗಿ ಇನ್ನೆರಡು ಹೊಸ ಜಿಲ್ಲೆಗಳಾಗಬೇಕು. ಬೆಳಗಾವಿ ಜಿಲ್ಲೆ ಪ್ರಾದೇಶಿಕವಾಗಿ ಬಹಳ ದೊಡ್ಡದಿದೆ. ಆಡಳಿತದ ದೃಷ್ಟಿಯಿಂದ ಇದು ಸರಿಯಲ್ಲ. ಜಿಲ್ಲೆ ವಿಭಜನೆ ಆಗಬೇಕು ಎಂದು ನಾನು ಹಿಂದೆಯೂ ಹೇಳಿದ್ದೆ. ಈಗಲೂ ಅಷ್ಟೇ. ಆಡಳಿತ ಸುಗಮವಾಗಲು ಗೋಕಾಕ- ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಮಾಡಬೇಕಿದೆ ಎಂದ ಸತೀಶ್ ಜಾರಕಿಹೊಳಿ ಶನಿವಾರ (ಜೂ 3) ಅಭಿಪ್ರಾಯಪಟ್ಟಿದ್ದಾರೆ.
25 ವರ್ಷದ ಹಿಂದೆಯೂ ನಡೆದಿತ್ತು ಪ್ರಯತ್ನ
25 ವರ್ಷಗಳ ಹಿಂದೆಯೇ ಬೆಳಗಾವಿ ಜಿಲ್ಲಾ ವಿಭಜನೆಗೆ ಯತ್ನ ನಡೆದಿತ್ತು. ಆದರೆ, ಅದು ವಿಫಲವಾಗಿತ್ತು. 1997ರಲ್ಲಿ ಜೆ.ಎಚ್. ಪಟೇಲ್ ಮುಖ್ಯಮಂತ್ರಿ ಆಗಿದ್ದಾಗ ಬೆಳಗಾವಿಯನ್ನು ಮೂರು ಜಿಲ್ಲೆಗಳಾಗಿ ವಿಭಜನೆ ಮಾಡಬೇಕು ಎಂಬ ಪ್ರಸ್ತಾಪ ಎದ್ದಿತ್ತು. ಕೊನೆಗೆ ಇದರ ಸಾಧಕ-ಬಾಧಕಗಳನ್ನು ಚರ್ಚಿಸಿ ಬೆಳಗಾವಿಯನ್ನು ಮೂರು ಜಿಲ್ಲೆಗಳಾಗಿ ಅಂದರೆ, ಬೆಳಗಾವಿ ಜತೆಗೆ ಚಿಕ್ಕೋಡಿ, ಗೋಕಾಕವನ್ನು ಜಿಲ್ಲಾ ಕೇಂದ್ರವಾಗಿಸಿ ವಿಭಜನೆ ಮಾಡಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಈ ಸಂಬಂಧ 1997 ಆಗಸ್ಟ್ 22ರಂದು ಸಚಿವ ಸಂಪುಟದಲ್ಲಿ ಆಗಿನ ಸಿಎಂ ಜೆ.ಎಚ್. ಪಟೇಲ್ ನಿರ್ಧಾರ ತೆಗೆದುಕೊಂಡಿದ್ದರು.
ನಡೆದಿತ್ತು ಉಗ್ರ ಪ್ರತಿಭಟನೆ
ಆಗಿನ ರಾಜ್ಯ ಸರ್ಕಾರವು ಜಿಲ್ಲಾ ವಿಭಜನೆ ಮಾಡಲು ಮುಂದಾಗಿ ಸಚಿವ ಸಂಪುಟದಲ್ಲಿ ನಿರ್ಣಯವನ್ನು ತೆಗೆದುಕೊಳ್ಳುತ್ತಿದ್ದಂತೆ ಬೆಳಗಾವಿ ಜಿಲ್ಲೆಯ ವಿವಿಧ ಕಡೆ ಉಗ್ರ ಹೋರಾಟವೂ ನಡೆದಿತ್ತು. ಅದೂ ಒಂದೆರಡು ದಿನಗಳಲ್ಲ. ಬರೋಬ್ಬರಿ 25 ದಿನಗಳ ಕಾಲ ಜನರು ಬೀದಿಗಿಳಿದಿದ್ದರು. ಇದರಿಂದ ಪರಿಸ್ಥಿತಿ ಕೈಮೀರಲಿದೆ ಎಂದು ಅರಿತ ಜೆ.ಎಚ್. ಪಟೇಲ್ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿತ್ತು. ವಿಧಾನಸಭೆ ಅಧಿವೇಶನ ವೇಳೆಯೇ ಜಿಲ್ಲಾ ವಿಭಜನೆ ನಿರ್ಧಾರವನ್ನು ಹಿಂಪಡೆಯುವುದಾಗಿ ಜೆ.ಎಚ್. ಪಟೇಲ್ ಘೋಷಿಸಿದ್ದರು.
ಇದನ್ನೂ ಓದಿ: Weather Report: ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇನ್ನೆರೆಡು ದಿನ ಭಾರಿ ವರುಣ; ಬೆಂಗಳೂರಲ್ಲಿ ಮಳೆ ಹೇಗೆ?
ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿರುವ ಕಾರಣಕ್ಕೆ ಜಿಲ್ಲಾ ವಿಭಜನೆಗೆ ಸ್ಥಳೀಯರು ವಿರೋಧ ಮಾಡಿದ್ದರು. ಈಗಲೂ ಸಹ ಗಡಿ ವಿವಾದ ಇನ್ನೂ ಬಗೆಹರಿದಿಲ್ಲ. ಹಾಗಾಗಿ ತಕ್ಷಣಕ್ಕೆ ಬೆಳಗಾವಿ ವಿಭಜನೆ ಅಷ್ಟು ಸುಲಭವಲ್ಲ ಎಂದೂ ಹೇಳಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ