Site icon Vistara News

Belagavi Winter Session: ಬೆಳಗಾವಿ ಅಧಿವೇಶನಕ್ಕೆ ಇಂದು ತೆರೆ; ಜಮೀರ್‌ ವಿರುದ್ಧ ಬಿಜೆಪಿ ಗದ್ದಲ?

Belagavi Winter Session House delayed by 1 hour

ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ (Suvaran Soudha) ನಡೆಯುತ್ತಿರುವ ಹತ್ತು ದಿನಗಳ ವಿಧಾನಮಂಡಲ ಅಧಿವೇಶನಕ್ಕೆ (Belagavi Winter Session) ಇಂದು ತೆರೆ ಬೀಳಲಿದೆ. ಉತ್ತರ ಕರ್ನಾಟಕದ ಸಮಸ್ಯೆ ಸವಾಲುಗಳ ಬಗ್ಗೆ ಚರ್ಚೆ ಮಾಡಲು ಅಧಿವೇಶನ ಕರೆಯಲಾಗಿತ್ತು.

ಈ ಬಾರಿಯ ಸದನ ಕಲಾಪದಲ್ಲಿ ಹಲವು ವಿಚಾರಗಳು ಹೈಲೈಟ್‌ ಆಗಿವೆ. ರಾಜ್ಯದಲ್ಲಿರುವ ಬರ ಪರಿಸ್ಥಿತಿಯ ಬಗ್ಗೆ ಸುದೀರ್ಘ ಚರ್ಚೆ ಆಗಿದ್ದು, ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಒಂದಿಷ್ಟು ಚರ್ಚೆಯಾಗಿದೆ.

ಸುದೀರ್ಘ ಚರ್ಚೆಯಲ್ಲಿ ಹಲವು ಶಾಸಕರು ಭಾಗವಹಿಸಿದರಾದರೂ, ಉತ್ತರ ಕರ್ನಾಟಕ ಭಾಗದ ಹೆಚ್ಚಿನ ಶಾಸಕರಿಂದಲೇ ನಿರುತ್ಸಾಹ ಕಂಡುಬಂತು. ಉತ್ತರ ಕರ್ನಾಟಕ ಕುರಿತ ಚರ್ಚೆಯಲ್ಲಿ ರಮೇಶ್ ಜಾರಕಿಹೊಳಿ ಭಾಗವಹಿಸಲಿಲ್ಲ. ಸಿ.ಪಿ ಯೋಗೀಶ್ವರ್ ಜತೆ ಸರಣಿ ಮೀಟಿಂಗ್‌ನಲ್ಲಿ ರಮೇಶ್ ಬ್ಯುಸಿಯಾಗಿದ್ದರು ಎಂದು ಹೇಳಲಾಗಿದೆ. ಬಸವರಾಜ ಪಾಟೀಲ್‌ ಯತ್ನಾಳ್‌ ಮಾತ್ರ ಸರ್ಕಾರವನ್ನೂ ಬಿಜೆಪಿಯನ್ನೂ ಬಿಡದೇ ಕಾಡಿದರು. ಉತ್ತರ ಕರ್ನಾಟಕದ ನಾಯಕತ್ವದ ಬಗ್ಗೆ ಧ್ವನಿ ಎತ್ತಿದರು.

ಸ್ಪೀಕರ್‌ ಕುರಿತು ನೀಡಿದ ಹೇಳಿಕೆಗೆ ಸಂಬಂಧಿಸಿ, ಶಾಸಕ ಜಮೀರ್ ಅಹಮದ್ ಖಾನ್ ರಾಜೀನಾಮೆಗೆ ವಿಪಕ್ಷ ಬಿಜೆಪಿ ಪಟ್ಟು ಹಿಡಿದಿದೆ. ಬಿಜೆಪಿ ಸದಸ್ಯರು ಸದನದ ಬಾವಿಗಳಿದು ಪ್ರತಿಭಟನೆ ಮಾಡಿದರು. ಸದಸ್ಯರ ಒತ್ತಾಯಕ್ಕೆ ಮಣಿದು ಸ್ಪೀಕರ್ ಚರ್ಚೆಗೆ ಅವಕಾಶ ಕೊಟ್ಟಿದ್ದು, ಇಂದು ಜಮೀರ್ ಹೇಳಿಕೆ ಮೇಲೆ ಚರ್ಚೆ ಸಾಧ್ಯತೆ ಇದೆ. ಸಿಎಂ ಉತ್ತರ ಕರ್ನಾಟಕ ಅಭಿವೃದ್ಧಿ ಚರ್ಚೆಗೆ ಉತ್ತರ ನೀಡಿದ ಬಳಿಕ ಜಮೀರ್ ಹೇಳಿಕೆ ಮೇಲೆ ಚರ್ಚೆ ಸಾಧ್ಯತೆ ಇದೆ. ಜಮೀರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಧರಣಿಗೆ ಇಳಿಯಲಿದೆ.

ಮೊದಲ ಅಧಿವೇಶನದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುವಲ್ಲಿ ಬಿಜೆಪಿ ಸದಸ್ಯರು ವಿಫಲತರಾದರು. ವಿಪಕ್ಷ ನಾಯಕರಾಗಿ ಆಯ್ಕೆಯಾಗಿರುವ ಆರ್. ಆಶೋಕ್ ವಿರುದ್ಧ ಹಲವು ಬಿಜೆಪಿ ಶಾಸಕರು ಅಸಮಾಧಾನ ಹೊಂದಿದ್ದುದು ಕಂಡುಬಂದಿದ್ದು, ಇದು ಸದನದಲ್ಲಿ ವ್ಯಕ್ತವಾಯಿತು. ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ಶಾಸಕರನ್ನು ಒಂದುಗೂಡಿಸಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಲು ವಿಫಲರಾದರು.

ಈ ಮಧ್ಯೆ ಕಾಂಗ್ರೆಸ್ ಶಾಸಕರಾದ ಬಸವರಾಜ ರಾಯರೆಡ್ಡಿ, ಬಿ.ಆರ್ ಪಾಟೀಲ್, ಶಿವಗಂಗ ಬಸವರಾಜ ಅವರು ಪಕ್ಷಕ್ಕೇ ಮುಜುಗರ ತರಿಸಿದರು. ಸುವರ್ಣ ಸೌಧದ ಹೊರಗಡೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಉತ್ತರ ಕರ್ನಾಟಕದ ಅನೇಕ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಇದನ್ನೂ ಓದಿ: Belagavi Winter Session: ವೈಟ್ ಟ್ಯಾಪಿಂಗ್‌ ಬಗ್ಗೆ ಬೆಂಗಳೂರು ಶಾಸಕರ ಜತೆ ಚರ್ಚೆ: ಡಿ.ಕೆ. ಶಿವಕುಮಾರ್

Exit mobile version