Site icon Vistara News

ಬೆಳಗಾವಿಯಲ್ಲಿ ಪಾರ್ಕಿಂಗ್‌ ವಿಚಾರದಲ್ಲಿ‌ ಗುಂಪು ಘರ್ಷಣೆ, ಒಬ್ಬರ ಹತ್ಯೆ, ವಾಹನಗಳಿಗೆ ಬೆಂಕಿ

ಚಾಕು ಇರಿತ

ಬೆಳಗಾವಿ: ಬೆಳಗಾವಿ ತಾಲ್ಲೂಕಿನ ಗೌಂಡವಾಡ ಗ್ರಾಮದಲ್ಲಿ ಪಾರ್ಕಿಂಗ್‌ ವಿಚಾರದಲ್ಲಿ ಉಂಟಾದ ಎರಡು ಗುಂಪುಗಳ ಘರ್ಷಣೆಯಲ್ಲಿ ಒಬ್ಬರ ಹತ್ಯೆಯಾಗಿದೆ. ಸತೀಶ ಪಾಟೀಲ್ (37) ಕೊಲೆಯಾದ ವ್ಯಕ್ತಿಯಾಗಿದ್ದಾರೆ.

ಕಲ್ಲು ತೂರಾಟದಲ್ಲಿ ಹಲವರಿಗೆ ಗಾಯವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆ ಮುಂದೆ ನಿಲ್ಲಿಸಿದ್ದ 30 ಕ್ಕೂ ಅಧಿಕ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಕಾರು, ಟ್ರ್ಯಾಕ್ಟರ್, ಎರಡು ಟೆಂಪೋ, ಹುಲ್ಲಿನ ಬಣವೆಗೆ ಬೆಂಕಿ ಹಚ್ಚಲಾಗಿದೆ. ಸ್ಥಳಕ್ಕೆ ನಾಲ್ಕು ‌ಅಗ್ನಿಶಾಮಕ ವಾಹನಗಳ ಆಗಮನವಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಠಾಣೆ ಪೊಲೀಸರ ಹರಸಾಹಸಪಡುತ್ತಿದ್ದಾರೆ.

ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ನೇತೃತ್ವದಲ್ಲಿ 200 ಕ್ಕೂ ಅಧಿಕ ಪೊಲೀಸರ ನಿಯೋಜಿಸಲಾಗಿದೆ.

ಹತ್ಯೆಯಾದ ಸತೀಶ್‌ ಪಾಟೀಲ್

ಮಂದಿರ ಜಾಗದ ವಿಚಾರದಲ್ಲಿ ವಿವಾದ

ಗೌಂಡವಾಡ ಗ್ರಾಮದ ಬೈರೋನಾಥ್ ಮಂದಿರ ದೇವಸ್ಥಾನಕ್ಕೆ ಸೇರಿದ ಜಮೀನು ಪರಬಾರೆ ಕುರಿತು ವಿವಾದ ಉಂಟಾಗಿತ್ತು. ಜಮೀನು ಉಳಿಸಲು ಸತೀಶ್‌ ಪಾಟೀಲ್ ಹೋರಾಟ ನಡೆಸಿದ್ದರು. ಈ ಹಿಂದೆ ಇವರ ಮೇಲೆ ಮಾರಣಾಂತಿಕವಾಗಿ ಹಲ್ಲೆಯೂ ನಡೆದಿತ್ತು. ಆ ಸಂದರ್ಭದಲ್ಲಿ ರಾಜೀ ಸಂಧಾನದ ಮೂಲಕ ಸಮಸ್ಯೆ ಇತ್ಯರ್ಥಗೊಳಿಸಲಾಗಿತ್ತು. ಬಳಿಕ ಸತೀಶ್ ದೇವರ ಜಾಗ ದೇವರಿಗೆ ಸಿಗಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದರು. ಗ್ರಾಮದ ಬಹುತೇಕರು ಬೆಂಬಲ ನೀಡಿದ್ದರು. ದೇವರ ಜಾಗದ ಹೋರಾಟಕ್ಕೆ ಕೊಲೆ ಮಾಡಲಾಗಿದೆ ಎಂಬುದು ಕುಟುಂಬಸ್ಥರ ಆರೋಪ. ಸದ್ಯ ಕೊಲೆಯಾದ ಯುವಕನ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದು, ಕೊಲೆಗೆ ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

ಗ್ರಾಮದ ಹಲವು ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಕೊಲೆಗೆ ಸಂಬಂಧಿಸಿದಂತೆ ಐವರು ಹಾಗೂ ಗಲಾಟೆಗೆ ಪ್ರಕರಣ ಸಂಬಂಧ 15 ಜನರ ಬಂಧನವಾಗಿದೆ.

Exit mobile version