ವಿಧಾನ ಪರಿಷತ್: ಕಬ್ಬು ಸಾಗಣೆ ಮತ್ತು ತೂಕದಲ್ಲಿ ವ್ಯತ್ಯಾಸ ಇದೆ ಎನ್ನುವ ದೂರು ಆಧರಿಸಿ ಕಬ್ಬಿನ ತೂಕದ ಬಗ್ಗೆ ದೂರು ನೀಡಿದ ತರುವಾಯ ಮೊದಲನೆಯದಾಗಿ 21 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ಮಾಡಿ ಅಂಕಿ-ಅಂಶಗಳನ್ನು ಪಡೆಯಲಾಗಿದೆ. ವ್ಯತ್ಯಾಸ ಕಂಡುಬಂದಲ್ಲಿ ಅಂತಹ ಕಾರ್ಖಾನೆಗಳ ವಿರುದ್ಧ ಸರ್ಕಾರ ಕ್ರಮ ಜರುಗಿಸಲಿದೆ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಂಗಳವಾರ ಹೇಳಿದರು.
ವಿಧಾನ ಪರಿಷತ್ತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ಪ್ರಕಾಶ ಕೆ.ರಾಠೋಡ್ ಮತ್ತು ಪಿ.ಆರ್.ರಮೇಶ ಅವರ ಪ್ರಶ್ನೆಗೆ ಉತ್ತರಿಸಿದರು.
ಪ್ರಾರಂಭದಲ್ಲಿ ಮಾತನಾಡಿದ ಪ್ರಕಾಶ್ ರಾಥೋಡ್, ಎಥನಾಲ್, ಸಕ್ಕರೆ ಹಾಗೂ ಇತರ ಉತ್ಪನ್ನಗಳ ಕುರಿತಂತೆ ಪ್ರಕಾಶ್ ರಾಥೋಡ್ ಪ್ರಶ್ನೆ ಮಾಡಿದರು. ಗೊಬ್ಬರ, ಬೀಜ ಬೆಲೆ ಏರಿಕೆಯಾಗಿರುವುದರಿಂದ ಕಬ್ಬು ಬೆಳೆಗಾರರಿಗೆ ನಷ್ಟ ಆಗುತ್ತಾ ಇದೆ. ಬೇರೆ ರಾಜ್ಯದಲ್ಲಿ ಹೆಚ್ಚಿನ ದರ ನಿಗದಿ ಮಾಡಲಾಗಿದೆ ಎಂದರು.
ಈ ಸಮಯದಲ್ಲಿ ಮಾತನಾಡಿದ ಬಿಜೆಪಿಯ ಲಕ್ಷ್ಮಣ ಸವದಿ, ಕಬ್ಬಿನ ತೂಕದಲ್ಲಿ ಮೋಸ ಆಗುತ್ತಿದೆ. ಬಡವರು ರಕ್ತ ಸುರಿಸಿ ಕಬ್ಬು ಬೆಳೆಯುತ್ತಾರೆ. ಕಾರ್ಖಾನೆಗಳವರು ತೂಕದಲ್ಲಿ ಮೋಸ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅನೇಕ ಕಾರ್ಖಾನೆಗಳಲ್ಲಿ ಹೀಗೆ ಮಾಡುತ್ತಾ ಇದ್ದಾರೆ ಎಂದರು. ಕಬ್ಬು ನುರಿಸುವ ಕಾರ್ಖಾನೆಗಳಿಂದ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ತೂಕದ ವಿಷಯದಲ್ಲಿ ಕಾರ್ಖಾನೆಗಳು ಪ್ರಾಮಾಣಿಕತೆ ತೋರಿಸುತ್ತಿಲ್ಲ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಬಿ.ಕೆ.ಹರಿಪ್ರಸಾದ್ ಸದನದ ಸದಸ್ಯರ ಪ್ರಶ್ನೆಗಳಿಗೆ ಧನಿಗೂಡಿಸಿದರು. ಎಥನಾಲ್‌ಗೆ ಕಳುಹಿಸುವ ಕಬ್ಬಿಗೆ ಪ್ರತ್ಯೇಕ ಬೆಲೆ ನೀಡಬೇಕು. ಎಸ್‌ಎಪಿ ನಮ್ಮ ರಾಜ್ಯದಲ್ಲಿ ಜಾರಿ ಮಾಡಬೇಕು ಎಂದು ಪಿ.ಆರ್.ರಮೇಶ ಅವರು ಒತ್ತಾಯಿಸಿದರು.
ಈ ಸಮಯದಲ್ಲಿ ಮಧ್ಯಪ್ರವೇಶ ಮಾಡಲು ಸಚಿವ ಮುರುಗೇಶ ನಿರಾಣಿ ಮುಂದಾದರು. ಆದರೆ ನಾನು ಅವಕಾಶ ಕೊಟ್ಟಿಲ್ಲ ಎಂದು ಸಭಾಪತಿ ಹೇಳಿದರು. ಸಚಿವರ ಹೇಳಿಕೆಗೆ ಅವಕಾಶ ನೀಡಿಲ್ಲ ಎಂದು ಸಭಾಪತಿ ಮಾತಿಗೆ ಸಿಟ್ಟಾದ ಮರಿತಿಬ್ಬೇಗೌಡ, ಸಭಾಪತಿಯವರ ಮುಂಭಾಗಕ್ಕೆ ಇಳಿದು ಪ್ರತಿಭಟಿಸಿದರು.
ನಂತರ ಮಾತನಾಡಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಸಕ್ಕರೆ ಕಾರ್ಖಾನೆಗಳು ವಿವಿಧ ಮೂಲಗಳಿಂದ ಉತ್ಪಾದಿಸುವ ಎಥನಾಲ್‌ಗೆ ಕೇಂದ್ರ ಸರ್ಕಾರವು ಲಾಭದಾಯಕ ಬೆಲೆ ನಿಗದಿಪಡಿಸಿದೆ. ಕೇಂದ್ರ ಸರ್ಕಾರದ ಎಫ್‌ಆರ್‌ಪಿ ದರದಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳು 2022-23ನೇ ಕಬ್ಬು ನುರಿಸುವ ಹಂಗಾಮಿಗೆ ಮೊದಲ ಕಂತಿನ ರೂಪದಲ್ಲಿ ಪಾವತಿಸಬೇಕಾದ ಕಾರ್ಖಾನೆವಾರು ನ್ಯಾಯ ಮತ್ತು ಲಾಭದಾಯಕ ಬೆಲೆಯನ್ನು ನಿಗದಿಗೊಳಿಸಿ 2022ರ ಅಕ್ಟೋಬರ್‌ನಲ್ಲಿ ಆದೇಶ ಹೊರಡಿಸಲಾಗಿದೆ.
2022-23ನೇ ಸಾಲಿನಲ್ಲಿ ಕಬ್ಬು ನುರಿಸುವ ಹಂಗಾಮು ಮುಗಿದ ನಂತರ ಸಕ್ಕರೆ ಎಥನಾಲ್ ಮತ್ತು ಇತರೆ ಉಪ ಉತ್ಪನ್ನಗಳ ಮಾರಾಟದಿಂದ ಬರುವ ಅಂತಿಮ ಆದಾಯವನ್ನು ಹಂಚಿಕೆ ಸೂತ್ರದ ಪ್ರಕಾರ ಪರಿಗಣಿಸಿ ರೈತರಿಗೆ ಪಾವತಿಸಬೇಕಾದ ಅಂತಿಮ ಕಬ್ಬಿನ ದರವನ್ನು ನಿರ್ಧರಿಸಲಾಗುವುದು. ಕಬ್ಬು ಬೆಳೆಗಾರರಿಗೆ ಅನುಕೂಲ ಕಲ್ಪಿಸಬೇಕು ಎನ್ನುವ ನಿಟ್ಟಿನಲ್ಲಿ ಕಬ್ಬಿನ ಉಪ ಉತ್ಪನ್ನದ 202 ಕೋಟಿ ರೂ.ಗಳ ಲಾಭಾಂಶವನ್ನು ಕಬ್ಬು ಬೆಳೆಗಾರರಿಗೆ ಕೊಡುವ ಆದೇಶದ ನಿರ್ಣಯ ಮಾಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ | ಲೈಫ್ ಸರ್ಕಲ್ ಅಂಕಣ | ಕರ್ಮ ಮತ್ತು ಪುನರ್ಜನ್ಮದ ಸಂಬಂಧವೇನು?