ಬೆಳಗಾವಿ: ರಾಮನಗರದ ರಾಮದೇವರ ಬೆಟ್ಟದಲ್ಲಿ ಅಯೋಧ್ಯೆ ಮಾದರಿಯಲ್ಲಿ ಮಂದಿರ ನಿರ್ಮಾಣ ಮಾಡಲಾಗುವುದು ಎಂಬ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರ ಯೋಜನೆ ಕುರಿತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಅಯೋಧ್ಯಾ ರಾಮಮಂದಿರವನ್ನಾದರೂ ಕಟ್ಟಲಿ, ಸೀತಾ ಮಂದಿರವನ್ನಾದರೂ ಕಟ್ಟಲಿ, ಬೇಕಿದ್ದರೆ ಅಶ್ವತ್ಥ ನಾರಾಯಣ ಮಂದಿರವನ್ನಾದರೂ ಕಟ್ಟಲಿ. ಮೂರು ವರ್ಷದ ಉಸ್ತುವಾರಿ ಸಚಿವರಾಗಿ ಬಂದು ಏನೋ ಕ್ಲೀನ್ ಮಾಡುತ್ತೇವೆ ಎನ್ನುತ್ತಿದ್ದರು. ಈಗ ಎಲ್ಲಾವನ್ನೂ ಕ್ಲೀನ್ ಮಾಡಿದ್ದಾರೆ. ಇಡೀ ರಾಮನಗರ ಕ್ಲೀನ್ ಮಾಡಿರುವುದನ್ನು ನೋಡಿದ್ದೇನೆ ಎಂದು ವ್ಯಂಗ್ಯ ಮಾಡಿದರು.
ರಾಯಚೂರಿನಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ದೇವಸ್ಥಾನವನ್ನು ಮಾಡಲಿ. ಅಶ್ವತ್ಥನಾರಾಯಣ ಅವರ ಬಗ್ಗೆ ವಿಧಾನಸಭೆಯಲ್ಲೆ ಸಾಕಷ್ಟು ಚರ್ಚೆ ಆಗಿದೆ. ಅವರಿಗೂ ರಾಮನಗರಕ್ಕೂ ಏನು ಸಂಬಂಧ? ಈಗ ತುಂಬಾ ಮಾತನಾಡುವುದು ಬೇಡ ಎಂದರು.
ತುಮಕೂರಿನ ಚಿಕ್ಕನಾಯಕನಹಳ್ಳಿ ಪಂಚರತ್ನಯಾತ್ರೆಯಲ್ಲಿ ಪ್ರತಿಕ್ರಿಯೆ ನೀಡಿದ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಇವರದೆ ಸರ್ಕಾರ ಮೂರುವರೆ ವರ್ಷದಿಂದ ಇದೆ. ಆಗ ಮಾಡದೆ ಇದ್ದವರು, ಇವಾಗ ಮಾಡುತ್ತಾರ? ಇವಾಗ ದಕ್ಷಿಣ ಭಾರತದಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಘೋಷಣೆ ಮಾಡುತ್ತಾರೆ. ಇನ್ನು ಮೂರು ತಿಂಗಳಿಗೆ ಚುನಾವಣೆ ನರುತ್ತಿದೆ. ಇವರನ್ನೇ ಹೊರಗೆ ಇಡುವ ಪ್ರಯತ್ನವನ್ನು ಜನರು ಮಾಡುತ್ತಾರೆ.
ನಮ್ಮ ರಾಜ್ಯ ದರಿದ್ರ ರಾಜ್ಯ ಅಲ್ಲ. ಯುಪಿ ಸಿಎಂ ಕರೆತಂದು ಇಲ್ಲಿ ಫೌಂಡೇಶನ್ ಹಾಕುವ ಅವಶ್ಯಕತೆ ಇಲ್ಲ. ನಮ್ಮ ಸುತ್ತೂರು ಮಠಾಧೀಶರನ್ನು ಕರೆತಂದು, ಆದಿಚುಂಚನಗಿರಿ ಶ್ರೀಗಳನ್ನು ಕರೆತಂದು ನಾನೇ ಮಾಡುತ್ತೇನೆ. ಇವರೇನು ನನ್ನ ಕ್ಷೇತ್ರಕ್ಕೆ ಬಂದು ಮಾಡುವುದು ಬೇಕಾಗಿಲ್ಲ. ಒಕ್ಕಲಿಗ ಸ್ವಾಮೀಜಿಗಳನ್ನು ಕರೆತಂದು ನಾನೆ ಮಂದಿರ ನಿರ್ಮಾಣ ಮಾಡಿಸುತ್ತೇನೆ. ನನ್ನ ಕ್ಷೇತ್ರದಲ್ಲಿ ಇವರೇನು ಬಂದು ಕಟ್ಟುವುದು ಬೇಕಾಗಿಲ್ಲ, ನನಗೆ ದೇವರು ಇನ್ನೂ ಶಕ್ತಿ ಕೊಟ್ಟಿದ್ದಾನೆ. ಬೇರೆ ರಾಜ್ಯದಿಂದ ಯಾರನ್ನೊ ಕರೆತಂದು ಚುನಾವಣೆ ಸಮಯದಲ್ಲಿ ಇದೆಲ್ಲ ಮಾಡುವುದು ಬೇಡ.
ಇವರ ಆಟ ಮುಗಿತಾ ಬಂತು, ಇದು ಇವರ ಕೊನೆಯ ಅಧ್ಯಾಯ. ಐದು ವರ್ಷ ಸರ್ಕಾರ ಇದ್ದಾಗ ಮಾಡಬಹುದಿತ್ತು. ಜನರ ಹಣ ಲೂಟಿ ಹೊಡೆದು ಅದರಿಂದ ನಿರ್ಮಾಣ ಮಾಡುತ್ತಾರೆ. ರಾಮನಗರದಲ್ಲಿ ಬಿಜೆಪಿಯ ಆಟ ನಡಿಯಲ್ಲ. ಇಲ್ಲಿ ನಮ್ಮ ಜನರ ಸಂಬಂಧ ಹೇಗಿದೆ ಗೊತ್ತಾ? ತಾಯಿ ಮಕ್ಕಳ ಸಂಬಂಧ ಇದ್ದ ಹಾಗೆ ಇದೆ. ನಾನು ಯಾವುದೇ ವಿರೋದ ಮಾಡುವುದಿಲ್ಲ. ಕಟ್ಟ ಬೇಕು ಎಂದರೆ ನಾನೇ ಕಟ್ಟುತ್ತೇನೆ. ಚುನಾವಣೆ ಹತ್ತಿರ ಬಂದಾಗ ಇವರ ಆಟ ಏನೂ ನಡೆಯುವುದಿಲ್ಲ. ಜನ ಇವರಿಗೆ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ ಎಂದರು.
ರಾಯಚೂರಿನಲ್ಲಿ ಪ್ರತಿಕ್ರಿಯೆ ನೀಡಿದ ಜೆಡಿಎಸ್ ರಾಜ್ಯ ಅಧ್ಯಕ್ಷ ಸಿ.ಎಂ. ಇಬ್ರಾಹಿಂ, ರಾಜ್ಯದಲ್ಲಿ ಮಳೆ ಬಂದು ನೂರಾರು ಮನೆಗಳು ಬಿದ್ದಿವೆ. ಆ ಕೆಲಸ ಮಾಡುವುದು ಬಿಟ್ಟು ಮಂದಿರ, ಮಸೀದಿ ಎನ್ನುತ್ತಾರೆ. ಯೋಗಿ ಅಲ್ಲ, ಅವರ ತಾತ ರಾಮನಗರಕ್ಕೆ ಬಂದರೂ ದೇವೆಗೌಡರ ವರ್ಚಸ್ಸು ಏನೂ ಆಗುವುದಿಲ್ಲ. ದೇವೆಗೌಡರು ರಾಮನಗರ ಜಿಲ್ಲೆಯನ್ನು ಬೆಳೆಸಿದ್ದಾರೆ. ರಾಮನಗರದಲ್ಲಿ ಅವರಿಗೆ ಯಾರೂ ಸಾಟಿಯಿಲ್ಲ. ಅಶ್ವತ್ಥನಾರಾಯಣ, ಅವರ ಅಪ್ಪ ಹುಟ್ಟುವ ಮುಂಚೆ ಕೆಂಗಲ್ ಹನುಮಂತಯ್ಯ ರಾಮನಗರವನ್ನು ಬೆಳೆಸಿದರು. ಅಲ್ಲಿ ಆಂಜನೇಯನ ದೇವಸ್ಥಾನ ಇದೆ. ಅದಕ್ಕಾಗಿ ರಾಮನಗರ ಎಂದು ನಾಮಕಿಂತ ಆಯಿತು ಎಂದಿದ್ದಾರೆ.
ಬಜೆಟ್‌ನಲ್ಲಿ ಘೋಷಣೆ ಎಂದ ಅಶ್ವತ್ಥನಾರಾಯಣ
ರಾಮನಗರದಲ್ಲಿ ಅಯೋಧ್ಯಾ ಮಾದರಿ ದೇವಸ್ಥಾನ ನಿರ್ಮಾಣದ ಕುರಿತು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ನಮ್ಮ ರಾಮನಗರ ನಾಮಕರಣ ಆಗಿರುವುದೇ ರಾಮನ ಹೆಸರಿನಲ್ಲಿ. ಕೆಂಗಲ್ ಹನುಮಮಂತಯ್ಯ ಅವರು ನಾಮಕರಣ ಮಾಡಿದ್ದಾರೆ. ದೇವಸ್ಥಾನವನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡಲು ಬದ್ಧರಾಗಿದ್ದೇವೆ. ಅದರ ಸಂಪೂರ್ಣ ಪುನರ್ನಿರ್ಮಾಣ ಆಗಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರೂ ಇದರ ಬಗ್ಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಯೋಗಿ ಆದಿತ್ಯನಾಥ ಅವರೂ ಬರುತ್ತಾರೆ. ದಕ್ಷಿಣದಲ್ಲಿ ರಾಮನ ದೇವಸ್ಥಾನವನ್ನು ನಿರ್ಮಾಣ ಮಾಡುತ್ತೇವೆ. ಮುಂದಿನ ಬಜೆಟ್‌ನಲ್ಲೇ ಘೋಷಣೆ ಮಾಡಲು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಲಾಗಿದೆ ಎಂದರು.
ಇದನ್ನೂ ಓದಿ | Ayodhya Ram Mandir | ರಾಮನಗರದ ಭಕ್ತರಿಂದ ರಾಮ ಮಂದಿರಕ್ಕೆ ಬೆಳ್ಳಿ ಇಟ್ಟಿಗೆ, ರೇಷ್ಮೆ ಸೀರೆ, ಶಲ್ಯ ಸಮರ್ಪಣೆ