ಬೆಳಗಾವಿ: ಬದಲಾದ ರಾಜಕೀಯ ಸನ್ನಿವೇಶದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಲೋಕಸಭೆ ಚುನಾವಣೆ ಕ್ಷೇತ್ರದಲ್ಲಿ (Belagavi Lok Sabha Constituency) ಬಿಜೆಪಿಯ ಜಗದೀಶ್ ಶೆಟ್ಟರ್ ಅವರು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಭದ್ರಕೋಟೆಯೇ ಆಗಿರುವ ಬೆಳಗಾವಿಯಲ್ಲಿ ಈ ಬಾರಿ ಬಿಜೆಪಿಯಿಂದ ಜಗದೀಶ್ ಶೆಟ್ಟರ್ (Jagadish Shettar) ಕಣಕ್ಕಿಳಿದರೆ, 2014ರ ಲೋಕಸಭೆ ಚುನಾವಣೆಯಲ್ಲಿ ಸೋಲುಂಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ (Mrinal Hebbalkar) ಸ್ಪರ್ಧಿಸಿದ್ದರು. ಆದರೆ, ಕ್ಷೇತ್ರದ ಮತದಾರರು ಜಗದೀಶ್ ಶೆಟ್ಟರ್ ಅವರನ್ನು 1.33 ಲಕ್ಷ ಮತಗಳಿಂದ ಗೆಲ್ಲಿಸಿದ್ದಾರೆ. ಶೆಟ್ಟರ್ ಗೆಲುವಿನ ಕುರಿತು ಚುನಾವಣೆ ಆಯೋಗವು ಅಧಿಕೃತ ಘೋಷಣೆ ಮಾಡುವುದೊಂದೇ ಬಾಕಿ ಉಳಿದಿದೆ.
ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ಗೆ ತೆರಳಿ, ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಬಿಜೆಪಿಗೆ ವಾಪಸಾದ ಜಗದೀಶ್ ಶೆಟ್ಟರ್ ಅವರು ಸ್ಥಳೀಯ ನಾಯಕರ ವಿಶ್ವಾಸ ಗಳಿಸುವುದು, ಕಾರ್ಯಕರ್ತರಿಗೆ ಬಲ ತುಂಬುವುದು, ಮೋದಿ ಅವರ ಅಲೆಯನ್ನು ಸದುಪಯೋಗ ಮಾಡಿಕೊಳ್ಳುವುದು ಸೇರಿ ಹಲವು ತಂತ್ರಗಳನ್ನು ಹೂಡಿದ್ದರು. ಇನ್ನು ಮಂಗಲಾ ಸುರೇಶ್ ಅಂಗಡಿಯವರು ಜಗದೀಶ್ ಶೆಟ್ಟರ್ ಅವರಿಗೆ ಸಂಬಂಧಿಯಾದ ಕಾರಣ ಅಷ್ಟೇನೂ ಹೊರಗಿನವರು ಎಂಬ ಭಾವನೆ ಇರಲಿಲ್ಲ. ಇನ್ನು, ಜಗದೀಶ್ ಶೆಟ್ಟರ್ ಅವರು ಎರಡು ಬಾರಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು. ಹಾಗಾಗಿ, ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಪರ ಒಲವಿದೆ ಎಂದೇ ಹೇಳಲಾಗುತ್ತಿತ್ತು. ಇದೆಲ್ಲ ಕಾರಣಗಳಿಂದಾಗಿ ಶೆಟ್ಟರ್ ಅವರು ಗೆಲುವು ಸಾಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಗನನ್ನು ಕಣಕ್ಕಿಳಿಸಿ, ಮಗನಿಗಿಂತ ಹೆಚ್ಚಾಗಿ ಅವರೇ ಪ್ರಚಾರ ಕೈಗೊಂಡಿದ್ದರು. ಯುವ ನಾಯಕತ್ವ, ಸುರೇಶ್ ಅಂಗಡಿ ಕುಟುಂಬದ ಪ್ರಾಬಲ್ಯ ಇಲ್ಲದಿರುವುದು, ಗ್ಯಾರಂಟಿ ಯೋಜನೆಗಳು ಸೇರಿ ಹಲವು ಅಂಶಗಳು ಮೃಣಾಲ್ ಹೆಬ್ಬಾಳ್ಕರ್ ಅವರಿಗೆ ಸಕಾರಾತ್ಮಕವಾಗಿವೆ ಎಂಬುದಾಗಿ ಹೇಳಲಾಗುತ್ತಿತ್ತು. ಆದರೆ, ಸುರೇಶ್ ಅಂಗಡಿಯವರು ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದು, ನಂತರ ಮಂಗಲಾ ಅಂಗಡಿಯವರು ಕೂಡ ಗೆದ್ದಿದ್ದು, ಆ ಮೂಲಕ ಬಿಜೆಪಿ ಬೇರುಗಳನ್ನು ಗಟ್ಟಿಗೊಳಿಸಿದ್ದು ಮೃಣಾಲ್‌ಗೆ ಕುತ್ತಾಗುವ ಸಾಧ್ಯತೆ ಇದೆ ಎಂದೇ ವಿಶ್ಲೇಷಿಸಲಾಗುತ್ತಿತ್ತು. ಕೊನೆಗೆ ಇದೇ ಅವರ ಸೋಲಿಗೆ ಮುಳುವಾಯಿತು ಎಂಬುದಾಗಿ ವಿಶ್ಲೇಷಿಸಲಾಗುತ್ತಿದೆ.
ಹಿಂದಿನ ಚುನಾವಣೆ ಫಲಿತಾಂಶ ಏನಾಗಿತ್ತು?
2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸುರೇಶ್ ಅಂಗಡಿ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಗೆಲುವು ಸಾಧಿಸಿದ್ದರು. 2019ರ ಸಾರ್ವತ್ರಿಕ ಚುನಾವಣೆಯಲ್ಲಿಯೂ ಸುರೇಶ್ ಅಂಗಡಿ ಅವರು ಕಾಂಗ್ರೆಸ್‌ನ ವಿರೂಪಾಕ್ಷಿ ಸಾಧುಣ್ಣವರ್ ವಿರುದ್ಧ ಗೆಲುವು ಸಾಧಿಸುವ ಜತೆಗೆ ಕೇಂದ್ರದಲ್ಲಿ ಸಚಿವರೂ ಆಗಿದ್ದರು. ಆದರೆ, ಸುರೇಶ್ ಅಂಗಡಿಯವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ 2021ರಲ್ಲಿ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಿತು. ಆಗ, ಸುರೇಶ್ ಅಂಗಡಿ ಅವರ ಪತ್ನಿ ಮಂಗಲಾ ಸುರೇಶ್ ಅಂಗಡಿ ಅವರು ಸತೀಶ್ ಜಾರಕಿಹೊಳಿ ವಿರುದ್ಧ ಗೆಲುವು ಸಾಧಿಸಿದ್ದರು.
ಇದನ್ನೂ ಓದಿ: Bellary Election Result 2024: ಗಣಿ ನಾಡು ಬಳ್ಳಾರಿಗೆ ಇ. ತುಕಾರಾಮ್ ಧಣಿ; ಶ್ರೀರಾಮುಲುಗೆ ಗರ್ವಭಂಗ!