ಬೆಳಗಾವಿ: ಗೋಕಾಕ ಮತ್ತು ಪಾಶ್ಚಾಪುರ ರಸ್ತೆಯಲ್ಲಿ ಖಾಸಗಿ ಶಾಲೆಯ ಬಸ್ ಪಲ್ಟಿಯಾದ ಘಟನೆ ಇಂದು (ಜುಲೈ 24) ಬೆಳಿಗ್ಗೆ ನಡೆದಿದೆ. ಘಟನೆಯಲ್ಲಿ ಹಲವು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಟೇರಿಂಗ್ ಲಾಕ್ ಆಗಿ ಖಾಸಗಿ ಶಾಲೆಯ ಬಸ್ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ (Belagavi News).
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮಟ್ಟಿ ಬಳಿ ಘಟನೆ ನಡೆದಿದ್ದು, ಐವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿವೆ. ಮರಡಿಮಠದ ಜೈ ಹನುಮಾನ್ ಆಂಗ್ಲ ಮಾಧ್ಯಮ ಶಾಲೆಗೆ ಸೇರಿದ ಈ ಬಸ್‌ನಲ್ಲಿ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ಗೋಕಾಕ ಗ್ರಾಮೀಣ ಪೊಲೀಸ್ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚಿಕ್ಕೋಡಿಯಲ್ಲಿ ನೆರೆ
ಚಿಕ್ಕೋಡಿ: ಬೆಳಗಾವಿ, ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಮತ್ತೊಂದು ನದಿ ಪ್ರವಾಹದ ಆತಂಕ ಸೃಷ್ಟಿಸಿದೆ. ಬಾವನಸೌದತ್ತಿ ಗ್ರಾಮಕ್ಕೆ ಕೃಷ್ಣಾ ನದಿ ನೀರು ಎಂಟ್ರಿಯಾಗಿದ್ದು, ಇಲ್ಲಿನ ಸುಗಂಧಾದೇವಿ ದೇವಸ್ಥಾನ ಜಲಾವೃತಗೊಂಡಿದೆ. ಗ್ರಾಮದ ಎಂಟಕ್ಕೂ ಅಧಿಕ ಮನೆಗಳಿಗೆ ನದಿ ನೀರು ನುಗ್ಗಿದೆ. ಕಾಳಜಿ ಕೇಂದ್ರ ತೆರೆಯದ ಹಿನ್ನೆಲೆಯಲ್ಲಿ ಸಂತ್ರಸ್ತರು ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ.
ಪ್ರವಾಹ ಪರಿಸ್ಥಿತಿ ನಿರ್ಮಾಣ ಆಗಿದ್ದರೂ ಕಾಳಜಿ ಕೇಂದ್ರ ತೆರೆಯದ ಜಿಲ್ಲಾಡಳಿತದ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆ: ತುಂಬಿ ಹರಿಯುತ್ತಿರುವ ಘಟಪ್ರಭಾ ನದಿ
ಬಾಗಲಕೋಟೆ: ಧಾರಾಕಾರ ಮಳೆಯ ಹಿನ್ನಲೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಘಟಪ್ರಭಾ ನದಿ ತುಂಬಿ ಹರಿಯುತ್ತಿದೆ. ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ 31 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಘಟಪ್ರಭಾ ನದಿಯಿಂದ 2.5 ಸಾವಿರ ಕ್ಯೂಸೆಕ್ ಹೊರ ಹರಿವು ಇದ್ದು, ಘಟಪ್ರಭಾ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಹೆಚ್ಚಾಗಿದೆ. ಮುಧೋಳ ತಾಲೂಕಿನ 18 ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕಳೆದ ಒಂದೇ ರಾತ್ರಿಯಲ್ಲಿ ಮುಧೋಳ ತಾಲೂಕಿನ ಮಿರ್ಜಿ-ಅಕ್ಕಿಮರಡಿ, ಒಂಟಗೊಡಿ-ಸೊರಗಾಂವ, ಚನಾಳ, ಢವಳೇಶ್ವರ ಸೇತುವೆ ಮುಳುಗಡೆಯಾಗಿವೆ. ಕ್ಷಣ ಕ್ಷಣಕ್ಕೂ ಘಟಪ್ರಭಾ ನದಿ ಹರಿವು ಹೆಚ್ಚುತ್ತಲೇ ಇದೆ.
ಇದನ್ನೂ ಓದಿ: Road Accident: ಬಸ್-ಕಾರು ಡಿಕ್ಕಿಯಾಗಿ ಶಿಕಾರಿಪುರ ಶಾಲೆಯ ಫಾದರ್ ಸಾವು, ಚಾಲಕನ ಸ್ಥಿತಿ ಗಂಭೀರ