Site icon Vistara News

ಬೆಳಗಾವಿ ಅಧಿವೇಶನ | ಕಾಂಗ್ರೆಸನ್ನು ಹಿಂದುತ್ವದ ಚಕ್ರವ್ಯೂಹದಲ್ಲಿ ಸಿಲುಕಿಸಲು ಬಿಜೆಪಿ ತಯಾರಿ; ಸಾವರ್ಕರ್‌ ಭಾವಚಿತ್ರದಿಂದ ಆರಂಭ

belagavi-session-to-commence-from-monday-bjp-getting-ready-to-trap-congress-in-hindu-issues

ಬೆಳಗಾವಿ: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ಚುನಾವಣಾ ವಿಷಯಗಳನ್ನು ಜನರ ಮನಸ್ಸಿನಲ್ಲಿ ಗಟ್ಟಿಗೊಳಿಸಲು ಬಿಜೆಪಿ ಈಗಾಗಲೆ ಕಾರ್ಯ ಆರಂಭಿಸಿದ್ದು, ಹಿಂದುತ್ವದ ಚಕ್ರವ್ಯೂಹದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸಿಲುಕಿಸಲು ಯೋಜನೆ ರೂಪಿಸಿಕೊಂಡಿದೆ.

ಬೆಳಗಾವಿಯಲ್ಲಿ ಸೊಮವಾರದಿಂದ ಆರಂಭವಾಗುವ 10 ದಿನಗಳ ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನವೇ ಈ ಕುರಿತು ಮುನ್ಸೂಚನೆ ಲಭಿಸುತ್ತಿದ್ದು, ಸಾಮಾನ್ಯವಾಗಿ ಕಾಂಗ್ರೆಸ್‌ ಕೆರಳುವ, ಸ್ವಾತಂತ್ರ್ಯ ವೀರ ಸಾವರ್ಕರ್‌ ಭಾವಚಿತ್ರ ಅನಾವರಣದಿಂದಲೇ ಆರಂಭವಾಗುತ್ತಿದೆ.

ಸಾವರ್ಕರ್‌ ಭಾವಚಿತ್ರ ಅನಾವರಣ

ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ಸಲುವಾಗಿಯೇ ಸುವರ್ಣ ಸೌಧ ನಿರ್ಮಿಸಿ, ವರ್ಷಕ್ಕೊಮ್ಮೆ ಇಲ್ಲಿ ಅಧಿವೇಶನ ಕರೆದು ಚರ್ಚೆ ಮಾಡಲಾಗುತ್ತದೆ. ಇಷ್ಟು ವರ್ಷದಿಂದ ಅಧಿವೇಶನ ನಡೆಯುತ್ತಿದೆಯಾದರೂ, ವಿಧಾನಸೌಧದಲ್ಲಿರುವಂತೆ ಅಧಿವೇಶನ ನಡೆಯುವ ಸೆಂಟ್ರಲ್‌ ಹಾಲ್‌ನಲ್ಲಿ ಮಹಾಪುರುಷರ, ಸ್ವಾತಂತ್ರ್ಯ ಯೋಧರ ಚಿತ್ರಗಳು ಅನಾವರಣಗೊಳ್ಳಲಿವೆ. ಮಹಾತ್ಮ ಗಾಂಧೀಜಿ, ಡಾ. ಬಿ.ಆರ್‌. ಅಂಬೇಡ್ಕರ್, ವೀರ ಸಾವರ್ಕರ್ ಸೇರಿ ಏಳು ಫೋಟೋಗಳನ್ನು ಅನಾವರಣ ಮಾಡಲು ಸರ್ಕಾರ ಮುಂದಾಗಿದೆ‌.

ಈಗಾಗಲೆ ಹಾಲ್‌ನಲ್ಲಿ ಫೋಟೊ ಅಳವಡಿಸಲಾಗಿದ್ದು, ಪರದೆಯಿಂದ ಮುಚ್ಚಲಾಗಿದೆ. ಸೋಮವಾರ ಬೆಳಕ್ಕೆ 10.30ಕ್ಕೆ ಈ ಭಾವಚಿತ್ರಗಳನ್ನು ಅನಾವರಣ ಮಾಡಲಾಗುತ್ತದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ಹಿಂದೆ ನಡೆದ ಚರ್ಚೆಗಳಿಗೆ ಅನುಗುಣವಾಗಿ ಮಹಾ ಪುರುಷರ ಭಾವಚಿತ್ರಗಳನ್ನು ಅನಾವರಣ ಮಾಡಲಾಗುತ್ತಿದೆ. ಅದು ಯಾರ‍್ಯಾರ ಭಾವಚಿತ್ರ ಎನ್ನುವುದನ್ನು ಸೋಮವಾರ ಇಡೀ ಜಗತ್ತೇ ನೋಡಲಿದೆ ಎಂದಿದ್ದಾರೆ. ಈ ಭಾವಚಿತ್ರಗಳನ್ನು ಅಳವಡಿಸಬೇಕು ಎನ್ನುವುದು ಸರ್ಕಾರದ ನಿರ್ಧಾರವೋ, ವಿಧಾನಸಭೆಯ ನಿರ್ಧಾರವೋ ಎಂಬ ಪ್ರಶ್ನೆಗೆ, ಸದನದಲ್ಲಿ ನಡೆಯುವ ಎಲ್ಲ ಕಾರ್ಯಗಳಿಗೂ ಸ್ಪೀಕರ್‌ ಹೊಣೆಗಾರ ಎಂದು ತಿಳಿಸಿದ್ದಾರೆ.

ಬಿಜೆಪಿಯ ಲೆಕ್ಕಾಚಾರದಂತೆ, ಸಾವರ್ಕರ್‌ ಭಾವಚಿತ್ರಕ್ಕೆ ಸಹಜವಾಗಿ ಕಾಂಗ್ರೆಸ್‌ನಿಂದ ವಿರೋಧ ವ್ಯಕ್ತವಾಗುತ್ತದೆ. ಸಾವರ್ಕರ್‌ ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದಿದ್ದರು ಎನ್ನುವುದರಿಂದ ಅವರನ್ನು ತೆಗಳಿ, ಭಾವಚಿತ್ರ ಅನಾವರಣ ಮಾಡಿದ್ದನ್ನು ವಿರೋಧಿಸುತ್ತದೆ. ಇದು ಬಿಜೆಪಿ ಕೈಗೆ ಮತ್ತಷ್ಟು ಅಸ್ತ್ರಗಳನ್ನು ನೀಡುತ್ತದೆ. ಕಾಂಗ್ರೆಸ್‌ ಏನಾದರೂ ಬುದ್ಧಿವಂತಿಕೆ ಉಪಯೋಗಿಸಿ ಯಾವುದೇ ವಿರೋಧ ವ್ಯಕ್ತಪಡಿಸದೇ ಇದ್ದರೂ ಬಿಜೆಪಿಯ ಸಾಂಪ್ರದಾಯಿಕ ಹಿಂದು ಮತಗಳು ಗಟ್ಟಿಯಾಗುತ್ತವೆ. ಬಿಜೆಪಿಯು ಪ್ರಖರ ಹಿಂದುತ್ವವನ್ನು ಪ್ರತಿಪಾದನೆ ಮಾಡುತ್ತಿಲ್ಲ ಎಂಬ ಹಿಂದುತ್ವವಾದಿಗಳ ಬೇಸರವನ್ನು ಶಮನಗೊಳಿಸಲೂ ಉಪಯೋಗವಾಗುತ್ತದೆ. ಒಟ್ಟಿನಲ್ಲಿ ಯಾವುದೇ ಕಡೆಯಿಂದ ಬಿಜೆಪಿಗೆ ಇದು ಲಾಭದಾಯಕ ಕಾರ್ಯ.

ಮತ್ತಷ್ಟು ಹಿಂದು ಅಸ್ತ್ರಗಳು
ಸಾವರ್ಕರ್‌ ಭಾವಚಿತ್ರ ಅನಾವರಣದಿಂದ ಆರಂಭವಾಗುವ ಹಿಂದುತ್ವ ಕೇಂದ್ರಿತ ವಿಚಾರಗಳನ್ನು ಸದನದ ಒಳಗಿನ ಚರ್ಚೆಯಲ್ಲೂ ಬಿಜೆಪಿ ಕೈಗೆತ್ತಿಕೊಳ್ಳಲಿದೆ. ಹಲಾಲ್‌ ಪ್ರಮಾಣಪತ್ರ ನೀಡುವುದನ್ನು ತಡೆಗಟ್ಟಲು ಖಾಸಗಿ ಮಸೂದೆ ಮಂಡನೆಗೆ ಈಗಾಗಲೆ ಎಂಎಲ್‌ಸಿ ಎನ್‌. ರವಿಕುಮಾರ್‌ ಪ್ರಸ್ತಾವನೆ ಸಲ್ಲಿಸಿದ್ದಾರೆ. ರಾಜ್ಯದ ವಿವಿಧೆಡೆ ದೇವಸ್ಥಾನದ ಆಸ್ತಿಗಳನ್ನು ಅಕ್ರಮವಾಗಿ ವಶಕ್ಕೆ ಪಡೆದಿರುವುದರ ವಿರುದ್ಧ ಶಶಿಕಲಾ ಜೊಲ್ಲೆ ಜತೆ ಸೇರಿ ಕಾರ್ಯಾಚರಣೆ ಆರಂಭಿಸಿದ್ದಾರೆ.

ಬಿಜೆಪಿ ಅಧಿಕಾರದ ವಿವಿಧ ರಾಜ್ಯಗಳಂತೆ ಕರ್ನಾಟಕದಲ್ಲೂ ಏಕರೂಪ ನಾಗರಿಕ ಸಂಹಿತೆ ಜಾರಿ ವಿಧೇಯಕ ಮಂಡನೆಗೆ ಸಿದ್ಧತೆ ನಡೆದಿದೆ ಎನ್ನಲಾಗಿದೆ. ಲವ್ ಜಿಹಾದ್ ನಿಷೇಧಕ್ಕೆ ಮಸೂದೆ ಮಂಡಿಸುವ ಸಾಧ್ಯತೆಯಿದೆ. ಕಳೆದ ವರ್ಷವೇ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಂತೆ, ದೇವಸ್ಥಾನಗಳನ್ನು ಸರ್ಕಾರದ ಆಡಳಿತದಿಂದ ಮುಕ್ತಗೊಳಿಸುವ ಕುರಿತು ಚರ್ಚೆಯಾಗುವ ಸಾಧ್ಯತೆಯಿದೆ.

ಈಗಾಗಲೆ ಎಸ್‌ಸಿಎಸ್‌ಟಿ ಮೀಸಲಾತಿ ಹೆಚ್ಚಳದ ಸುಗ್ರೀವಾಜ್ಞೆ ಹೊರಡಿಸಿರುವ ಸರ್ಕಾರ, ಅದಕ್ಕೆ ಕಾಯ್ದೆಯ ರೂಪ ನೀಡಲಿದೆ. ಎಸ್‌ಸಿ ಸಮುದಾಯಕ್ಕೆ ಒಳಮೀಸಲಾತಿ, ಬ್ರಾಹ್ಮಣ ಸಮುದಾಯಕ್ಕೆ ಉಪಯೋಗವಾಗುವ ಇಡಬ್ಲ್ಯುಎಸ್‌ ಮೀಸಲಾತಿ ಜಾರಿಯಂತ್ರಹ ಜಾತಿ ಕೇಂದ್ರಿತ ವಿಚಾರಗಳ ಮೂಲಕ ಹೊಸ ಮತದಾರರನ್ನು ಸೆಳೆಯಲು ಮುಂದಾಗಿದೆ. ಇನ್ನೊಂದೆಡೆ ಸಾಂಪ್ರದಾಯಿಕ ಹಿಂದು ಮತಗಳನ್ನು ಗಟ್ಟಿಗೊಳಿಸಿಕೊಳ್ಳಲು ಹಿಂದುತ್ವ ಕೇಂದ್ರಿತ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಿದೆ.

ಎಳು ಮಸೂದೆಗಳ ಮಂಡನೆ

ಸದನದಲ್ಲಿ ಈ ಬಾರಿ ಒಟ್ಟು 7 ವಿಧೇಯಕಗಳು ಮಂಡನೆ ಆಗಲಿವೆ. ಈಗಾಗಲೆ ಸುಗ್ರೀವಾಜ್ಞೆ ಹೊರಡಿಸಲಾಗಿರುವ ಎಸ್‌ಸಿಎಸ್‌ಟಿ ಮೀಸಲಾತಿ ಹೆಚ್ಚಳವನ್ನು ಕಾಯ್ದೆಯಾಗಿ ಪರಿವರ್ತಿಸಲಾಗುತ್ತದೆ. ಅದರ ಜತೆಗೆ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ, ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ, ಭೂ ಕಂದಾಯ ಕಾಯಿದೆ ತಿದ್ದುಪಡಿ ವಿಧೇಯಕ, ಅನುಸೂಚಿತ ಜಾತಿ ಮತ್ತು ಪಂಗಡಗಳ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ರಾಜ್ಯಾಧೀನ ಸಂಸ್ಥೆಗಳಲ್ಲಿ ನೇಮಕಾತಿ ಹಾಗೂ ಹುದ್ದೆಗಳಿಗೆ ಮೀಸಲಾತಿ ವಿಧೇಯಕ, ಕರ್ನಾಟಕ ಪ್ರದೇಶ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕಗಳನ್ನು ಮಂಡನೆ ಮಾಡಲಾಗುತ್ತದೆ.

ಅಧಿವೇಶನಕ್ಕೆ ಕಾಂಗ್ರೆಸ್‌ ಸಿದ್ಧತೆ

ಅಧಿವೇಶನ ಆರಂಭಕ್ಕೂ ಮುನ್ನವೇ ಮುಂಬರುವ ಚುನಾವಣೆಗಳ ಕುರಿತಂತೆ ಕಾಂಗ್ರೆಸ್‌ ಸರಣಿ ಸಭೆಗಳನ್ನು ನಡೆಸಿತು. ಟಿಕೆಟ್ ಹಂಚಿಕೆ, ಬಸ್ ಯಾತ್ರೆಯ ರೂಟ್ ಮ್ಯಾಪ್ ಕುರಿತು ಮಹತ್ವದ ಚರ್ಚೆಗಳು ನಡೆದವು. ಸರ್ವೆ ಆಧಾರದಲ್ಲಿ ತಂತ್ರಗಾರಿಕೆ ಕುರಿತು ಮಹತ್ವದ ಚರ್ಚೆ ನಡೆಸಲಾಯಿತು. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಬಸ್ ಯಾತ್ರೆಯ ವೇಳೆ ಮಾಡಬೇಕಾದ ಸಿದ್ಧತೆಗಳ ಕುರಿತು ಚರ್ಚೆ ನಡೆದಿದೆ.

ಅಧಿವೇಶನದಲ್ಲಿ ಕೈಗೆತ್ತಿಕೊಳ್ಳಬೇಕಾದ ವಿಷಯಗಳನ್ನೂ ಚರ್ಚಿಸಲಾಗಿದೆ. ಮಹದಾಯಿ, ಕೃಷ್ಣ ನೀರಾವರಿ ಯೋಜನೆ ಕುರಿತು ನಡೆಸುವ ಸಮಾವೇಶಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಗಿದೆ. ಸೋಮವಾರ ಸಂಜೆ ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಮತ್ತಷ್ಟು ಸಮಾಲೋಚನೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಅಧಿವೇಶನಕ್ಕೆ ಬಿಗಿ ಬಂದೋಬಸ್ತ್‌
ಈ ಬಾರಿ ಬಂದೋಬಸ್ತ್ ನಿಯೋಜಿಸಿದ್ದೇವೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ತಿಳಿಸಿದ್ದಾರೆ. ಚಿಕ್ಕಮಗಳೂರು, ಕೊಡುಗು ಮಂಡ್ಯ, ಚಿಕ್ಕಬಳ್ಳಾಪುರ, ಉತ್ತರ ಕರ್ನಾಟಕ ಸೇರಿ ವಿವಿಧ ಜಿಲ್ಲೆಗಳ ಪೊಲೀಸ್ ನಿಯೋಜಿಸಿದ್ದೇವೆ. ಐದು ಐಪಿಎಸ್ ಅಧಿಕಾರಿಗಳು, ಎಂಟು ಅಡಿಷನಲ್ ಎಸ್ಪಿ, 35ಡಿಎಸ್‌ಪಿ, ಇನ್ಸ್ಪೆಕ್ಟರ್ ಮತ್ತು ಸಬ್ ಇನ್ಸ್ಪೆಕ್ಟರ್ ನಿಯೋಜಿಸಿದ್ದೇವೆ.

ಬೆಳಗಾವಿ ನಗರದಲ್ಲಿ 32 ಕೆಎಸ್ಆರ್‌ಪಿ ತಂಡ ನಿಯೋಜಿಸಲಾಗಿದೆ. ಗಡಿ ಬಾಗದಲ್ಲಿ ಹದ್ದಿನ‌ ಕಣ್ಣಿಟ್ಟಿದ್ದೇವೆ. ಬೇರೆ ಕಡೆಯಿಂದ ಬಂದು ಗಲಾಟೆ ಮಾಡದಂತೆ ತಡೆಯಲಿದ್ದೇವೆ. ವಿವಿಧ ಬೇಡಿಕೆಗಳನ್ನು ಈಡೇರಿಸಲು ಪ್ರತಿಭಟನೆಗಾಗಿ ಸುವರ್ಣ ಸೌಧದ ಹೊರ ವಲಯದ ಕೊಂಡಸಕಪ್ಪದಲ್ಲಿ ಅವಕಾಶ ಮಾಡಿದ್ದೇವೆ. ಪೊಲೀಸರಿಗೆ ವಸತಿ ಮತ್ತು ಊಟದ ವ್ಯವಸ್ಥೆ ಮಾಡಿದ್ದೇವೆ. ಬೆಳಗಾವಿ ನಗರದಲ್ಲಿ ಏನಾಗುತ್ತಿದೆ ಎಂದು ಗಮನಿಸಲು ಆರು ಡ್ರೋನ್ ಬಳಸುತ್ತಿದ್ದೇವೆ.

ಮಹಮೇಳ ನಡೆಯುತ್ತಿದ್ದು, ಯಾವುದೇ ಅಹಿತರ ಘಟನೆಯಾಗದಂತೆ ಕ್ರಮ ಕೈಗೊಂಡಿದ್ದೇವೆ. ಪದೇಪದೆ ಗಡಿ ಕ್ಯಾತೆ ತೆಗೆಯುವವರ ಮೇಲೆ ಹದ್ದಿನ ಕಣ್ಣಿಟ್ಟಿದ್ದೇವೆ. ಸುವರ್ಣ ಸೌಧ ಸುತ್ತ ಒಂದು ಕಿ.ಮೀ. ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ | Border Dispute | ಬೆಳಗಾವಿ ಅಧಿವೇಶನಕ್ಕಾಗಿ ಆಗಮಿಸಿದ್ದ ಸರ್ಕಾರಿ ವಾಹನಕ್ಕೆ ಮರಾಠಿ ಪುಂಡರಿಂದ ಕಲ್ಲು ತೂರಾಟ

Exit mobile version