Site icon Vistara News

Belagavi Winter Session: 1 ಗಂಟೆ ಸದನ ತಡ; ಉತ್ತರ ಕರ್ನಾಟಕಕ್ಕೆ ಮಾಡಿದ ಅಪಮಾನವೆಂದ ರಾಯರೆಡ್ಡಿ, ಯತ್ನಾಳ್!

Belagavi Winter Session House delayed by 1 hour

ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ (ಡಿ. 4) ವಿಧಾನ ಮಂಡಲ ಅಧಿವೇಶನ (Belagavi Winter Session) ಆರಂಭವಾಗಿದೆ. ಆದರೆ, ಒಂದು ಗಂಟೆ ವಿಳಂಬವಾಗಿ ಆರಂಭವಾಗಿರುವುದಕ್ಕೆ ಹಿರಿಯ ಸದಸ್ಯರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಈ ಬಾರಿ ಅಧಿವೇಶನ ಇರುವುದೇ 10 ದಿನವಾಗಿದೆ. ಅದರಲ್ಲೂ ಹೀಗೆ ಗಂಟೆಗಟ್ಟಲೆ ವಿಳಂಬವಾದರೆ ಹೇಗೆ ಎಂದು ಕೇಳಿದ್ದಾರೆ. ಇದು ಉತ್ತರ ಕರ್ನಾಟಕಕ್ಕೆ (Uttara Karnataka) ಮಾಡಿದ ಅಪಮಾನ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ವಿಧಾನ ಮಂಡಲ ಅಧಿವೇಶನವನ್ನು ಒಂದು ಗಂಟೆ ವಿಳಂಬವಾಗಿ ಪ್ರಾರಂಭ ಮಾಡಲಾಗಿದೆ. ಸಿಎಂ ಆದಿಯಾಗಿ ಕೆಲವರು ಬರುವುದು ವಿಳಂಬವಾಗಿದೆ. ಅಲ್ಲದೆ, ಇನ್ನೂ ಹಲವಾರು ಮಂದಿ ಗೈರಾಗಿದ್ದಾರೆ. 11 ಗಂಟೆಗೆ ಆರಂಭವಾಗಬೇಕಿದ್ದ ಸದನ 1 ಗಂಟೆ ವಿಳಂಬವಾಗಿರುವುದರ ಬಗ್ಗೆ ಮೊದಲು ಶಾಸಕ ಸುರೇಶ್ ಕುಮಾರ್ (MLA Suresh Kumar) ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಸದನ ಹೀಗೆ ಒಂದು ಗಂಟೆ ವಿಳಂಬವಾದರೆ ಹೇಗೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಶಾಸಕ ಸುರೇಶ್‌ ಕುಮಾರ್ ಮಾತಿಗೆ ಧ್ವನಿಗೂಡಿಸಿದ ಶಾಸಕ ಬಸವರಾಜ್ ರಾಯರೆಡ್ಡಿ (Basavaraj Rayareddy), ಹೌದು. ಯಾವ ಕಾರಣಕ್ಕೆ ವಿಳಂಬ ಮಾಡಲಾಗಿದೆಯೋ ಗೊತ್ತಿಲ್ಲ. ಆದರೆ, ಇದರಿಂದ ಉತ್ತರ ಕರ್ನಾಟಕಕ್ಕೆ ಅಪಮಾನ ಆಗಲಿದೆ. ಯಾರು ಬರಲಿ ಬಿಡಲಿ ಸರಿಯಾದ ಸಮಯಕ್ಕೆ ಅಧಿವೇಶನ ಆರಂಭಿಸಿ ಎಂದು ಆಗ್ರಹಿಸಿದರು.

ಬಸವರಾಜ ರಾಯರೆಡ್ಡಿ ಮಾತು ಮುಗಿಸುತ್ತಿದ್ದಂತೆ ಎದ್ದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basana Gowda Patil Yatnal), ಆ ಮಾತಿಗೆ ಸಹಮತ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಬಾರದು. ಈ ಭಾಗಕ್ಕೆ ಅತಿ ಹೆಚ್ಚು ಚರ್ಚೆಗೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು.

ಅಗಲಿದ ಗಣ್ಯರಿಗೆ ಸಂತಾಪ

ವಿಧಾನಸಭೆ ಮಾಜಿ ಸಭಾಧ್ಯಕ್ಷ ಡಿ.ಬಿ. ಚಂದ್ರೇಗೌಡ, ಮಾಜಿ ಸಚಿವ ರಂಗದೇವರಾಯಲು, ಮಾಜಿ ಶಾಸಕ ವೆಂಕಟೇಶಪ್ಪ, ಮಾಜಿ ಶಾಸಕ ಶ್ರೀಕಾಂತ್ ಶೆಟ್ಟಪ್ಪ ಭೀಮಣ್ಣನವರ್, ಮಾಜಿ ಶಾಸಕ, ವಿಲಾಸ್ ಬಾಬು ಅಲಮೇಲ್ಕರ್, ಮಾಜಿ ರಾಜ್ಯಪಾಲ ಬಿ.ಬಿ ಆಚಾರ್ಯ ಅವರಿಗೆ ಇದೇ ವೇಳೆ ವಿಧಾನಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಅಲ್ಲದೆ, ಕರ್ನಾಟಕದ ಎಂ.ವಿ ಪ್ರಾಂಜಲ್ ಸೇರಿದಂತೆ ಹುತಾತ್ಮ ಐದು ಯೋಧರಿಗೆ ಸಂತಾಪ ಸಲ್ಲಿಸಲಾಯಿತು.

ಇದನ್ನೂ ಓದಿ: Belagavi Winter Session: ಬರ ವೈಫಲ್ಯ ಬಗ್ಗೆ ವಿಪಕ್ಷಗಳಿಂದ ಮೊದಲ ದಿನವೇ ನಿಲುವಳಿ ನೋಟಿಸ್‌!

ವಿಧಾನ ಪರಿಷತ್ ಸಂತಾಪ ಸೂಚನೆ

ಮಾಜಿ ಸಚಿವ ಡಿ.ಬಿ. ಚಂದ್ರೇಗೌಡ, ಸಹಕಾರ ಕ್ಷೇತ್ರದ ಭೀಷ್ಮ ಎಂದು ಪ್ರಖ್ಯಾತಿ ಪಡೆದ ಬಿ.ಎಸ್. ವಿಶ್ವನಾಥ್, ಹಿರಿಯ ವಿಜ್ಞಾನಿಗಳಾದ ಪ್ರೊ ಎಂ.ಆರ್ ಸತ್ಯನಾರಾಯಣ್, ಡಾ.ವಿ.ಎಸ್ ಅರುಣಾಚಲಂ, ಹಿರಿಯ ಗಣಿತ ಪಂಡಿತ ಡಾ. ಕಲ್ಯಂಪುಡಿ ರಾಧಾಕೃಷ್ಣರಾವ್, ಹಿರಿಯ ಕೃಷಿ ವಿಜ್ಞಾನಿ ಡಾ.ಎಂ.ಎಸ್. ಸ್ವಾಮಿನಾಥನ್, ಚಲನಚಿತ್ರ ನಟಿ ಮಮತಾ ಗುಡೂರು, ಹಿರಿಯ ಲೇಖಕಿ ಡಾ. ಕಮಲಾ ಹೆಮ್ಮಿಗೆ, ಹಿರಿಯ ಪತ್ರಕರ್ತ ಜಿ.ಎನ್ ರಂಗನಾಥ್ ರಾವ್ ಅವರಿಗೆ ವಿಧಾನ ಪರಿಷತ್ ಕಲಾಪದಲ್ಲಿ ಸಂತಾಪ ಸೂಚಿಸಲಾಯಿತು.

Exit mobile version