ಬೆಳಗಾವಿ: ಸೋಮವಾರ ಆನ್‌ಲೈನ್ ಗೇಮಿಂಗ್ (Online Gaming), ಆನ್‌ಲೈನ್ ಮನಿ ಗೇಮಿಂಗ್, ಬೆಟ್ಟಿಂಗ್, ಕ್ಯಾಸಿನೋ, ಜೂಜು, ಕುದುರೆ ರೇಸ್, ಲಾಟರಿ ಆಟಗಳಿಗೆ ತೆರಿಗೆ ವಿಧಿಸಲು ಅನುಕೂಲವಾಗುವಂತೆ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಎರಡನೇ ತಿದ್ದುಪಡಿ ವಿಧೇಯಕ-2023 (KGST second Ammendment bill 2023) ಸೇರಿದಂತೆ ಒಟ್ಟು 8 ವಿಧೇಯಕಗಳನ್ನು ವಿಧಾನಸಭೆಯಲ್ಲಿ (Belagavi Winter Session) ಮಂಡಿಸಿ ಅಂಗೀಕಾರವನ್ನು ಪಡೆದುಕೊಳ್ಳಲಾಗಿತ್ತು. ಮಂಗಳವಾರ ಕರ್ನಾಟಕ ಮೋಟಾರು ವಾಹನ ತೆರಿಗೆ ವಿಧೇಯಕ ಸೇರಿ ಮೂರು ಬಿಲ್‌ಗಳನ್ನು ಮಂಡನೆ ಮಾಡಲಾಗಿದೆ. ಸರಕು ವಾಹನಗಳ ಪೂರ್ಣಾವಧಿ ತೆರಿಗೆ ಪರಿಷ್ಕರಣೆ (Full time tax revision on goods vehicles) ಸೇರಿದಂತೆ ಇನ್ನಿತರ ದರಗಳಲ್ಲಿ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಮಂಡಿಸಿದ ಮೂರು ಬಿಲ್‌ಗಳು ಯಾವುವು?
- 2023ನೇ ಸಾಲಿನ ಕರ್ನಾಟಕ ಉಚ್ಚ ನ್ಯಾಯಾಲಯ ವಿಧೇಯಕ ಮಂಡನೆ
- 2023ನೇ ಸಾಲಿನ ಕರ್ನಾಟಕ ಸಿವಿಲ್ ನ್ಯಾಯಾಲಯ ವಿಧೇಯಕ ಮಂಡನೆ
- 2023ನೇ ಸಾಲಿನ ಕರ್ನಾಟಕ ಮೋಟಾರು ವಾಹನ ತೆರಿಗೆ ವಿಧೇಯಕ ಮಂಡನೆ
ವಾಹನ ತೆರಿಗೆಯಲ್ಲಿ ಹೆಚ್ಚಳ?
ಕರ್ನಾಟಕ ಮೋಟಾರು ವಾಹನ ತೆರಿಗೆ ವಿಧೇಯಕದಿಂದ ಸರಕು ವಾಹನಗಳ ಪೂರ್ಣಾವಧಿ ತೆರಿಗೆ ಪರಿಷ್ಕರಣೆ, ಹೊಸ ಸರಕು ವಾಹನಗಳಿಗೆ ಒಟ್ಟಾರೆ ತೂಕದ ಮೇಲೆ ಪೂರ್ಣಾವಧಿ ತೆರಿಗೆ, ಸರಕು ವಾಹನ ನೋಂದಣಿಯಾದಾಗಿನಿಂದ ಅದರ ಬಳಕೆ ವರ್ಷದ ವರೆಗಿನ ತೆರಿಗೆಯನ್ನು ಪರಿಷ್ಕರಣೆ, ಮೋಟಾರು ಕ್ಯಾಬ್ಗಳ ಪೂರ್ಣಾವಧಿ ತೆರಿಗೆ ವಿಧಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಆನ್‌ಲೈನ್ ಗೇಮಿಂಗ್‌ಗೆ ಕಡಿವಾಣ
ಆನ್‌ಲೈನ್ ಗೇಮಿಂಗ್, ಆನ್‌ಲೈನ್ ಮನಿ ಗೇಮಿಂಗ್, ಬೆಟ್ಟಿಂಗ್, ಕ್ಯಾಸಿನೋ, ಜೂಜು, ಕುದುರೆ ರೇಸ್, ಲಾಟರಿ ಆಟಗಳಿಗೆ ನಿರ್ದಿಷ್ಟ ಪಡಿಸಿದ ಕ್ರಮಗಳಲ್ಲಿ ಕ್ಲೇಮುಗಳ ಹಾಗೂ ವರ್ಚುವಲ್ ಡಿಜಿಟಲ್ ಆಸ್ತಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ 2017 ಮತ್ತು ಅನುಸೂಚಿ 3ಕ್ಕೆ ತಿದ್ದುಪಡಿ ಮಾಡಲಾಗಿದೆ. ಇದನ್ನು ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ಅಧಿನಿಯಮದ ಮೂಲಕ ಸೇರ್ಪಡೆ ಮಾಡಲಾಗಿದೆ. 2023ರ ಅಕ್ಟೋಬರ್ 1ರಂದು ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮಕ್ಕೆ ಈ ತಿದ್ದುಪಡಿಗಳನ್ನು ಸೇರಿಸುವಂತೆ ಜಿಎಸ್‌ಟಿ ಪರಿಷತ್ ಸಚಿವಾಲಯ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಈ ವಿಧೇಯಕವನ್ನು ಮಂಡಿಸಿ ಒಪ್ಪಿಗೆಯನ್ನು ಪಡೆಯಲಾಗಿತ್ತು. ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕ 2023 ನ್ನು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕೆಲವು ದಿನಗಳ ಹಿಂದೆ ವಿಧಾನಸಭೆಯಲ್ಲಿ ಮಂಡಿಸಿದ್ದರು.
ಕೇಂದ್ರದ ಸೂಚನೆಯಂತೆ ಬದಲಾವಣೆ
ಪ್ರಸಕ್ತ ಸಾಲಿನ ಅ. 1ರಿಂದ ಜಾರಿಗೆ ಬರುವಂತೆ ಸಂಬಂಧಪಟ್ಟ ರಾಜ್ಯದ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮಕ್ಕೆ ತಿದ್ದುಪಡಿಗಳನ್ನು ಸೇರಿಸುವಂತೆ ಆ.11 ರಂದು ಜಿಎಸ್‌ಟಿ ಸಚಿವಾಲಯವು ತಿಳಿಸಿದೆ. ಹೀಗಾಗಿ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ-2017 ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಲಾಗಿತ್ತು. ಆ ನಿಟ್ಟಿನಲ್ಲಿ ಸದ್ಯ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಎರಡನೇ ತಿದ್ದುಪಡಿ ವಿಧೇಯಕವನ್ನು ಅಂಗೀಕಾರ ಮಾಡಲಾಗಿದೆ.
ಇದನ್ನೂ ಓದಿ: ಮಹಿಳೆಯ ವಿವಸ್ತ್ರಗೊಳಿಸಿದವರಿಗೆ ಕಠಿಣ ಶಿಕ್ಷೆ; ಪ್ರೀತಿಸಿ ಮದುವೆಯಾಗೋದು ಹೆಚ್ಚಾಗಿದೆ: ಡಾ. ಜಿ. ಪರಮೇಶ್ವರ್
ಸೋಮವಾರ ಮಂಡನೆಯಾಗಿದ್ದ ವಿಧೇಯಕಗಳು
1. 2023ನೇ ಸಾಲಿನ ಕರ್ನಾಟಕ ಸ್ಟಾಂಪು(ತಿದ್ದುಪಡಿ) ವಿಧೇಯಕ ಅಂಗೀಕಾರ
2023ನೇ ಸಾಲಿನ ಕರ್ನಾಟಕ ಸ್ಟಾಂಪು(ತಿದ್ದುಪಡಿ) ವಿಧೇಯಕವನ್ನು ವಿಧಾನಸಭೆ ಅಂಗೀಕರಿಸಿದೆ. ನೋಂದಣಿ ಇಲಾಖೆಯಲ್ಲಿ ಸ್ಟಾಂಪ್ನಿಂದ ಬರುವ ಆದಾಯ ಕೇವಲ ಶೇಕಡಾ 10ಕ್ಕೆ ಸೀಮಿತವಾಗಿದೆ. ಸೋರಿಕೆ ತಡೆಗಟ್ಟಲು ಕ್ರಮದ ಜೊತೆಗೆ ಪರಿಷ್ಕರಣೆಗೆ ನಿರ್ಧರಿಸಿರುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
2.ಕರ್ನಾಟಕ ನ್ಯಾಯವಾದಿಗಳ ವಿರುದ್ಧ ಹಿಂಸಾಚಾರ ತಡೆ ವಿಧೇಯಕ-2023 ಮಂಡನೆ
3. ಕರ್ನಾಟಕ ಅನುಸೂಚಿತ ಜಾತಿ/ಬುಡಕಟ್ಟುಗಳ ಉಪ ಹಂಚಿಕೆ ತಿದ್ದುಪಡಿ ವಿಧೇಯಕ -2023 ಮಂಡನೆ
4. ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣೆ ಪ್ರಾಧಿಕಾರ ತಿದ್ದುಪಡಿ ವಿಧೇಯಕ-2023 ಮಂಡನೆ
5. 2023ನೇ ಸಾಲಿನ ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕ ಮಂಡನೆ.
6. 2023ನೇ ಸಾಲಿನ ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ.
7. 2023ನೇ ಸಾಲಿನ ವೈದ್ಯಕೀಯ ಕೋರ್ಸ್ ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವೆ ತಿದ್ದುಪಡಿ ವಿಧೇಯಕ ಅಂಗೀಕಾರ.