Site icon Vistara News

Belagavi Winter Session: ಸದನದಲ್ಲಿ ಎಲೆ ಚುಕ್ಕಿ ರೋಗ ಸದ್ದು; ಗಂಭೀರವಾಗಿ ಪರಿಗಣಿಸಿದ ಸರ್ಕಾರ

Leaf spot disease in Karnataka

ಬೆಳಗಾವಿ: ಮಲೆನಾಡು, ಕರಾವಳಿ ಹಾಗೂ ಮಧ್ಯ ಕರ್ನಾಟಕ ಭಾಗದ ಕೆಲವು ಕಡೆ ಅಡಿಕೆ ಬೆಳೆಗೆ ಕಾಡುತ್ತಿರುವ ಎಲೆ ಚುಕ್ಕಿ ರೋಗದ (Leaf spot Disease) ವಿಷಯ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ (Belagavi Winter Session) ಪ್ರಸ್ತಾಪವಾಗಿದೆ. ಎಲೆ ಚುಕ್ಕಿ ರೋಗದ ತೀವ್ರತೆ ಬಗ್ಗೆ ಪರಿಷತ್‌ನಲ್ಲಿ ಪರಿಷತ್ ಸದಸ್ಯ ರುದ್ರೇಗೌಡ (Council member Rudregowda) ಅವರು ಪ್ರಸ್ತಾಪಿಸಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ (Agriculture Minister N Chaluvarayaswamy) ಉತ್ತರಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ ಪರಿಷತ್ ಸದಸ್ಯ ರುದ್ರೇಗೌಡ, ಎಲೆ ಚುಕ್ಕಿ ರೋಗದಿಂದ ರೈತರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಸರ್ಕಾರ ರೋಗ ನಿಯಂತ್ರಣ ಮಾಡಲು ಯಾವ ಕ್ರಮ ಕೈಗೊಂಡಿದೆ? ಎಂದು ಪ್ರಶ್ನೆ ಮಾಡಿದ್ದಾರೆ.

ಸರ್ಕಾರದ ಪರವಾಗಿ ಕೃಷಿ ಸಚಿವ ಚಲುವರಾಯಸ್ವಾಮಿ ಉತ್ತರ ನೀಡಿದ್ದು, ಈ ಎಲೆ ಚುಕ್ಕೆ ರೋಗ ರೈತರಿಗೆ ತೊಂದರೆ ಕೊಡುತ್ತಿದೆ. ಇದರಿಂದ ಸಾಕಷ್ಟು ಹಾನಿಯಾಗಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಇದನ್ನು ತೊಡೆದುಹಾಕಲು ಸಾಕಷ್ಟು ಪ್ರಮಾಣದಲ್ಲಿ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಈ ರೋಗದಿಂದ ತೊಂದರೆಗೆ ಒಳಗಾದ ರೈತರಿಗೆ ಈಗಾಗಲೇ ಸರ್ಕಾರದಿಂದ ಪರಿಹಾರ ಕೊಡಲಾಗಿದೆ ಎಂದು ತಿಳಿಸಿದರು.

ಎಲೆ ಚುಕ್ಕಿ ರೋಗವನ್ನು ತಡೆಗಟ್ಟಲು ಸಂಶೋಧನೆ ನಡೆಸಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ಸಂಶೋಧನೆಗೆ ಹಣ ಕೂಡ ಬಿಡುಗಡೆ ಮಾಡಲಾಗಿದೆ. ಇದನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದು ಚಲುವರಾಯಸ್ವಾಮಿ ಉತ್ತರಿಸಿದ್ದಾರೆ.

ಸಂಶೋಧನೆಗೆ 43 ಲಕ್ಷ ರೂ. ಬಿಡುಗಡೆ ಮಾಡಿದ್ದ ಸರ್ಕಾರ

ಮಲೆನಾಡು ಭಾಗದಲ್ಲಿ ಅಡಿಕೆಯನ್ನು ಕಾಡುತ್ತಿರುವ ಎಲೆ ಚುಕ್ಕೆ ರೋಗದ ಕುರಿತು ʻವಿಸ್ತಾರ ನ್ಯೂಸ್‌ʼ ನಡೆಸಿದ್ದ ʻಅಡಕತ್ತರಿಯಲ್ಲಿ ಅಡಕೆʼ ಎಂಬ ಅಭಿಯಾನದಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ (Congress Government) ಈ ರೋಗದ ನಿಯಂತ್ರಣಕ್ಕೆ ಅಗತ್ಯವಾಗಿರುವ ಔಷಧವನ್ನು ಕಂಡು ಹಿಡಿಯುವ ಸಂಶೋಧನೆಗೆ ಹಣಕಾಸಿನ ನೆರವನ್ನು ಈಚೆಗೆ ನೀಡಿತ್ತು.

ಮೊದಲ ಹಂತವಾಗಿ ಶಿವಮೊಗ್ಗ ತೋಟಗಾರಿಕಾ ವಿವಿಗೆ (Shimoga Horticulture University) ಸಂಶೋಧನೆಯ ಉದ್ದೇಶಕ್ಕಾಗಿಯೇ 43.61 ಲಕ್ಷ ಅನುದಾನ ಬಿಡುಗಡೆ ಮಾಡಿತ್ತು. ವಿಸ್ತಾರ ನ್ಯೂಸ್‌ನ ವರದಿಯ ಇಂಪ್ಯಾಕ್ಟ್‌ (Vistara News Impact) ಇದಾಗಿತ್ತು.

53,977.04 ಹೆಕ್ಟೇರ್‌ಗೂ ಹೆಚ್ಚು ಪ್ರದೇಶ ಎಲೆ ಚುಕ್ಕಿ ರೋಗ ಬಾಧಿತ

ರಾಜ್ಯದ 7 ಜಿಲ್ಲೆಗಳಲ್ಲಿನ 53,977.04 ಹೆಕ್ಟೇರ್‌ಗೂ ಹೆಚ್ಚಿನ ಅಡಿಕೆ ತೋಟಗಳು ಎಲೆಚುಕ್ಕಿ ರೋಗದಿಂದ ನಾಶವಾಗುವ ಹಂತ ತಲುಪಿವೆ. ಇದರ ನಿಯಂತ್ರಣಕ್ಕೆ ನಿರ್ದಿಷ್ಟವಾದ ಔಷಧ ಇಲ್ಲದಿರುವುದರಿಂದ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಮಲೆನಾಡು ಜಿಲ್ಲೆಗಳಲ್ಲಿ ಈ ರೋಗದ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಶೇ.74 ಅಡಿಕೆ ತೋಟ ನಾಶವಾಗಿದೆ.

ಈ ರೋಗದ ನಿಯಂತ್ರಣಕ್ಕೆ ಔಷಧಿಯನ್ನು ಕಂಡು ಹಿಡಿಯಬೇಕೆಂಬ ಉದ್ದೇಶದಿಂದ ಶೃಂಗೇರಿ ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರಗಳನ್ನು ತೆರೆಯಲಾಗಿದೆಯಾದರೂ, ಇವುಗಳಿಗೆ ವಿಜ್ಞಾನಿಗಳನ್ನು ನಿಯೋಜಿಸಲಾಗಿರಲಿಲ್ಲ. ಅಲ್ಲದೆ, ಅಗತ್ಯ ಹಣಕಾಸಿನ ನೆರವೂ ನೀಡಲಾಗಿರಲಿಲ್ಲ. ಹೀಗಾಗಿ ಈ ಸಂಶೋಧನಾ ಕೇಂದ್ರಗಳು ಇದ್ದೂ ಇಲ್ಲದಂತಾಗಿದ್ದವು. ಈ ಕುರಿತು ಮಲೆನಾಡು ಪ್ರಾಂತ ಅಡಿಕೆ ಬೆಳೆಗಾರರ ಸಂಘ ಹಲವು ಬಾರಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿತ್ತು. ಆದರೂ ಪ್ರಯೋಜನವಾಗಿರಲಿಲ್ಲ.

ಭರವಸೆ ನೀಡಿದ್ದ ತೋಟಗಾರಿಕಾ ಸಚಿವ

ಈ ವರ್ಷ ರೋಗ ವ್ಯಾಪಕವಾಗಿ ಹರಡುತ್ತಿರುವುದರಿಂದ ಅಡಿಕೆ ಬೆಳೆಗಾರರು ಆತಂಕಗೊಂಡಿದ್ದರು. ಎಲೆಚುಕ್ಕಿ ರೋಗದಿಂದ ತೋಟ ನಾಶವಾಗಿದ್ದರಿಂದ ಮುಂದೇನು ಮಾಡಬೇಕೆಂದು ತೋಚದೆ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಶೃಂಗೇರಿ ತಾಲೂಕಿನಲ್ಲಿ ಸುಮಾರು 400ಕ್ಕೂ ಹೆಚ್ಚು ಕುಟುಂಬಗಳು ಊರು ತೊರೆದಿದ್ದರು. ಈ ಬಗ್ಗೆ ʻವಿಸ್ತಾರ ನ್ಯೂಸ್‌ʼ ʻಅಡಕತ್ತರಿಯಲ್ಲಿ ಅಡಕೆʼ ಎಂಬ ಅಭಿಯಾನ ನಡೆಸಿ, ಸಮಗ್ರ ವರದಿ ಪ್ರಸಾರ ಮಾಡಿತ್ತು.
ಈ ಅಭಿಯಾನದ ಸಂದರ್ಭದಲ್ಲಿ ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ್ದ ರಾಜ್ಯದ ತೋಟಗಾರಿಕೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್‌ ಎಲೆಚುಕ್ಕೆ ರೋಗದ (Leaf spot Disease) ಮೂಲದ ಬಗ್ಗೆ ಉನ್ನತ ಸಂಶೋಧನೆ ನಡೆಸಲಾಗುವುದು ಮತ್ತು ಬೆಳೆಗಾರರಿಗೆ ಈ ರೋಗ ತಡೆಗೆ ಉಚಿತ ಔಷಧ (Free Medicine) ಒದಗಿಸಲಾಗುವುದು ಎಂದು ಭರವಸೆ ನೀಡಿದ್ದರು.

ಎಲೆ ಚುಕ್ಕೆ ರೋಗ ಮಲೆನಾಡು, ಅರೆ ಮಲೆನಾಡು, ಕಾರವಾರ, ಮಂಗಳೂರು ಭಾಗದಲ್ಲಿ ಜಾಸ್ತಿ ಕಾಣಿಸಿಕೊಂಡಿದೆ. ಇದರ ಬಗ್ಗೆ ಉನ್ನತ ಸಂಶೋಧನೆ ನಡೆಯಬೇಕಾಗಿದೆ. ಹಿಂದಿನ ಸರ್ಕಾರ ಕೂಡಾ ಈ ನಿಟ್ಟಿನಲ್ಲಿ ಸ್ಪಂದಿಸಿದೆ. ನಮ್ಮಲ್ಲೇ ಸಂಶೋಧನೆ ಮಾಡಿ ಸೂಕ್ತವಾದ ಔಷಧ ತಯಾರಿ‌ ಮಾಡಬೇಕು ಎನ್ನುವುದು ನಮ್ಮ ಉದ್ದೇಶ. ಅದಕ್ಕಾಗಿ ಅನುದಾನ ನೀಡುತ್ತೇವೆ ಎಂದು ಸಚಿವ ಮಲ್ಲಿಕಾರ್ಜುನ್‌ ವಿವರಿಸಿದ್ದರು. ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡ ಈ ಬಗ್ಗೆ ಗಮನ ನೀಡುವ ಭರವಸೆ ನೀಡಿದ್ದರು.

ಇದನ್ನೂ ಓದಿ: Illegal Arecanut: ರಾಜ್ಯದಲ್ಲಿ ಅಕ್ರಮ ಅಡಿಕೆ ದಂಧೆ? ಬೆಂಗಳೂರಲ್ಲಿ ಅಂತಾರಾಜ್ಯ ಜಾಲ ಪತ್ತೆ

ಮೊದಲ ಹಂತದ ಹಣ ಬಿಡುಗಡೆ

ವಿಸ್ತಾರದ ಅಭಿಯಾನದ ಫಲವಾಗಿ ಈಗ ಸಂಶೋಧನೆಗೆ 43.61 ಲಕ್ಷ ರೂ. ಬಿಡುಗಡೆ ಮಾಡಲಾಗಿತ್ತು. ನಿರ್ದಿಷ್ಟ ಫಲಾನುಧಾರಿತ ಸಂಶೋಧನೆಗೆ ಹಣ ಬಳಸಲು ಸೂಚನೆ ನೀಡಲಾಗಿದೆ. ಇದು ಮೊದಲ ಹಂತದ ಮೊತ್ತವಾಗಿದ್ದು,, ಅಗತ್ಯ ಬಿದ್ದರೆ ಮತ್ತೆ ನೀಡಲಾಗುತ್ತದೆ ಎಂದ ತೋಟಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳು ʻವಿಸ್ತಾರ ನ್ಯೂಸ್‌ʼಗೆ ತಿಳಿಸಿದ್ದರು. ಇದರಿಂದಾಗಿ ಸ್ಥಗಿತಗೊಂಡಿದ್ದ ಸಂಶೋಧನೆಗೆ ಮತ್ತೆ ಚಾಲನೆ ದೊರೆಯುವ ನಿರೀಕ್ಷೆ ಇದೆ.

ಈ ನಡುವೆ ಈಗ ಅಧಿವೇಶನದಲ್ಲಿಯೂ ಈ ವಿಷಯ ಪ್ರಸ್ತಾಪವಾಗಿದ್ದು, ಎಲೆ ಚುಕ್ಕಿ ರೋಗದ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version