Site icon Vistara News

Belagavi Winter Session: ಸದನದಲ್ಲಿ ಮುಟ್ಟಿನ ಶುಚಿತ್ವ ಚರ್ಚೆ; ಜನವರಿಯಿಂದ ಶಾಲೆಗಳಿಗೆ ನ್ಯಾಪ್‌ಕಿನ್‌

Sanitary napkins

ಬೆಳಗಾವಿ: ಬರುವ ಜನವರಿಯಿಂದ ಶಾಲೆಯಲ್ಲಿ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ ನೀಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಈ ಸಂಬಂಧ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸದನದಲ್ಲಿ ಉತ್ತರಿಸಿದ್ದಾರೆ. ಶೀಘ್ರವೇ ಟೆಂಡರ್‌ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.

ಹೆಣ್ಣು ಮಕ್ಕಳ ಸುರಕ್ಷತೆ ಹಾಗೂ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸರ್ಕಾರದಿಂದ ಹಲವಾರು ಕಾರ್ಯಕ್ರಮಗಳು ಇದ್ದರೂ ಬಹಳಷ್ಟು ಯೋಜನೆಗಳು ಫಲಾನುಭವಿಗಳಿಗೆ ತಲುಪುತ್ತಿಲ್ಲ. ಅಲ್ಲದೆ, ಶಾಲೆಗಳಿಗೆ ಹೋಗುವ ಹೆಣ್ಣು ಮಕ್ಕಳಿಗೆ ಅತಿ ಮುಖ್ಯವಾದ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ವಿತರಣೆ ಮಾಡುತ್ತಿಲ್ಲ. ಇದರಿಂದ ಹೆಣ್ಣು ಮಕ್ಕಳಿಗೆ ಬಹಳವೇ ತೊಂದರೆಯಾಗುತ್ತಿದೆ. ಕೆಲವು ಹೆಣ್ಣು ಮಕ್ಕಳು ಸ್ಯಾನಿಟರಿ ನ್ಯಾಪ್‌ಕಿನ್‌ ಬದಲಿಗೆ ಬಟ್ಟೆಗಳನ್ನು ಬಳಸುತ್ತಿದ್ದಾರೆ. ಇದು ಚರ್ಮ ರೋಗಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಕೂಡಲೇ ಸ್ಯಾನಿಟರಿ ನ್ಯಾಪ್‌ಕಿನ್‌ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಪರಿಷತ್ ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಆಗ್ರಹಿಸಿದರು.

ಇದನ್ನೂ ಓದಿ: Belagavi Winter Session: ಕಾವೇರಿದ ಚರ್ಚೆ ನಡುವೆ ಬಿಸಿ ಬಿಸಿ ಕಾಫಿ ಮಾಡಿಕೊಂಡು ಕುಡಿದ ಕೃಷ್ಣ ಬೈರೇಗೌಡ

ಮಹಿಳೆಯರ ಮುಟ್ಟಿನ ಸಮಸ್ಯೆ ಹಾಗೂ ಶುಚಿತ್ವದ ಬಗ್ಗೆ ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಮಾಡಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, 2013ರಲ್ಲಿ ಪ್ರಾರಂಭವಾಗಿರುವ ಶುಚಿ ಯೋಜನೆ ಕಾರ್ಯಕ್ರಮ ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದೆ. ಈ ಬಗ್ಗೆ ಇರುವ ಟೆಂಡರ್ ಪ್ರಕ್ರಿಯೆ ಲೋಪಗಳಿಂದ ಇದು ಸ್ಥಗಿತ ಆಗಿತ್ತು. ನಮ್ಮ ಸರ್ಕಾರ ಬಂದ ಬಳಿಕ ಈ ಪ್ರಕ್ರಿಯೆಗೆ ಚಾಲನೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಖರ್ಚು

ಜನವರಿಯಿಂದ ನಾವು ನ್ಯಾಪ್‌ಕಿನ್‌ಗಳನ್ನು ವಿತರಣೆ ಮಾಡುತ್ತೇವೆ. ಶಾಲೆಗಳಿಗೆ ಹೋಗಿ ನಾವೇ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದೇವೆ. ಮುಟ್ಟಿನ ಕಪ್‌ಗಳನ್ನು ವಿತರಣೆ ಮಾಡುವ ಕಾರ್ಯಕ್ರಮವನ್ನು ಈಗಾಗಲೇ ಮಾಡುತ್ತಿದ್ದೇವೆ. ಇದರ ಬಗ್ಗೆ ಇನ್ನೂ ಜಾಗೃತಿ ಮೂಡಿಸಬೇಕಿದೆ. ಕೇಂದ್ರ ಸರ್ಕಾರದಿಂದ ಇದಕ್ಕೆ ಹಣ ಬರುತ್ತಿಲ್ಲ. ರಾಜ್ಯ ಸರ್ಕಾರವೇ ಇದರ ಸಂಪೂರ್ಣ ಖರ್ಚು ಭರಿಸುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉತ್ತರಿಸಿದ್ದಾರೆ.

ಭ್ರೂಣ ಹತ್ಯೆ ಕೇಸ್‌; ಕೋರ್ಟ್‌ನಲ್ಲಿ ಕೇಸ್‌ ದಾಖಲಿಸಲು ಸದನದಲ್ಲಿ ಒತ್ತಾಯ

ರಾಜ್ಯದಲ್ಲಿ ಈಗಲೂ ಭ್ರೂಣ ಲಿಂಗ ಪತ್ತೆ (Gender Detection) ಮತ್ತು ಭ್ರೂಣ ಹತ್ಯೆಯ (Foeticide Case) ಬೃಹತ್ ಜಾಲ ಇರುವುದರ ಬಗ್ಗೆ ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿ (Belagavi Winter Session) ಕಳವಳವನ್ನು ವ್ಯಕ್ತಪಡಿಸಲಾಗಿದೆ. ಈಗಾಗಲೇ ಸಾವಿರಕ್ಕೂ ಹೆಚ್ಚು ಭ್ರೂಣಗಳನ್ನು ಹತ್ಯೆ ಮಾಡಿರುವ ಘೋರ ಕೃತ್ಯದ ಬಗ್ಗೆ ರಾಜ್ಯ ಸರ್ಕಾರ ಕಠಿಣ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು ಎಂಬ ಆಗ್ರಹಗಳು ಕೇಳಿಬಂದಿವೆ. ಅಲ್ಲದೆ, ಈ ಪ್ರಕರಣಗಳ ಬಗ್ಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಿ, ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಿ ಎಂಬ ಸಲಹೆಗಳೂ ಕೇಳಿಬಂದಿವೆ.

ಈ ಬಗ್ಗೆ ವಿಧಾನ ಪರಿಷತ್‌ನಲ್ಲಿ ಶೂನ್ಯ ವೇಳೆಯಲ್ಲಿ ರಾಜ್ಯದ ಹಲವು ಕಡೆ ನಡೆಯುತ್ತಿರುವ ಹೆಣ್ಣು ಭ್ರೂಣ ಹತ್ಯೆಗಳಿಗೆ ಸಂಬಂಧಪಟ್ಟ ಪ್ರಕರಣದ ಬಗ್ಗೆ ಯು.ಬಿ. ವೆಂಕಟೇಶ್ ಪ್ರಸ್ತಾಪಿಸಿದ್ದು, ಈ ಬಗ್ಗೆ ಗಂಭೀರ ಕಾಯಿದೆಗಳಿವೆ. ಆದರೂ 900ಕ್ಕೂ ಹೆಚ್ಚು ಹೆಣ್ಣು ಭ್ರೂಣವನ್ನು ಹತ್ಯೆಗೈಯಲಾಗಿದೆ. ಇದರ ಬಗ್ಗೆ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಿ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: Murder Case: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಭಾವ ಮಹದೇವಯ್ಯ ಕೊಲೆ!

ಇದಕ್ಕೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಇದರ ಬಗ್ಗೆ ರಾಜ್ಯದಲ್ಲಿ ದೊಡ್ಡ ಸಂಚಲನ ಆಗಿದೆ. ಇದರ ಜಾಲ ವಿಶಾಲವಾಗಿ ವ್ಯಾಪಿಸಿದೆ. ಅಲ್ಲದೆ, ಆರೋಗ್ಯ ಇಲಾಖೆಯಿಂದ ಸೂಕ್ತ ಮಾಹಿತಿಯನ್ನು ತರಿಸಿಕೊಂಡಿದ್ದೇವೆ. ಗೃಹ ಇಲಾಖೆ ಜತೆ ಸಭೆ ಮಾಡಿದ್ದೇವೆ. ಇದನ್ನು ತಡೆಗಟ್ಟಲು ದಿಟ್ಟ ಹೆಜ್ಜೆ ಇಡುತ್ತೇವೆ. ಯಾರೇ ಈ ಕೃತ್ಯದಲ್ಲಿ ತೊಡಗಿದ್ದರೂ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಉತ್ತರಿಸಿದರು.

Exit mobile version