ಬೆಳಗಾವಿ: ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಗೆ ಮೀಸಲಾದ ಎಸ್‌ಸಿಎಸ್‌ಪಿ/ ಟಿಎಸ್‌ಪಿ ಯೋಜನೆಗಳ (SCSP/TSP Scheme) ಹಣವನ್ನು ಗ್ಯಾರಂಟಿ ಯೋಜನೆಗೆ (Congress Guarantee Scheme) ಬಳಸಿದ ವಿಚಾರವು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ (Belagavi Winter Session) ಗದ್ದಲಕ್ಕೆ ಕಾರಣವಾಗಿದೆ. ಈ ವೇಳೆ ಐದು ಗ್ಯಾರಂಟಿ ಯೋಜನೆಗಳಿಗೆ ಒಟ್ಟು 11,114 ಕೋಟಿ ರೂ. ದಲಿತರ ಹಣ ಬಳಕೆ ಮಾಡಿರುವುದಾಗಿ ಸರ್ಕಾರ ಮಾಹಿತಿ ನೀಡಿದೆ. ಇದರಿಂದ ಕೆರಳಿದ ಪ್ರತಿಪಕ್ಷ ಬಿಜೆಪಿ ವಿಧಾನ ಪರಿಷತ್ ಸದಸ್ಯರು (BJP Karnataka) ಸದನದ ಬಾವಿಗಿಳಿದು ಧರಣಿ ನಡೆಸಿದರು. ವಾದ-ವಾಗ್ವಾದಗಳು ತಾರಕಕ್ಕೇರುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಅವರು ಸದನವನ್ನು ಕೆಲ ಕಾಲ ಮುಂದೂಡಿದ್ದರು. ಪುನಃ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿಯವರು ಮತ್ತೆ ಧರಣಿ ನಡೆಸಿದ್ದಾರೆ. ಈ ವೇಳೆ ಸಚಿವ ಪ್ರಿಯಾಂಕ್ ಖರ್ಗೆ (Minister Priyank Kharge) ಮಾತನಾಡಿ, ಎಸ್‌ಸಿಎಸ್‌ಪಿ/ ಟಿಎಸ್‌ಪಿ ನಿಧಿಯನ್ನು ಕೋವಿಡ್ ಸಂದರ್ಭದಲ್ಲಿ ಬಿಜೆಪಿಯವರು ಬಳಕೆ ಮಾಡಿರಲಿಲ್ಲವೇ? ಈಗ ಹೇಳಲು ನಿಮಗೆ ನಾಚಿಕೆಯಾಗಬೇಕು ಎಂದು ಹೇಳಿದ್ದು, ಪ್ರತಿಪಕ್ಷ ಬಿಜೆಪಿಯವರನ್ನು ಕೆರಳುವಂತೆ ಮಾಡಿತ್ತು.
ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಗೆ ಮೀಸಲಾದ ಎಸ್‌ಸಿಎಸ್‌ಪಿ/ ಟಿಎಸ್‌ಪಿ ಯೋಜನೆಗಳ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿದ ಬಗ್ಗೆ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆಗೆ ಪರಿಷತ್ತಿನಲ್ಲಿ ಸರ್ಕಾರ ಲಿಖಿತ ಉತ್ತರ ನೀಡಿದೆ. ಐದೂ ಗ್ಯಾರಂಟಿ ಯೋಜನೆಗಳಿಗೆ ಈ ಹಣವನ್ನು ಬಳಸಿದ್ದಾಗಿ ಸ್ಪಷ್ಟನೆ ಕೊಟ್ಟಿದೆ.
ಇದನ್ನೂ ಓದಿ: Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್: ಸಚಿವ ಮಧು ಬಂಗಾರಪ್ಪ
ಯಾವ ಯಾವ ಯೋಜನೆಗೆ ಎಷ್ಟು ಬಳಕೆ?
- ಗೃಹಲಕ್ಷ್ಮಿ ಯೋಜನೆಗೆ 5075 ಕೋಟಿ ರೂ.
- ಅನ್ನಭಾಗ್ಯ ಯೋಜನೆಗೆ 2779.50 ಕೋಟಿ ರೂ.
- ಗೃಹಜ್ಯೋತಿ ಯೋಜನೆಗೆ 2410 ಕೋಟಿ ರೂ.
- ಶಕ್ತಿ ಯೋಜನೆಗೆ 812 ಕೋಟಿ ರೂ.
- ಯುವನಿಧಿ ಯೋಜನೆಗೆ 67.5 ಕೋಟಿ
ಐದು ಗ್ಯಾರಂಟಿ ಯೋಜನೆಗಳಿಗೆ ಒಟ್ಟು 11,114 ಕೋಟಿ ರೂ. ದಲಿತರ ಹಣ ಬಳಕೆ ಮಾಡಿರುವುದಾಗಿ ಲಿಖಿತ ರೂಪವಾಗಿ ಉತ್ತರವನ್ನು ಕೊಡಲಾಗಿದೆ.
ಆದರೆ, ಸಚಿವ ಪ್ರಿಯಾಂಕ್ ಖರ್ಗೆ ಈ ಬಗ್ಗೆ ಉತ್ತರಿಸುವಾಗ ಎಸ್‌ಸಿಎಸ್‌ಪಿ/ ಟಿಎಸ್‌ಪಿ ಹಣವನ್ನು ಸರ್ಕಾರ ಬಳಕೆ ಮಾಡಿಲ್ಲ. ಗ್ಯಾರಂಟಿ ಯೋಜನೆಯಲ್ಲಿ ದಲಿತರನ್ನು ಗುರುತಿಸುವ ಕೆಲಸ ಮಾಡಿಲ್ಲ ಎಂದು ವಾದಿಸಿದ್ದಾರೆ. ಸರ್ಕಾರದ ದ್ವಂದ್ವ ನಿಲುವನ್ನು ಖಂಡಿಸಿ ಬಿಜೆಪಿ ಸದಸ್ಯರ ಧರಣಿ ನಡೆಸಿದ್ದಾರೆ.
ಸರ್ಕಾರದ ಉತ್ತರದಲ್ಲಿ ಗೊಂದಲ ಎಂದ ಬಿಜೆಪಿ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅನುದಾನವನ್ನು ಗ್ಯಾರಂಟಿಗೆ ಉಪಯೋಗಿಸುತ್ತಿರುವುದರಿಂದ ದುರ್ಬಳಕೆ ಆಗುವುದಿಲ್ಲ ಎಂದು ಸರ್ಕಾರ ಲಿಖಿತ ಉತ್ತರದಲ್ಲಿ ಹೇಳಿದೆ. ಆದರೆ, ಪ್ರಿಯಾಂಕ್ ಖರ್ಗೆ ಅವರ ಈ ಉತ್ತರ ಗೊಂದಲಕ್ಕೆ ದೂಡುವಂತೆ ಮಾಡಿದೆ. ಅಲ್ಲದೆ, ಪರಿಶಿಷ್ಟರಿಗೆ ಮೀಸಲಾದ ಹಣವನ್ನು ಅವರ ಅಭ್ಯುದಯಕ್ಕೆ ಮಾತ್ರ ಬಳಕೆ ಮಾಡಬೇಕು ಎಂದು ಆಗ್ರಹಿಸಿ ಧರಣಿ ಮಾಡಿದೆ.
ಸೆವೆನ್ ಡಿ ನಿಯಮವನ್ನು ಸರ್ಕಾರ ತೆಗೆದು ಹಾಕಿಲ್ಲ
ಇದಕ್ಕೂ ಮೊದಲು ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಎಸ್‌ಸಿಎಸ್‌ಪಿ/ ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿದ್ದಾರೆ. ಸೆವೆನ್ ಡಿ ನಿಯಮವನ್ನು ಸರ್ಕಾರ ತೆಗೆದು ಹಾಕಿಲ್ಲ. ಪರಿಶಿಷ್ಟ ಜಾತಿಗಳಿಗೆ ಮೀಸಲಿಟ್ಟ ಹಣ ಬೇರೆ ಇಲಾಖೆಯ ಗ್ಯಾರಂಟಿ ಯೋಜನೆಗಳಿಗೆ ಹೇಗೆ ಬಳಸುತ್ತಿದ್ದೀರಿ? ಉಚಿತ ಬಸ್‌ನಲ್ಲಿ ಪ್ರಯಾಣಿಸುವವರಿಗೆ ಜಾತಿ ನೋಡಿ ಟಿಕೆಟ್ ಕೊಡುತ್ತೀರಾ? ಅನ್ನ ಭಾಗ್ಯ ಯೋಜನೆ ಅಡಿ ಜಾತಿ ನೋಡಿ ಅಕ್ಕಿ ಕೊಡುತ್ತೀರಾ? ಎಂದು ಪ್ರಶ್ನೆ ಮಾಡಿದರು.
ಅದೇ ಸಮುದಾಯಕ್ಕೆ ಹಣ ಬಳಕೆ ಆಗಲಿದೆ
ಇದಕ್ಕೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಉತ್ತರಿಸಿ, ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಎಸ್‌ಸಿಎಸ್‌ಪಿ/ ಟಿಎಸ್‌ಪಿ ಯೋಜನೆಯನ್ನು ತರಲಾಯಿತು. ಇದರ ಅಡಿ ಹಣವನ್ನು ಯಾವ ರೀತಿ ಬಳಕೆ ಮಾಡಬೇಕು ಅಂತ ಸೆವೆನ್ ಎ, ಸೆವೆನ್ ಬಿ, ಸೆವನ್ ಸಿ, ಸೆವೆನ್ ಡಿ ಅಂತ ಮಾಡಲಾಗಿದೆ. ಸೆವೆನ್ ಡಿ ಸೆಕ್ಷನ್ ಅನ್ನು ಗುರುವಾರ (ಡಿ. 7) ನಡೆದ ಕ್ಯಾಬಿನೆಟ್‌ನಲ್ಲಿ ತೆಗೆದು ಹಾಕಿದ್ದೇವೆ. ಅನ್ಯ ಉದ್ದೇಶಗಳಿಗೆ ಯೋಜನೆಯ ಹಣವನ್ನು ಬಳಸಲು ಸಾಧ್ಯವಿಲ್ಲ. ಅದೇ ಸಮುದಾಯಕ್ಕೆ ಹಣ ಬಳಕೆ ಆಗಲಿದೆ ಎಂದು ಹೇಳಿದರು.
ಗ್ಯಾರಂಟಿಗಳಿಗೆ ಬಳಸಿದ ಆ ಹಣ ವಾಪಸ್ ಪಡೆಯಿರಿ
ಅದಕ್ಕೆ ಪ್ರತಿಕ್ರಿಯೆ ನೀಡಿದ ಛಲವಾದಿ ನಾರಾಯಣಸ್ವಾಮಿ, ಹಣ ಉಳಿದರೆ ಕೊನೆಯಲ್ಲಿ ಕೊಡಬಹುದು. ಆದರೆ, ವರ್ಷದ ಪ್ರಾರಂಭದಲ್ಲೇ 11 ಸಾವಿರ ಕೋಟಿ ರೂಪಾಯಿಯನ್ನು ಅನ್ಯ ಉದ್ದೇಶಕ್ಕೆ ಬಳಸಿಬಿಟ್ಟಿದ್ದೀರಿ. ಇಟ್ಟ ಹಣದಲ್ಲಿ 35% ಬೇರೆ ಉದ್ದೇಶಕ್ಕೆ ಬಳಸಿಬಿಟ್ಟಿದ್ದೀರಿ. ಗ್ಯಾರಂಟಿಗಳಿಗೆ ಬಳಸಿದ 11 ಸಾವಿರ ಕೋಟಿ ರೂ. ವಾಪಸ್ ಪಡೆಯಿರಿ. ಇಲ್ಲದಿದ್ದರೆ ಎಸ್‌ಸಿ, ಎಸ್‌ಟಿ ಜನರಿಗೆ ಅನ್ಯಾಯ ಆಗುತ್ತದೆ. ಅಂಬೇಡ್ಕರ್ ರಕ್ತ ಮಹದೇವಪ್ಪ ಮೈಯಲ್ಲಿ ಹರಿಯುತ್ತಿದೆ. ನಮ್ಮ ಕಣ್ಣನ್ನು ನಾವೇ ಚುಚ್ಚಿಕೊಂಡ ಹಾಗಾಗುತ್ತದೆ. ಗ್ಯಾರಂಟಿಗಳಿಗೆ ಬಳಸಿದ ಆ ಹಣ ವಾಪಸ್ ಪಡೆಯಿರಿ ಎಂದು ಆಗ್ರಹಿಸಿದರು.
ಛಲವಾದಿಯದ್ದು ತಪ್ಪು ಗ್ರಹಿಕೆ
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಛಲವಾದಿ ನಾರಾಯಣಸ್ವಾಮಿ ಅವರಿಗೆ ತಪ್ಪು ಗ್ರಹಿಕೆ ಆಗಿದೆ. ಫಲಾನುಭವಿ ಎಸ್‌ಸಿ, ಎಸ್‌ಟಿ ಅಂತ ಗೊತ್ತಾದರೆ ಮಾತ್ರ ಬಳಸಲು ಸಾಧ್ಯ ಎಂದು ಹೇಳಿದರು. ಅದಕ್ಕೆ ಸಚಿವ ಎಚ್.ಸಿ. ಮಹದೇವಪ್ಪ, ಯೋಜನೆ ಹಣ ಬೇರೆ ಉದ್ದೇಶಕ್ಕೆ ಬಳಕೆ ಆಗಲು ಸಾಧ್ಯವೇ ಇಲ್ಲ ಎಂದು ಹೇಳಿದರು.
ಸಂಖ್ಯೆ ಪ್ರಕಾರವೇ ಹಂಚಿಕೆ ಮಾಡಿದ್ದೇವೆ
ಅದಕ್ಕೆ ಪ್ರತಿಕ್ರಿಯೆ ನೀಡಿದ ಛಲವಾದಿ ನಾರಾಯಣಸ್ವಾಮಿ, ದಲಿತ ಸಮುದಾಯಕ್ಕೆ ಸಂಬಂಧಿ ಎಷ್ಟು ಕಾಳಜಿ ಅವರಿಗಿದೆಯೋ, ನಮಗೂ ಅಷ್ಟೇ ಇದೆ. ಉತ್ತರದಲ್ಲಿ ಸ್ಪಷ್ಟವಾಗಿ ಹಣ ಬಳಕೆ ಮಾಡಿರುವ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಐಡೆಂಟಿಫೈ ಮಾಡದೆಯೇ ಹಣ ನೀಡಿಬಿಟ್ಡಿದ್ದಾರೆ ಎಂದು ಹೇಳಿದರು. ಅದಕ್ಕೆ ಉತ್ತರಿಸಿದ ಡಾ. ಎಚ್.ಸಿ. ಮಹದೇವಪ್ಪ, 2011ರ ಗಣತಿ ಪ್ರಕಾರ ಸಮುದಾಯದ ಸಂಖ್ಯೆ ಎಷ್ಟಿದೆ ಅಂತ ಗೊತ್ತಿದೆ. ಅದರ ಪ್ರಕಾರ ಹಂಚಿಕೆ ಆಗಿದೆ ಎಂದು ತಿಳಿಸಿದರು.
ಬಿಜೆಪಿಯಿಂದಲೇ ಹಣ ದುರ್ಬಳಕೆ
ಇದರಿಂದ ಆಕ್ರೋಶಗೊಂಡ ಬಿಜೆಪಿ ಸದಸ್ಯರು ಸದನದಲ್ಲಿ ಧರಣಿ ನಡೆಸಿದರು. ಇದು ದಲಿತ ವಿರೋಧಿ ಸರ್ಕಾರ ಎಂದು ಬಾವಿಗೆ ಇಳಿದು ಧರಣಿ ನಡೆಸಿದರು. 8400 ಕೋಟಿ ರೂಪಾಯಿಯನ್ನು ಬಿಜೆಪಿಯೇ ಡೀಮ್ಡ್ ಎಕ್ಸ್‌ಪೆಂಡಿಚರ್ ಎಂದು ದುರ್ಬಳಕೆ ಮಾಡಿಕೊಂಡಿದೆ ಎಂದು ಮಹದೇವಪ್ಪ ತಿಳಿಸಿದರು. ಫಲಾನುಭವಿಗಳನ್ನು ಗುರುತಿಸಿಯೇ ನಾವು ಹಂಚಿಕೆ ಮಾಡಿದ್ದೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾದಿಸಿದರು.
ಗೂಳಿಹಟ್ಟಿ ಶೇಖರ್ ವಿಷಯ ಡೈವರ್ಟ್‌ಗೆ ಧರಣಿ; ಖರ್ಗೆ ಆರೋಪ
ಅಲ್ಲಿ ಗೂಳಿಹಟ್ಟಿ ಶೇಖರ್‌ಗೆ ಒಳಗಡೆ ಬಿಡುವುದಿಲ್ಲ. ಇಲ್ಲಿ ಧರಣಿ ಮಾಡುತ್ತಾರೆ. ಆ ವಿಷಯವನ್ನು ಡೈವರ್ಟ್ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹೀಗಾಗಿ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು 10 ನಿಮಿಷ ಮುಂದೂಡಿದರು. ಮತ್ತೆ ಕಲಾಪ ಆರಂಭವಾಯಿತಾದರೂ ಬಿಜೆಪಿ ಸದಸ್ಯರು ಧರಣಿ ನಡೆಸಿದರು.
ದಲಿತ ವಿರೋಧಿ ಸರ್ಕಾರ ಎಂದ ಬಿಜೆಪಿ
ಬಳಿಕ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಗೋವಿಂದ ಕಾರಜೋಳ ಅವರು ಈ ಹಿಂದೆ ಕೋವಿಡ್ ಸಂಧರ್ಭದಲ್ಲಿ ಎಸ್‌ಸಿಎಸ್‌ಪಿ/ ಟಿಎಸ್‌ಪಿ ಯೋಜನೆಯ 7800 ಕೋಟಿ ರೂ, ಹಣವನ್ನು ಬಳಸಿಕೊಂಡಿದ್ದೇವೆ ಎಂದು ಸದನದಲ್ಲೆ ಹೇಳಿದ್ದರು. ಇವರಿಗೆ ನಾಚಿಕೆ ಆಗಲ್ವಾ? ಈಗ ಇಲ್ಲಿ ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದರು. ದಲಿತ ವಿರೋಧಿ ಸರ್ಕಾರ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಡಗಿದರು. ಪುನಃ ಸದನ ಕಲಾಪವನ್ನು 10 ನಿಮಿಷ ಕಾಲ ಮುಂದೂಡಲಾಯಿತು.
ಇದನ್ನೂ ಓದಿ: Yatnal Vs Moulvi : ಕೊಲೆ ಆರೋಪಿ ಮೌಲ್ವಿ ದೇಶ ಬಿಟ್ಟು ಪಲಾಯನ ಸಾಧ್ಯತೆ; ಯತ್ನಾಳ್ ಹೊಸ ಬಾಂಬ್
ಮಾತು ಕೊಟ್ಟರೆ ಧರಣಿ ಕೈಬಿಡುತ್ತೇವೆ
ಸದನದ ಬಾವಿಯಲ್ಲೇ ಗುಡುಗಿದ ಕೋಟ ಶ್ರೀನಿವಾಸ ಪೂಜಾರಿ, ಪರಿಶಿಷ್ಟರ 11 ಕೋಟಿ ರೂ. ಹಣವನ್ನು ಈಗಾಗಲೇ ಗ್ಯಾರಂಟಿ ಯೋಜನೆಗಳಿಗೆ ವ್ಯಯ ಮಾಡಲಾಗಿದೆ. ಇದನ್ನು ವಾಪಸ್ ಪಡೆಯುವುದಾಗಿ ಸರ್ಕಾರ ಮಾತು ಕೊಟ್ಟರೆ ನಾವು ಧರಣಿಯನ್ನು ಕೈಬಿಡುತ್ತೇವೆ ಎಂದು ಹೇಳಿದರು. ಈ ವೇಳೆ ಮತ್ತಷ್ಟು ಗದ್ದಲದ ವಾತಾವರಣ ನಿರ್ಮಾಣವಾಯಿತು.