ಬೆಳಗಾವಿ: ಆ ಊರಲ್ಲಿ ಕೊರೊನಾದಂತ ಕ್ಲಿಷ್ಟ ಸಮಯದಲ್ಲೂ ಕೇವಲ ಮೂವರು ಮಾತ್ರ ಸೋಂಕಿಗೆ ಮೃತಪಟ್ಟಿದ್ದರು. ಆದರೆ ಇದೀಗ ಒಂದೇ ತಿಂಗಳಲ್ಲಿ ಬರೋಬ್ಬರಿ 30 ಮಂದಿ ಸಾವನ್ನಪ್ಪಿದ್ದಾರೆ. ಒಬ್ಬರ ಹಿಂದೆ ಒಬ್ಬರು ಮೃತಪಡುತ್ತಿರುವುದಕ್ಕೆ ಊರ ದೇವಿಯ ಶಾಪ ಎಂದು ಜನರು ನಂಬಿದ್ದಾರೆ. ಸಾಯುವ ವಯಸ್ಸಲ್ಲದ ಮಕ್ಕಳಿಂದ ಹಿಡಿದು 90ರ ವರ್ಷದವರು ಜೀವ ಬಿಟ್ಟಿದ್ದಾರೆ. ಒಂದು ಕಡೆ ಗ್ರಾಮಸ್ಥರು ಚಿಂತಾಗ್ರಸ್ಥರಾಗಿ ಕುಳಿತಿದ್ದರೆ, ಮತ್ತೊಂದು ಕಡೆ ವಿರೂಪಗೊಂಡಿರುವ ದೇವರ ವಿಗ್ರಹ. ಸಾವಿನ ಮನೆಯಂತಾದ ಈ ಚಿತ್ರಣ ಕಂಡು ಬಂದಿದ್ದು, ಬೆಳಗಾವಿ (Belgavi News) ಜಿಲ್ಲೆಯ ರಾಮದುರ್ಗ ತಾಲೂಕಿನ ತೂರನೂರು ಗ್ರಾಮದಲ್ಲಿ.
ತೂರನೂರು ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಪ್ರತಿ ಮನೆಯಲ್ಲೂ ಸಾವು ಸಂಭವಿಸುತ್ತಿದೆ. ಚಿಕ್ಕ ವಯಸ್ಸಿನ ಮಕ್ಕಳೂ ಸೇರಿದಂತೆ ದೊಡ್ಡವರವರೆಗೂ ಬೇರೆ ಬೇರೆ ಕಾರಣಗಳಿಂದ ಮೃತಪಡುತ್ತಿದ್ದಾರೆ. ಇದು ಗ್ರಾಮಸ್ಥರನ್ನು ಆತಂಕಕ್ಕೆ ದೂರಿದ್ದು, ಸಾವಿಗೆ ನಿಖರ ಕಾರಣ ತಿಳಿಯದ ಗ್ರಾಮಸ್ಥರು ಇದು ದೇವಿ ಶಾಪ ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ: Murder case : ಭೂ ವಿಜ್ಞಾನಿ ಕೊಲೆ ರಹಸ್ಯ ಭೇದಿಸಲು ತಂಡ ರಚನೆ; ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ
ದೇವಿ ವಿಗ್ರಹವನ್ನು ವಿರೂಪ ಮಾಡಿದ್ದರಾ?
ಒಂದೂವರೆ ತಿಂಗಳ ಹಿಂದೆ ಗ್ರಾಮದ ದುರ್ಗಾದೇವಿ ಮೂರ್ತಿ ವಿರೂಪಗೊಂಡಿತ್ತು. ಈ ಮೊದಲು ಎಣ್ಣೆಯಿಂದ ನಿತ್ಯ ದೇವಿಗೆ ಪೂಜೆ ಸಲ್ಲಿಸುವುದು ವಾಡಿಕೆ ಆಗಿತ್ತು. ಎಣ್ಣೆಯ ಜಿಡ್ಡು ಅನ್ನು ಕೆತ್ತನೆ ಮಾಡುವಾಗ ದೇವಿ ಮೂರ್ತಿ ವಿರೂಪವಾಗಿದೆ. ಈ ಘಟನೆ ಬಳಿಕ ಗ್ರಾಮದಲ್ಲಿ ಸರಣಿ ಸಾವು ಆಗುತ್ತಿವೆ ಎಂದು ಗ್ರಾಮಸ್ಥರು ಅಂದಾಜಿಸಿದ್ದಾರೆ.
ಗ್ರಾಮದಲ್ಲಿ ಸಾವುಗಳನು ನಡೆಯುತ್ತಿದ್ದಂತೆ ಗ್ರಾಮದ ಹಲವರ ಮೈಮೇಲೆ ದೇವಿ ಬಂದು ನೀವು ನನ್ನ ವಿಗ್ರಹವನ್ನು ವಿರೂಪ ಮಾಡಿದ್ದಿರಿ. ಹೀಗಾಗಿ ಊರಿಗೆ ನನ್ನ ಶಾಪ ಹತ್ತಿದೆ ಎಂದು ದೇವಿ ಹೇಳುತ್ತಿದ್ದಾಳಂತೆ. ಹೀಗಾಗಿ ಗ್ರಾಮಸ್ಥರು ಆತಂಕಗೊಂಡಿದ್ದು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲು ಮುಂದಾಗಿದ್ದಾರೆ. ಅರ್ಚಕರ ಸಲಹೆಯಂತೆ ಹೋಮ ಹವನ ಹಾಗೂ ಅಭಿಷೇಕ ಮಾಡಿ ದೇವಿಯನ್ನು ಶಾಂತಗೊಳಿಸಲು ಗ್ರಾಮಸ್ಥರು ಮುಂದಾಗಿದ್ದಾರೆ.
ಅಲ್ಲದೆ ಗ್ರಾಮದಲ್ಲಿ ಮಂಗಳವಾರದಂದು ದೇವರಿಗೆ ಉಡಿ ತುಂಬು ಕಾರ್ಯ ಮಾಡುತ್ತಿದ್ದಾರೆ. ಪೂಜೆ ದಿನ ಯಾರೂ ಕೆಲಸ ಕಾರ್ಯ ಮಾಡದೇ ಮನೆಯಲ್ಲಿ ದೇವಿ ಜಪ ಮಾಡುತ್ತಿದ್ದಾರೆ. ಅರ್ಚಕರ ಸಲಹೆಯಂತೆ ಕಳೆದ 15 ದಿನಗಳಿಂದ ದೇವಿಯ ಗರ್ಭಗುಡಿಯನ್ನು ಗ್ರಾಮಸ್ಥರು ಮುಚ್ಚಿದ್ದಾರೆ. ಅರ್ಚಕರು ಬಂದಾಗ ಮಾತ್ರ ಗರ್ಭಗುಡಿ ತೆರೆದು ಪೂಜೆ ಸಲ್ಲಿಕೆ ಮಾಡುತ್ತಿದ್ದಾರೆ. ನವೆಂಬರ್ 15 ರಂದು ದೇವಿ ಜಾತ್ರೆ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಮನೆಗೊಂದು ಕುರಿ ಮರಿಯನ್ನು ದೇವಿಗೆ ಹರಕೆ ಕೊಡಲು ನಿರ್ಧರಿಸಿದ್ದಾರೆ.
ಕೇವಲ 1, 800 ಮತದಾರರು ಇರುವ ಚಿಕ್ಕ ಗ್ರಾಮದಲ್ಲೀಗ ಸರಣಿ ಸಾವಿನಿಂದ ಸೂತಕದ ಛಾಯೆ ಆವರಿಸಿದೆ. ಇದು ಶಾಪವೋ ಕಾಕತಾಳಿಯವೋ ಎಂಬುದನ್ನು ಆ ದೇವರ ಬಲ್ಲ.ಆದರೆ ಸರಣಿ ಸಾವುಗಳು ಗ್ರಾಮಸ್ಥರನ್ನು ಆತಂಕಕ್ಕೆದೂಡಿದ್ದು ಆರೋಗ್ಯ ಇಲಾಖೆಯ ಅಧಿಕಾರಿಗಳು ಗ್ರಾಮದಲ್ಲಿ ನಡೆಯುತ್ತಿರುವ ಸಾವುಗಳ ಬಗ್ಗೆ ನಿಖರ ಕಾರಣ ಪತ್ತೆ ಹಚ್ಚಬೇಕೆಂದು ಶಿಕ್ಷಕಿತರು ಮನವಿ ಮಾಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ