ಬೆಳಗಾವಿ: ಮದ್ದು ತಯಾರಿಸುವ ವೇಳೆ ಆಕಸ್ಮಿಕವಾಗಿ ಸ್ಫೋಟಗೊಂಡು ವ್ಯಕ್ತಿಯೊಬ್ಬರು ಸಜೀವ ದಹನವಾಗಿದ್ದಾರೆ. ಬೆಳಗಾವಿಯ (Belgavi News) ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಮಲ್ಲಪ್ಪ ಸತ್ಯಪ್ಪ ಕಂಕಣವಾಡಿ (38) ಮೃತ ದುರ್ದೈವಿ.
ಮಲ್ಲಪ್ಪ ಪಂಚಮಿ ಹಬ್ಬದಂದು ಮದ್ದು ಹಾರಿಸಲು ತಯಾರು ಮಾಡುತ್ತಿದ್ದರು. ಮದ್ದು ತಯಾರಿಸುವ ವೇಳೆ ಆಕಸ್ಮಿಕವಾಗಿ ಸ್ಫೋಟಗೊಂಡು ದುರ್ಘಟನೆ ಸಂಭವಿಸಿದೆ. ಏಕಾಏಕಿ ಬೆಂಕಿ ಎಲ್ಲೆಡೆ ಆವರಿಸಿದ್ದರಿಂದ ಮಲ್ಲಪ್ಪ ಸುಟ್ಟು ಭಸ್ಮವಾಗಿದ್ದಾರೆ. ಸ್ಥಳಕ್ಕೆ ಘಟಪ್ರಭಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇಇರುವುದೇ ಈ ಆಚಾತುರ್ಯಕ್ಕೆ ಕಾರಣಕ್ಕೆ ಎನ್ನಲಾಗಿದೆ. ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Udupi News : ಸತ್ತ ನಾಯಿಯನ್ನು ಸ್ಕೂಟರ್‌ಗೆ ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ದ ಅಸಾಮಿ!
ಫುಟ್‌ಪಾತ್ ಮೇಲೆ ನಿಂತಿದ್ದ ಕಾರ್ಮಿಕರ ಮೇಲೆ ಹರಿದ ಟಾಟಾ ಏಸ್
ಚಿಕ್ಕಬಳ್ಳಾಪುರ: ಫುಟ್‌ಪಾತ್ ಮೇಲೆ ನಿಂತಿದ್ದ ಕೂಲಿ ಕಾರ್ಮಿಕರ ಮೇಲೆ ಟಾಟಾ ಏಸ್ ವಾಹನವೊಂದು (Road Accident) ಹರಿದಿದೆ. ಅಪಘಾತದ ತೀವ್ರತೆಗೆ ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟರೆ, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಚಿಕ್ಕಬಳ್ಳಾಪುರದ ಪೋಶೆಟ್ಟಿಹಳ್ಳಿ ಗೇಟ್ ಬಳಿ ಘಟನೆ ನಡೆದಿದೆ.
ಚಿಂತಾಮಣಿ ತಾಲೂಕಿನ ನರಸಿಂಹ (50) ಮೃತ ದುರ್ದೈವಿ. ಬೆಳಗ್ಗೆ ಕೂಲಿಗೆ ಹೋಗಲು ಬಸ್‌ಗಾಗಿ ಫುಟ್ ಪಾತ್ ಮೇಲೆ ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ಟಾಟಾಏಸ್ ವಾಹನವು ಏಕಾಏಕಿ ನಿಯಂತ್ರಣ ತಪ್ಪಿ ಕೂಲಿ ಕಾರ್ಮಿಕರಿಗೆ ಗುದ್ದಿದೆ. ಗುದ್ದಿದ ರಭಸಕ್ಕೆ ನರಸಿಂಹ ಸ್ಥಳದಲ್ಲೇ ಮೃತಪಟ್ಟರೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ನಾಲ್ವರು ಪಾರಾಗಿದ್ದಾರೆ. ಇತ್ತ ನರಸಿಂಹ ಮೃತದೇಹದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ಅಪರಿಚಿತ ವಾಹನಕ್ಕೆ ಬೈಕ್ ಸವಾರ ಸೇರಿ ಕರಡಿ ಬಲಿ
ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರರೊಬ್ಬರು ಮೃತಪಟ್ಟಿದ್ದಾರೆ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಬಳಿ ಘಟನೆ ನಡೆದಿದೆ. ದ್ಯಾಮಣ್ಣ ಶಂಕ್ರಪ್ಪ ಇಂಚಲ (40) ಸ್ಥಳದಲ್ಲೇ ಮೃತಪಟ್ಟವರು. ಧಾರವಾಡದಿಂದ ಅಮ್ಮಿನಬಾವಿ ಗ್ರಾಮಕ್ಕೆ ಆಗಮಿಸುತ್ತಿದ್ದಾಗ ಧಾರವಾಡ ಕಡೆಯಿಂದ ಬಂದ ವಾಹನವೊಂದು ಹರಿದಿದೆ. ಗಂಭೀರ ಗಾಯಗೊಂಡಿದ್ದ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತ ಅಪರಿಚಿತ ವಾಹನ ಡಿಕ್ಕಿಯಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕರಡಿಯೊಂದು ಮೃತಪಟ್ಟಿದೆ. ಚಿತ್ರದುರ್ಗದ ಹೊರವಲಯದ ತಮಟಕಲ್ಲು ಸಮೀಪ ಘಟನೆ ನಡೆದಿದೆ. ಜೋಗಿಮಟ್ಟಿ ಅರಣ್ಯ ಧಾಮದ ಬಳಿ ವನ್ಯ ಜೀವಿಗಳ ಓಡಾಟ ಹೆಚ್ಚು ಇರುತ್ತದೆ. ರಾತ್ರಿ ವೇಳೆ ರಸ್ತೆ ದಾಟುವಾಗ ವಾಹನವೊಂದು ಕರಡಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದೆ.
ಇದನ್ನೂ ಓದಿ: Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು
ಬೆಳಗಾವಿಯಲ್ಲಿ ಬೈಕ್ ಮುಖಾಮುಖಿ ಡಿಕ್ಕಿ, ಸವಾರರಿಬ್ಬರು ಸಾವು
ಬೈಕ್‌ಗಳ ನಡುವೆ ಅಪಘಾತ ಸಂಭವಿಸಿದ್ದು, ಇಬ್ಬರು ಸವಾರರು ದಾರುಣವಾಗಿ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗರಗೋಳ ಬಳಿ ಘಟನೆ ನಡೆದಿದೆ. ಬಸವರಾಜ ಪ್ರಭುನವರ್(48), ಯಲ್ಲಪ್ಪ ಕೊರವಿನಕೊಪ್ಪ( 46) ಮೃತ ದುರ್ದೈವಿಗಳು. ಮತ್ತಿಬ್ಬರು ಬೈಕ್ ಸವಾರಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ರಾಮದುರ್ಗ ಡಿವೈಎಸ್ಪಿ, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಾಗಲಕೋಟೆಯಲ್ಲಿ ಟ್ರಕ್ – ಬೊಲೆರೊ ಮುಖಾಮುಖಿ ಡಿಕ್ಕಿ
ಟ್ರಕ್ ಹಾಗೂ ಬೊಲೆರೊ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಬೊಲೆರೋ ವಾಹನದ ಮುಂಭಾಗ ನಜ್ಜು ಗುಜ್ಜಾಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬೆಳಗಲಿ ಪಟ್ಟಣದ ಬಳಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಅದೃಷ್ಟವಶಾತ್ ಬೊಲೆರೋ ಚಾಲಕ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ. ಗಾಯಾಳನ್ನು ಮುಧೋಳ ತಾಲ್ಲೂಕಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್ ಫ್ಯಾನ್
ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಪಾದಚಾರಿಗಳಿಗೆ ಡಿಕ್ಕಿ
ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ್ದಲ್ಲದೇ ಕುಡುಕನೊಬ್ಬ ಮಹಿಳೆಯರಿಗೆ ಗುದ್ದಿದ್ದಾನೆ. ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ನಗರದ ಟಿಪ್ಪು ನಗರದಲ್ಲಿ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ಇಬ್ಬರು ಮಹಿಳೆಯರಿಗೆ ಗುದ್ದಿ ಮುಂದೆ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ.
ರಿಯಾಜ್ ದುಮ್ಮಾದ್ರಿ ಎಂಬಾತ ಕುಡಿದು ವಾಹನ ಚಲಾಯಿಸಿದವನು. ಕಾರು ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಿನ್ನೆ ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಅಪಘಾತ ನಡೆದಿದೆ. ಐಶ್ವರ್ಯ ರಾಮಚಂದ್ರ ಗೊಲ್ಲರ್ (16), ಯಲ್ಲವ್ವ ಪರಶುರಾಮ ಗೊಲ್ಲರ್ (50) ಎಂಬುವವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ವಿಜಯಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮೀರಜ್‌ಗೆ ಕರದೊಯ್ಯಲಾಗಿದೆ. ಸದ್ಯ ದೇವರ ಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಹಾಗೂ ಕಾರನ್ನು ದೇವರ ಹಿಪ್ಪರಗಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ