Site icon Vistara News

B.S. Yediyurappa : ಬಿಜೆಪಿ ಸರ್ಕಾರಗಳು ರೈತಪರ ಮತ್ತು ಜನಪರ: ರೈತ ಮೋರ್ಚಾ ಕಾರ್ಯಕಾರಿಣಿಯಲ್ಲಿ ಬಿ.ಎಸ್.‌ ಯಡಿಯೂರಪ್ಪ ಭಾಷಣ

BJP Governments are pro farmer and pro people says former cm of karnataka bs-yediyurappa

#image_title

ಬೆಳಗಾವಿ: ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ರೈತಪರ ಮತ್ತು ಜನಪರವಾಗಿ ಕೆಲಸ ಮಾಡುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ಬೆಳಗಾವಿ ನಗರದ ಮಯೂರ ಪ್ರೆಸಿಡೆನ್ಸಿ ಕ್ಲಬ್‍ನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಬಿಜೆಪಿ ರೈತ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಇಂದು ಉದ್ಘಾಟಿಸಿ ಮಾತನಾಡಿದರು.

ಈ ವರ್ಷ ಕರ್ನಾಟಕದಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದ್ದು, ಇದು ಅತ್ಯಂತ ಮಹತ್ವದ ಸಭೆ. ನಾನು ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಕಳೆದ 5 ದಶಕಗಳಿಂದ ಹೋರಾಟ ಮಾಡುತ್ತಿದ್ದೇನೆ. ತಾವು ರೈತರಿಗಾಗಿ ಬಜೆಟ್ ಮಂಡಿಸಿದ್ದೆವು. ಕಿಸಾನ್ ಸಮ್ಮಾನ್ ನಿಧಿಯಡಿ ಕೇಂದ್ರದ 6 ಸಾವಿರ ರೂ. ಜತೆಗೆ ರಾಜ್ಯದಿಂದ 4 ಸಾವಿರ ರೂ. ನೀಡುವುದನ್ನು ಆರಂಭಿಸಿದೆವು. ರಾಜ್ಯದಲ್ಲಿ ಮನೆಮನೆಗೆ ನಲ್ಲಿ ನೀರಿನ ಯೋಜನೆಯನ್ನು ಜಾರಿಗೊಳಿಸಿದ್ದು, ರೈತ ವಿದ್ಯಾನಿಧಿ ಯೋಜನೆ ಅನುಷ್ಠಾನ ಮಾಡಲಾಗಿದೆ. ಬಿಜೆಪಿ ಸದಾ ಜನಪರವಾಗಿದೆ. ರೈತರ ಪರವಾಗಿದೆ. ದೇಶವು ವಿಶ್ವದ 5ನೇ ಬೃಹತ್ ಅರ್ಥವ್ಯವಸ್ಥೆಯನ್ನು ಹೊಂದಿರುವುದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರ ವಹಿಸಿದ ಶ್ರಮ ಅಪಾರ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ರೈತ ಮೋರ್ಚಾ ಅಧ್ಯಕ್ಷ ರಾಜಕುಮಾರ ಚಹರ್ ಮಾತನಾಡಿ, ರಾಜ್ಯದ ರೈತ ಮೋರ್ಚಾವು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ವಿಶ್ವಗುರು ಆಗುವ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ.

ಇದನ್ನೂ ಓದಿ : Karnataka Election : ಮಹಿಳೆಯರ ಓಲೈಕೆಗೆ ಮುಂದಾದ ಬಿಜೆಪಿ: ಕರ್ನಾಟಕದಲ್ಲೇ ರಾಷ್ಟ್ರೀಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಆಯೋಜನೆ

370ನೇ ವಿಧಿ ರದ್ದು ಮಾಡಿ, ರಾಮಮಂದಿರವನ್ನು ಅಯೋಧ್ಯೆಯಲ್ಲೇ ನಿರ್ಮಿಸಿ ಎಂದು ನಾವು ಹಿಂದೆ ಘೋಷಣೆ ಕೂಗುತ್ತಿದ್ದೆವು. ಆ ಘೋಷಣೆಗಳು ಇದೀಗ ಜಾರಿಯಾಗಿವೆ. 370ನೇ ವಿಧಿ ರದ್ದು ಮಾಡಲು ಮೋದಿಜಿ ಮತ್ತು ಅಮಿತ್ ಶಾ ಅವರು ಕಾರಣಕರ್ತರಾಗಿದ್ದಾರೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವೂ ನಡೆದಿದೆ. ಬಿಜೆಪಿಯ ರೈತಪರ ಕೆಲಸಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ನಾವು ಮಾಡಬೇಕಿದೆ ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವೆ ಶಶಿಕಲಾ ಜೊಲ್ಲೆ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಸಂಸದರಾದ ಮಂಗಲಾ ಅಂಗಡಿ ಭಾಗವಹಿಸಿದ್ದರು.

Exit mobile version