Site icon Vistara News

BJP Politics : ಬರ ನಿರ್ವಹಣೆಗೆ ವಿಫಲ ; ಡಿ. 13ರಂದು ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ

BJP Protest N Ravi kumar

ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲದಿಂದ ಸಂಕಷ್ಟದಲ್ಲಿರುವ (Drought Situation) ರೈತರ ಮೇಲೆ ಈ ಸರಕಾರ ಬರೆ ಎಳೆಯುತ್ತಿದೆ; ಬರಗಾಲ ನಿರ್ವಹಣೆಯಲ್ಲಿ ಅದು ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ ಬಿಜೆಪಿ (BJP Politics) ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ (N Ravikumar) ಅವರು ಆಕ್ಷೇಪಿಸಿದ್ದು, ಇದರ ವಿರುದ್ಧ ಡಿಸೆಂಬರ್‌ 13ರಂದು ಬೆಳಗಾವಿಯಲ್ಲಿ ಬೃಹತ್‌ ಪ್ರತಿಭಟನೆ (Protest on december 13) ನಡೆಸಲಾಗುವುದು ಎಂದು ಘೋಷಿಸಿದರು.

ಬೆಳವಾವಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಮೊದಲೇ ವಿದ್ಯುತ್ ಕೊರತೆ ಇದೆ. ನಾವು 7 ಗಂಟೆ ವಿದ್ಯುತ್ ಕೊಡುತ್ತಿದ್ದೆವು. ಈ ಸರಕಾರ 5 ಗಂಟೆಯಷ್ಟೂ ವಿದ್ಯುತ್ ಸರಬರಾಜು ಮಾಡುತ್ತಿಲ್ಲ. ಹೊಸ ಬೋರ್‌ವೆಲ್‌ ಕೊರೆಸಿದಾಗ ವಿದ್ಯುತ್ ಸಂಪರ್ಕಕ್ಕೆ 2ರಿಂದ 3 ಲಕ್ಷ ಖರ್ಚಾಗುತ್ತದೆ. ಆ ಖರ್ಚನ್ನು ರೈತರೇ ಕೊಡಬೇಕೆಂದು ಸರಕಾರ ತಿಳಿಸಿದೆ ಎಂದು ಕಿಡಿಕಾರಿದರು.

ರೈತರು, ಬಡವರ ಮೇಲೆ ಬರೆ ಹಾಕುವ ಸರಕಾರ ಇದು ಎಂದು ಟೀಕಿಸಿದ ಅವರು, ಶಾಸಕರಿಗೆ ಅನುದಾನ ಕೊಡುತ್ತಿಲ್ಲ. ಕೃಷ್ಣಾ, ಕಳಸಾ ಬಂಡೂರಿ ಸೇರಿ ಉತ್ತರ ಕರ್ನಾಟಕದ ಯಾವುದೇ ನೀರಾವರಿ ಯೋಜನೆಗೆ ಒಂದು ನಯಾಪೈಸೆಯನ್ನೂ ಕೊಟ್ಟಿಲ್ಲ. ಆರು ತಿಂಗಳಾದರೂ ಒಂದು ಕಿಮೀ ರಸ್ತೆ ಮಾಡಿಲ್ಲ. ರೈತರು, ಉತ್ತರ ಕರ್ನಾಟಕದ ಬಗ್ಗೆ ಕಳಕಳಿರಹಿತ, ಅಭಿವೃದ್ಧಿ ಶೂನ್ಯ ಸರಕಾರ ಇದು ಎಂದು ಆರೋಪಿಸಿದರು.

ಈ ಎಲ್ಲ ವಿಷಯಗಳನ್ನು ಅಧಿವೇಶನದಲ್ಲಿ ಚರ್ಚೆಗೆ ಕೈಗೆತ್ತಿಕೊಳ್ಳಲು ಆಗ್ರಹಿಸಿ ಇದೇ 13ರಂದು ನಾವು ಬೆಳಗಾವಿಯಲ್ಲಿ ಬೃಹತ್ ಹೋರಾಟ ನಡೆಸುತ್ತೇವೆ. 25 ಸಾವಿರಕ್ಕೂ ಹೆಚ್ಚು ರೈತರು, ಬಡವರು, ಯುವಕರು, ಮಹಿಳೆಯರು, ಕಾರ್ಮಿಕರು ಹೋರಾಟಕ್ಕೆ ಆಗಮಿಸಲಿದ್ದಾರೆ. ರಾಜ್ಯದ ರೈತ ನಾಯಕ, ಹಿರಿಯ ಮುಖಂಡ, ಮಾಜಿ ಸಿಎಂ ಯಡಿಯೂರಪ್ಪನವರು, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಸದಾನಂದಗೌಡ, ಮಾಜಿ ಡಿಸಿಎಂಗಳಾದ ಗೋವಿಂದ ಕಾರಜೋಳ, ಈಶ್ವರಪ್ಪ, ಮಾಜಿ ಸಚಿವ ಶ್ರೀರಾಮುಲು ಮತ್ತಿತರ ಮುಖಂಡರು ಭಾಗವಹಿಸುತ್ತಾರೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಸ್ಥಳೀಯ ಸಂಸದರು, ಶಾಸಕರು ಭಾಗವಹಿಸುತ್ತಾರೆ. ಈ ಸರಕಾರಕ್ಕೆ ಬಾರುಕೋಲಿನ ಏಟು, ಛಡಿ ಏಟು ಕೊಡುವ ಆಂದೋಲನವನ್ನು ನಾವು 13ರಂದು ಮಾಡಲಿದ್ದೇವೆ ಎಂದು ವಿವರಿಸಿದರು.

ಈ ಸರಕಾರ ಸಂಪೂರ್ಣ ವಿಫಲವಾಗಿದೆ. ಈ ಸರಕಾರ, ಎಸ್‍ಸಿ, ಎಸ್‍ಟಿ, ಒಬಿಸಿಗಳ ಸರಕಾರ. ಎಸ್‍ಸಿ, ಎಸ್‍ಟಿಗಳ ಅಭಿವೃದ್ಧಿಗೆ ಮೀಸಲಿಟ್ಟ 34 ಸಾವಿರ ಕೋಟಿ ಹಣದಲ್ಲಿ 11,500 ಕೋಟಿ ಹಣವನ್ನು ಬೇರೆ ಇಲಾಖೆಗೆ ವರ್ಗಾಯಿಸಿದೆ. ದೇವರಾಜ ಅರಸು ನಿಗಮ, ಅಂಬೇಡ್ಕರ್ ನಿಗಮ, ಜಗಜೀವನ್ ರಾಂ ನಿಗಮ, ಅಂಬಿಗರ ಚೌಡಯ್ಯ ನಿಗಮ ಸೇರಿ ಅನೇಕ ಒಬಿಸಿ ನಿಗಮಗಳಿಗೆ ಒಂದು ಪೈಸೆ ಕೊಟ್ಟಿಲ್ಲ ಎಂದು ಆಕ್ಷೇಪಿಸಿದರು. ಈ ಸರಕಾರಕ್ಕೆ ಪ್ರಥಮ ಆದ್ಯತೆಯೇ ಅಲ್ಪಸಂಖ್ಯಾತರು ಎಂದು ಟೀಕಿಸಿದರು.

ಇದನ್ನು ಪ್ರಶ್ನೆ ಮಾಡಿ ಭಾರೀ ದೊಡ್ಡ ಆಂದೋಲನ ನಡೆಯಲಿದೆ ಎಂದರು. ಬಿಜೆಪಿ ರಾಜ್ಯ ವಕ್ತಾರ ಎಂ.ಬಿ. ಜಿರಲಿ, ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಮತ್ತು ಮಾಜಿ ಶಾಸಕ ಸಂಜಯ್ ಪಾಟೀಲ್, ಬೆಳಗಾವಿ ಮಹಾನಗರ ಅಧ್ಯಕ್ಷ ಮತ್ತು ಮಾಜಿ ಶಾಸಕ ಅನಿಲ್ ಬೆನಕೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿರಾದಾರ್, ಮುಖಂಡ ರವಿ ಪಾಟೀಲ್, ಜಿಲ್ಲಾ ಮಾಧ್ಯಮ ಸಂಚಾಲಕ ಶರದ್ ಪಾಟೀಲ್ ಅವರು ಈ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

Exit mobile version