ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಳದ ಅಧಿವೇಶನ (Belagavi Winter Session) ಕಾವೇರಿದೆ. ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯಗೆ (CM Siddaramaiah) ಮಾಟ, ಮಂತ್ರ (Black Magic) ಮಾಡುವ ವಿಚಾರದ ಬಗ್ಗೆ ಪ್ರಸ್ತಾಪವಾಗಿದೆ. ಈ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಪ್ರಸ್ತಾಪಿಸಿದ್ದು, ಚರ್ಚೆ ಹಾಸ್ಯದ ಕಡಲಲ್ಲಿ ತೇಲುವಂತೆ ಮಾಡಿತು.
ಬರ ಪರಿಸ್ಥಿತಿ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡುತ್ತಾ, ಜಿಲ್ಲಾ ಮಂತ್ರಿಗಳು ಜಿಲ್ಲೆಯಲ್ಲಿ ಜನತಾ ದರ್ಶನ ಕಾರ್ಯಕ್ರಮ ಮಾಡಿಲ್ಲ. ಸಿಎಂ ಕನಸಿನ ಯೋಜನೆಯನ್ನು ಮಂತ್ರಿಗಳು ಪಾಲನೆ ಮಾಡುತ್ತಿಲ್ಲ. ಹಾಗಾಗಿ ಸಿಎಂ ಸಿದ್ದರಾಮಯ್ಯ ಅವರೇ ನೀವು ಏನಾದರೂ ಮಾಡಬೇಕು. ಸಿಎಂ ಸಿದ್ದರಾಮಯ್ಯ ಅವರು ಮೊದಲಿನಂತೆ ಖಡಕ್ ಆಗಿಲ್ಲ. ಈ ಹಿಂದೆ ಖಡಕ್ ಆಗಿ ಅಧಿಕಾರಿಗಳಿಗೆ ಚಳಿ ಜ್ವರ ಬಿಡಿಸಿದ್ದನ್ನು ನಾನು ನೋಡಿದ್ದೇನೆ. ಈಗ ಯಾಕೋ ಗರ ಬಡಿದವರಂತೆ ಸಿದ್ದರಾಮಯ್ಯ ಆಗಿದ್ದಾರೆ. ನಮ್ಮ ಕಡೆ ಗಾಳಿ ಹೊಡೆದೈತೆ ಅಂತಾರೆ. ಎಚ್.ಡಿ. ರೇವಣ್ಣ ಅವರು ಸಿದ್ದರಾಮಯ್ಯ ಅವರಿಗೆ ಒಳ್ಳೆಯ ಸ್ನೇಹಿತರು. ಹಾಗಾಗಿ ರೇವಣ್ಣ ಏನಾದರೂ ಗಾಳಿ ಆಂಜನೇಯ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಗಾಳಿ ಬಿಡಿಸಲು ಆಗುತ್ತಾ ನೋಡಬೇಕು ಎಂದು ಹೇಳಿದರು.
ಆರ್. ಅಶೋಕ್ ಮಾತಿಗೆ ಎದ್ದು ನಿಂತ ಎಚ್.ಡಿ. ರೇವಣ್ಣ ಅವರು, ಸಿದ್ದರಾಮಯ್ಯ ಅವರಿಗೆ ಯಾರು ಏನು ಮಾಡಿದರೂ ಏನೂ ತಗಲುವುದಿಲ್ಲ. ಅವರಿಗೆ ದೇವರ ಶಕ್ತಿ ಇದೆ. ಯಾರೇ ಮಾಟ – ಮಂತ್ರ ಮಾಡಿಸಿದರೂ ರಿವರ್ಸ್ ಆಗಿ ಮಾಡಿಸಿದವರಿಗೆ ತಗಲುತ್ತದೆ ಎಂದು ಹೇಳಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಆರ್. ಅಶೋಕ್, ಸಿಎಂ ಸಿದ್ದರಾಮಯ್ಯ ಅವರು ಮಾಟ, ಮಂತ್ರ ತಗುಲದಂತೆ ಹೋಮ ಮಾಡಿಸಿದ್ದಾರಂತೆ. ಅದನ್ನು ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮಾಡಿಸಬೇಕಿತ್ತು ಎಂದು ಹೇಳಿದರು. ಹಾಗೇ ಮಾತು ಮುಂದುವರಿಸಿ, ಗರ ಬಡದಂತೆ ಆಗಿದ್ದಾರೆ ಎಂದು ನಾನು ಹೇಳಿಲ್ಲ. ಮಾಜಿ ಸಚಿವ ಎಚ್. ಆಂಜನೇಯ ಅವರು ಹೇಳಿದ್ದು ಸ್ಪಷ್ಟೀಕರಣ ನೀಡಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಬಸವನಗೌಡ ಪಾಟೀಲ್ ಯತ್ನಾಳ್, ಅವರು ಮಂಕು ಆಗಿರುವುದರಿಂದ ಬರ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಮೊದಲಿನ ಸಿದ್ದರಾಮಯ್ಯ ಆಗಿದ್ದರೆ ಉತ್ತಮ ಆಡಳಿತ ಇರುತ್ತಿತ್ತು. ನಾನು ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ. ಸಿದ್ದರಾಮಯ್ಯ ಅವರೇ ನೀವು ಯಾವುದಕ್ಕೂ ಭಯಪಡಬೇಡಿ. ದೇವರು ನಿಮ್ಮ ಜತೆ ಇದ್ದಾನೆ. ನೀವು ಐದು ವರ್ಷಗಳ ಕಾಲ ಸಿಎಂ ಆಗಿ ಮುಂದುವರಿಯಿರಿ ಎಂದು ಹೇಳಿದರು.
ಇದನ್ನೂ ಓದಿ: Belagavi Winter Session: ಟಿಸಿ ಬದಲಾಯಿಸಲು ಹಣ ಕೇಳ್ತಾರೆ, ರೈತರು ಬದುಕೋದು ಬೇಡವಾ? ಅಶೋಕ್ ಕ್ಲಾಸ್
ಸಿದ್ದರಾಮಯ್ಯ ಸಿಎಂ ಆಗಿ ಮುಂದೆ ಇರ್ತಾರೋ ಇಲ್ಲವೋ ಗೊತ್ತಿಲ್ಲ!
ಸಿದ್ದರಾಮಯ್ಯ 15 ಬಾರಿ ಬಜೆಟ್ ಮಂಡಿಸಿದ್ದಾರೆ. 2 ಬಾರಿ ಸಿಎಂ ಆಗಿದ್ದಾರೆ. 14 ಬಾರಿ ಅಲ್ವಾ ಒಂದು ಹೆಚ್ಚಾಗಿ ಹೇಳಿದ್ದೇನೆ. ಮುಂದೆಯೂ ನೀವೇ ಇರುತ್ತೀರಿ ಎಂದು ಹೇಳಿದ್ದೇನೆ. ನನಗೆ ಈ ಬಗ್ಗೆ ಗೊತ್ತಿಲ್ಲ. ಮಂಡ್ಯ ಎಂಎಲ್‌ಎ ರವಿ ಗಣಿಗ ಅವರು ಮಂಡ್ಯದಲ್ಲಿ 2 ವರ್ಷ, 3 ವರ್ಷ ಆದ ಮೇಲೆ ಯಾರನ್ನೋ ತರುತ್ತೇವೆ ಎಂದು ಹೇಳಿದ್ದರು ಎಂಬುದಾಗಿ ಆರ್. ಅಶೋಕ್ ಸಿಎಂ ಸಿದ್ದರಾಮಯ್ಯ ಅವರ ಕಾಲೆಳೆಯುತ್ತಿದ್ದಂತೆ ಎದ್ದುನಿಂತ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ, ನಿಮ್ಮ ಪಕ್ಷದ ಶಾಸಕರೊಬ್ಬರು ಮುಂದಿನ 10 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಅಂತ ಹೇಳಿದ್ದಾರೆ ಎಂದು ನೆನಪಿಸಿದರು. ಅದಕ್ಕೆ ಆರ್. ಅಶೋಕ್, ಆಯ್ತು ಅಂತ ಹೇಳಿ ಸುಮ್ಮನಾದರು.