ಬೆಂಗಳೂರು: ಮಹಾರಾಷ್ಟ್ರದ ಗಡಿ ಭಾಗದಲ್ಲಿ ಮರಾಠಿ ಶಾಲೆಗಳಿಗೆ ಕನ್ನಡಿಗ ಮಕ್ಕಳನ್ನು ಹೆಚ್ಚು ಸೇರಿಸಲು ಕುಮ್ಮಕ್ಕು ಕೊಡುವ ಸಂಚು ನಡೆದಿತ್ತು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ಸಿ. ಸೋಮಶೇಖರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಸೋಮಶೇಖರ್, ಎಂಇಎಸ್ ಸಂಘಟನೆಗಳು, ಮಹಾರಾಷ್ಟ್ರದ ನಿಯೋಗಗಳು ಬಂದು ನಮ್ಮಲ್ಲಿ ಮರಾಠಿ ಶಾಲೆಗಳನ್ನು ತೆರೆಯಲು ಸಂಚು ಮಾಡಿದ್ದವು. ಈ ಸಂಚನ್ನು ನಮ್ಮ ಪ್ರಾಧಿಕಾರದಿಂದ ತಡೆದಿದ್ದೇವೆ. ಬೆಳಗಾವಿ ಕನ್ನಡ ಹೋರಾಟಗಾರರು ಅದನ್ನು ನಿಲ್ಲಿಸುವ ಕೆಲಸ ಮಾಡಿದರು ಎಂದು ತಿಳಿಸಿದರು.
ಆರು ರಾಜ್ಯಗಳ ಜತೆ ನಮ್ಮ ಗಡಿ ಹೊಂದಿಕೊಂಡಿದೆ. 19 ಜಿಲ್ಲೆಗಳು, 63 ತಾಲೂಕುಗಳು, 980ಕ್ಕೂ ಹೆಚ್ಚು ಹಳ್ಳಿಗಳು ಗಡಿ ಭಾಗದಲ್ಲಿವೆ. ಕನ್ನಡಿಗರಿಗೆ ಭದ್ರತೆ ಒದಗಿಸುವುದು ಪ್ರಾಧಿಕಾರದ ಆಶಯ. ಡಿಸಿಗಳೇ ಇದರ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಕೇರಳದ ಗಡಿಯ ಕುರಿತು ಪ್ರತಿಕ್ರಿಯಿಸಿದ ಸೋಮಶೇಖರ್, ಅಲ್ಲಿರುವ ಹಳ್ಳಿಗಳಿಗೆ ಹೆಸರು ಬದಲಾವಣೆ ಮಾಡುವ ಕೆಲಸ ಮಾಡುತ್ತಿದ್ದರು. ಹೀಗಾಗಿ ಅಲ್ಲಿನ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇವೆ. ನಾವು ಒಂದು ಖಾಸಗಿ ಸಂಸ್ಥೆ ನೇಮಿಸಿ ಚೆಕ್ ಮಾಡಿಸಿದೆವು. ಬಳಿಕ ಹೆಸರು ಬದಲಾವಣೆ ಮಾಡುವ ಪ್ರಕ್ರಿಯೆ ನಿಲ್ಲಿಸಿದ್ದಾರೆ.
ಗಡಿ ಭಾಗದ ಜನರ ಆರ್ಥಿಕ, ಸಾಮಾಜಿಕ, ಶಿಕ್ಷಣ ಬಗ್ಗೆ ಅಧ್ಯಯನ ಬಗ್ಗೆ ಮಾಹಿತಿ ಇಲ್ಲ. 8 ವಿವಿಗಳನ್ನು ಇದಕ್ಕಾಗಿ ಸಂಪರ್ಕ ಮಾಡಿದ್ದೇವೆ. ವರದಿ ಕೊಡುವಂತೆ ಮನವಿ ಮಾಡಿದ್ದೇವೆ. ಕೆಲವೇ ದಿನಗಳಲ್ಲಿ ವರದಿ ನಮ್ಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೊಡಲಿದ್ದಾರೆ ಎಂದರು.
ಕಾಸರಗೋಡು, ಗೋವಾ, ಅಕ್ಕಲಕೋಟೆಯಲ್ಲಿ ಕನ್ನಡ ಭವನ ಕಟ್ಟಲು ಸರ್ಕಾರದಿಂದ ಐದು ಕೋಟಿ ರೂಪಾಯಿ ನೀಡಿದ್ದಾರೆ. ಕಾಸರಗೋಡಿನಲ್ಲಿ ಜಮೀನು ಕೊಡಲು ಕಯ್ಯಾರ ಕಿಞ್ಞಣ್ಣ ರೈ ಅವರ ಪುತ್ರ ಮುಂದೆ ಬಂದಿದ್ದಾರೆ. ಗಡಿ ಭಾಗದ ವಿಧ್ಯಾರ್ಥಿಗಳ ಹೆಸರಿಗೆ ಐದು ಸಾವಿರ ರೂಪಾಯಿ ಫಿಕ್ಸೆಡ್ ಡೆಪಾಸಿಟ್ ಮಾಡಲು ಯೋಜನೆ ರೂಪಿಸಬೇಕು ಎನ್ನುವುದು ನಮ್ಮ ಬಯಕೆ. ಮುಂದಿನ ಬಜೆಟ್‌ನಲ್ಲಿ ಇದನ್ನೂ ಘೋಷಣೆ ಮಾಡಲಿದ್ದಾರೆ ಎಂದರು.
ಮಹಾರಾಷ್ಟ್ರ ಕರ್ನಾಟಕ ಗಡಿ ವಿವಾದ ಕುರಿತು ಪ್ರತಿಕ್ರಿಯಿಸಿ, ಈ ಬಗ್ಗೆ ಮುಖ್ಯಮಂತ್ರಿಗಳು ಸಭೆ ಕರೆದು ಚರ್ಚೆ ಮಾಡಿದ್ದಾರೆ. ನಾನು, ಆಯೋಗದ ಅಧ್ಯಕ್ಷರಾದ ಶಿವರಾಜ್ ಪಾಟೀಲ್, ಅಡ್ವೊಕೇಟ್ ಜನರಲ್ ಜತೆ ಸಿಎಂ ಚರ್ಚೆ ಮಾಡಿದ್ದಾರೆ. ಸಭೆಯಲ್ಲಿ ಕಾನೂನಾತ್ಮಕವಾಗಿ ಹೋರಾಟ ಮಾಡುವ ಬಗ್ಗೆ ಚರ್ಚೆ ಆಗಿದೆ. ಅದರ ತೀವ್ರತೆ ಕೂಡ ಸರ್ಕಾರಕ್ಕೆ ಗಮನಕ್ಕೆ ಬಂದಿದೆ. ಖಂಡಿತ ಇದರಲ್ಲಿ ಸರ್ಕಾರದ ಪರವಾಗಿ ಜಯ ಸಿಕ್ಕೇ ಸಿಗುತ್ತದೆ. ನನ್ನ ವ್ಯಾಪ್ತಿಗೆ ಗಡಿ ಭಾಷೆ, ಸಂಸ್ಕೃತಿ ಮಾತ್ರ ಬರುತ್ತದೆ. ಗಡಿ ನದಿ ಸಮಸ್ಯೆಗಳಿಗೆ ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ಸರ್ಕಾರದಿಂದ ಸಮಿತಿ ಮಾಡಲಾಗಿದೆ.
ಜತ್ ಮತ್ತು ನಿಪ್ಪಾಣಿ, ಸೊಲ್ಲಾಪುರ ತಾಲೂಕಿನಲ್ಲಿ ಕನ್ನಡ ಭವನ ಕಟ್ಟಲು ನಿರ್ಧಾರ ಮಾಡಿದ್ದೇವೆ. ಈ ಮೂರು ತಾಲೂಕಿನಲ್ಲಿ ವಿದ್ಯಾರ್ಥಿಗಳಿಗೆ 5 ಸಾವಿರ ರೂಪಾಯಿ ಡೆಪಾಸಿಟ್ ಮಾಡುತ್ತೇವೆ. ಆ ಮಕ್ಕಳು ಪ್ರೌಢಶಾಲಾ ಶಿಕ್ಷಣಕ್ಕೆ ಹೊರ ರಾಜ್ಯಗಳಿಗೆ ಹೋಗುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಲು ನಾವು ವಿಧ್ಯಾರ್ಥಿಗಳಿಗೆ ಐದು ಸಾವಿರ ರೂಪಾಯಿ ಡೆಪಾಸಿಟ್ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇವೆ. ಜತ್ ತಾಲೂಕಿನಲ್ಲಿ ನಮ್ಮ ಚಟುವಟಿಕೆಗಳು ಹೆಚ್ಚು ನಡೆಯುತ್ತಿವೆ. ಅಲ್ಲಿನ ಜನರಿಗೆ ಮಹಾರಾಷ್ಟ್ರದಲ್ಲಿ ಇದ್ದೇವೆ ಎನ್ನುವ ಭಾವನೆ ಇಲ್ಲ ಎಂದರು.
ಗೋವಾ ಗಡಿ ಕುರಿತು ಪ್ರತಿಕ್ರಿಯಿಸಿದ ಸೋಮಶೇಖರ್, ಕಾರವಾರದಲ್ಲಿ ಕೊಂಕಣಿಯಲ್ಲಿ ನಾಮಫಲಕ ಹಾಕಲು ತೀರ್ಮಾನ ಮಾಡಿದ್ದರು. ಆದರೆ ನಾನು ಮುನ್ಸಿಪಾಲ್ಟಿ ಜತೆಗೆ ಕಾರ್ಯಾಚರಣೆ ನಡೆಸಿ ನಾಮಫಲಕ ತೆಗೆಸಿದ್ದೇವೆ. ಕಾರವಾರ, ಕರ್ನಾಟಕದ ಭಾಗ. ಹೀಗಾಗಿ ನಾನು ಹೇಳಿದ ತಕ್ಷಣವೇ ಕೊಂಕಣಿ ನಾಮ ಫಲಕ ತೆರವುಗೊಳಿಸಿದರು. ಭಾಷೆ, ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇದ್ದರೆ ನಾವು ಮುಂದೆ ಬರುತ್ತೇವೆ ಎಂದರು.
ಇದನ್ನೂ ಓದಿ | ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ವಿಚಾರಣಾರ್ಹತೆ ಇಂದು ನ್ಯಾಯಪೀಠದ ಮುಂದೆ