ಬೆಳಗಾವಿ: ಕರ್ನಾಟಕಕ್ಕೆ ನೀರು ಬಂದ್ ಮಾಡಲು, ಅಣೆಕಟ್ಟಿನ ಎತ್ತರ ಹೆಚ್ಚಿಸಲು ಅದು ಮಹಾರಾಷ್ಟ್ರ ಶಾಸಕರು, ಸಚಿವರ ತಾತನ ಆಸ್ತಿಯಲ್ಲ ಎಂದು ಸಚಿವ ಗೋವಿಂದ ಕಾರಜೋಳ ಅವರು ಸದನದಲ್ಲಿ ಖಡಕ್ ಆಗಿ ಹೇಳಿದ್ದಾರೆ.
ಈ ನಡುವೆ, ಕರ್ನಾಟಕ ಗಡಿ ವಿವಾದ (Border Dispute) ಕುರಿತಂತೆ ಮಹಾರಾಷ್ಟ್ರ ಎನ್‌ಸಿಪಿ ಶಾಸಕರು ನೀಡಿರುವ ಉದ್ಧಟತನದ ಹೇಳಿಕೆಗೆ ಕರ್ನಾಟಕದಲ್ಲಿ ಪಕ್ಷಾತೀತವಾಗಿ ಖಂಡನೆ ವ್ಯಕ್ತವಾಗಿದೆ. ಬೆಳಗಾವಿಯಲ್ಲಿ ಸದನದ ಒಳಗೆ ಹಾಗೂ ಹೊರಗೆ ಪ್ರತಿಕ್ರಿಯೆ ನೀಡಿರುವ ನಾಯಕರು, ಕರ್ನಾಟಕ ಹಾಗೂ ಕರ್ನಾಟಕ ಮುಖ್ಯಮಂತ್ರಿಯನ್ನು ಅವಮಾನಿಸುವುದನ್ನು ಸಹಿಸುವುದಿಲ್ಲ ಎಂದಿದ್ದಾರೆ.
ಸಚಿವ ಗೋವಿಂದ ಕಾರಜೋಳ ಮಾತನಾಡಿ, ಚುನಾಯಿತ ಪ್ರತಿನಿಧಿಗಳು ಸಂವಿಧಾನದ ಅಡಿಯಲ್ಲಿ ಪ್ರಮಾಣವಚನ ಸ್ವೀಕರಿಸಿ ಬಂದವರು. ಶಾಸನ ಸಭೆಗೆ ಬಂದು ನಡವಳಿಕೆ ಮೇಲೆ ಗಮನ ಇರಬೇಕು. ನೀರು ಅವರ ತಾತನ ಆಸ್ತಿ ಅಲ್ಲ. ನೀರು ಅವರ ಅಪ್ಪನ ಆಸ್ತಿ ಅಲ್ಲ. ನ್ಯಾಯಯುತವಾಗಿ ನೀರು ಹಂಚಿಕೆ ಮಾಡಲಾಗಿದೆ. ಸಂವಿಧಾನ ಬದ್ಧವಾಗಿ ಅಧಿಕಾರ ಉಪಯೋಗ ಮಾಡಿ ಭಾರತ ಸರ್ಕಾರ ಆದೇಶ ಮಾಡಿದೆ. ಡ್ಯಾಮ್ ಎತ್ತರಿಸಲಿಕ್ಕೆ ಅವರ ತಾತನ ಮನೆ ಡ್ಯಾಮ್ ಅಲ್ಲ. ನೀರು ಬಂದ್ ಮಾಡಲು ಅವರ ತಾತನ ಮನೆ ನೀರಲ್ಲ. ನಮಗೆ ಸಿಗುವ ಪಾಲು ನ್ಯಾಯಯುತವಾಗಿ ಸಿಕ್ಕಿದೆ. ಶಾಸನ ಸಭೆಗೆ ಬರುವವರು ನಡುವಳಿಕೆ, ಭಾಷೆ ಸಂಸ್ಕೃತಿ ಮೇಲೆ ಅರಿತುಕೊಂಡು ಒಳಗಡೆ ಬರಲಿ ಎಂದು ಕಿಡಿಕಾರಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಮಹಾರಾಷ್ಟ್ರದಲ್ಲಿ, ಕೇಂದ್ರದಲ್ಲಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಬಿಜೆಪಿ ಜತೆಗೆ ಸೇರಿಕೊಂಡು ಏಕನಾಥ್ ಶಿಂಧೆ ಮಹಾರಾಷ್ಟ್ರದಲ್ಲಿ ಸಿಎಂ ಆಗಿದ್ದಾರೆ. ಅವರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಹಾಗೆ ಮಾತನಾಡಲು ನಮಗೂ ಬರುತ್ತದೆ. ನಾವೂ ಕೂಡ ಮಾತನಾಡಬೇಕಾಗುತ್ತದೆ. ಗಡಿಯಲ್ಲಿ ಶಾಂತಿ ಕಾಪಾಡಿ ಎಂದು ಅಮಿತ್ ಶಾ ಸಭೆಯಲ್ಲಿ ಹೇಳಿದ್ದಾರೆ. ಅಮಿತ್ ಶಾ ಮಾತನ್ನು ಗಾಳಿಗೆ ತೂರಿದರ? ಅವರ ಮಾತಿಗೆ ಬೆಲೆ ಇಲ್ವಾ ? ಹಾಗಾದ್ರೆ ಯಾಕೆ ಸಭೆಗೆ ಹೋಗಿದ್ದರು?
ಗಡಿ ವಿಚಾರ ವಿವಾದವೇ ಅಲ್ಲ. ಮಹಾಜನ್ ವರದಿ ಬಂದು ಎಲ್ಲವೂ ಇತ್ಯರ್ಥವಾಗಿದೆ. ಮಹಾರಾಷ್ಟ್ರದ ಒತ್ತಾಯದ ಮೇರೆಗೆ ಮಹಾಜನ್ ವರದಿ ಸಿದ್ಧವಾಗಿದೆ. ವರದಿ ಕೊಟ್ಟ ಬಳಿಕ ಮಹಾರಾಷ್ಟ್ರ ಸರ್ಕಾರ ಕ್ಯಾತೆ ತೆಗೆದಿದೆ. ಮಹಾರಾಷ್ಟ್ರದವರಗೆ ನ್ಯಾಯಾಲಯ, ಸಮಿತಿ ವರದಿ ಯಾವುದರ ಮೇಲೂ ಗೌರವ ಇಲ್ಲ. ನಾವು ಒಮ್ಮತವಾಗಿ ಖಂಡನೆ ನಿರ್ಣಯ ಪಾಸ್ ಮಾಡುತ್ತೇವೆ. ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು. ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು. ಕೇಂದ್ರ ಸರ್ಕಾರ ವಿಫಲವಾಗಿದೆ. ನಮ್ಮ ಸಿಎಂ ವೀಕ್ ಇದ್ದಾರೆ ಎಂದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯಿಸಿ, ಗಡಿ ವಿಚಾರದಲ್ಲಿ ಯಾವುದೇ ರಾಜಿಗೆ ನಾವು ಸಿದ್ಧವಿಲ್ಲ. ವಿಧಾನಸಭೆಯಲ್ಲಿ ಎಲ್ಲರೂ ಒಟ್ಟಾಗಿ ಸೇರಿ ನಿರ್ಣಯ ಪಾಸ್ ಮಾಡಲಿದ್ದೇವೆ. ರಾಜ್ಯದ ಒಂದಿಂಚೂ ನೆಲ ಕೂಡ ಬಿಟ್ಟುಕೊಡುವ ಪ್ರಶ್ನೆ ಇಲ್ಲ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.
ಜೆಡಿಎಸ್ ಶಾಸಕ ಬಂಡೆಪ್ಪ ಕಾಶೆಂಪೂರ ಮಾತನಾಡಿ, ನಿನ್ನೆ ಮಹಾರಾಷ್ಟ್ರದ ನಾಯಕರು ಸಿಎಂ ಅವರನ್ನು ಕುರಿತು ಹಗುರವಾಗಿ ಮಾತನಾಡಿದ್ದಾರೆ. ಅದನ್ನು ಖಂಡಿಸುತ್ತೇವೆ. ಕರ್ನಾಟಕದವರೇನು ಕಡಿಮೆ ಇಲ್ಲ, ಎಲ್ಲದಕ್ಕೂ ತಯಾರಿದ್ದೇವೆ ಎನ್ನುವುದು ಗೊತ್ತಿರಲಿ. ನೆಲ, ಜಲ, ಭಾಷೆ ಬಂದಾಗ ನಮ್ಮಲ್ಲಿ ನೋ ಪಾರ್ಟಿ. ಎಲ್ಲರೂ ಒಂದಾಗಿ ನಿನ್ನೆ ಹೇಳಿದ್ದೇವೆ. ನೀವು ಮುಂದೆ ಹೋಗಿ, ನಾವು ನಿಮ್ಮ ಹಿಂದೆ ಇರುತ್ತೇವೆ ಎಂದು ಸಿಎಂಗೆ ಹೇಳಿದ್ದೇವೆ. ಯಾವುದಕ್ಕೂ ಅಂಜುವುದು ಬೇಡ ಎಂದರು.
ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ಇದರಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ. ಜಲ, ನೆಲ ಬಂದಾಗ ಪಕ್ಷಾತೀತವಾಗಿ ನಾವೆಲ್ಲರೂ ಸಿಎಂ ಬೆನ್ನೆಲುಬಾಗಿ ನಿಲ್ಲಲು ತಯಾರಾಗಿದ್ದೇವೆ. ಬೇರೆ ರಾಜ್ಯವರು ಸಂಸದರು ನಮ್ಮ ಸಿಎಂ ಬಗ್ಗೆ ಹಗುರವಾಗಿ ಮಾತನಾಡುವುದು ಸಹಿಸುವುದಿಲ್ಲ. ನಮ್ಮ ಸಿಎಂ ಕೂಡ ಈ ವಿಚಾರದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಒಮ್ಮತದಿಂದ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ನಮ್ಮ ಅನಿಸಿಕೆ ಏನೇನಿದೆ ಅದನ್ನು ಸಿಎಂ ಮಾಡಬೇಕು.
ಇದನ್ನೂ ಓದಿ | ಹಸುಗೂಸಿನೊಂದಿಗೆ ಚಳಿಗಾಲದ ಅಧಿವೇಶನಕ್ಕೆ ಬಂದ ಮಹಾರಾಷ್ಟ್ರ ಶಾಸಕಿ; ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ ಶಿಂಧೆ