ಬೆಳಗಾವಿ: ಬೋರ್‌ವೆಲ್ ನೀರು ಕುಡಿದು 41 ಜನರಿಗೆ ವಾಂತಿ ಭೇದಿ (Borewell water) ಕಾಣಿಸಿಕೊಂಡಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಚಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಬೋರ್‌ವೆಲ್ ನೀರಿನಿಂದಾಗಿ 41 ಜನ ಅಸ್ವಸ್ಥಗೊಂಡಿದ್ದು, ಓರ್ವ ಮಹಿಳೆ ಗಂಭೀರವಾಗಿದ್ದಾರೆ.
ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮೂವರನ್ನು ದಾಖಲು ಮಾಡಿದ್ದು, ಓರ್ವ ಮಹಿಳೆಗೆ ಐಸಿಯುವಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೈಲಹೊಂಗಲ ತಾಲೂಕು ಆಸ್ಪತ್ರೆಗೆ ಮೂವರು ದಾಖಲಾಗಿದ್ದು, ಇನ್ನೂಳಿದವರಿಗೆ ಚಚಡಿ ಗ್ರಾಮದ ಪಿಎಚ್‌ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಆರೋಗ್ಯ ಅಧಿಕಾರಿಗಳು ಬೋರ್‌ವೆಲ್ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಗ್ರಾಮದಲ್ಲೇ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಬಿಡು ಬಿಟ್ಟಿದ್ದಾರೆ. ಸ್ಥಳಕ್ಕೆ ಡಿಎಚ್ಒ ಮಹೇಶ್ ಕೋಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರ ಜತೆಗೆ ತುರ್ತು ಸಭೆ ನಡೆಸಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಸೂಚನೆ ನೀಡಲಾಗಿದೆ. ಸದ್ಯಕ್ಕೆ ಬೋರ್ ವೆಲ್ ನೀರು ಕುಡಿಯದಂತೆ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ.
ಸವದತ್ತಿಯ ಚಚಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀಮ್ಸ್ ಆಸ್ಪತ್ರೆಗೆ ಡಿಹೆಚ್ಒ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದರು. ಬೈಲಗೊಂಗಲ, ಇಂಚಲ ಸೇರಿ ಬೀಮ್ಸ್ ಆಸ್ಪತ್ರೆಯಲ್ಲಿ ಅಸ್ವಸ್ಥರು ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರ ಅಸ್ವಸ್ಥರಾಗಿದ್ದ ಈರವ್ವ ಗಾಳಿಮಠ (54) ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಳಿಕ ಮಾತನಾಡಿದ ಡಿಹೆಚ್‌ಓ ಮಹೇಶ ಕೋಣಿ, ಚಚಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 41 ಜನ ಅಸ್ವಸ್ಥರಾಗಿದ್ದಾರೆ. ಬೈಲಗೊಂಗಲ, ಇಂಚಲ ಆಸ್ಪತ್ರೆಗಳಲ್ಲಿ ಅಸ್ವಸ್ಥರಿಗೆ ಚಿಕಿತ್ಸೆ ನೀಡಾಗುತ್ತಿದೆ. ಚಚಡಿ ಗ್ರಾಮದಲ್ಲಿ 15 ಬೋರ್‌ವೇಲ್, 2 ಬಾವಿ, 3 ಓವರ್ ಹೆಡ್ ಟ್ಯಾಂಕ್ ಇವೆ. ಮೋಲ್ನೋಟಕ್ಕೆ ಇದು ಬ್ಯಾಕ್ಟಿರಿಯಲ್ ಇನ್ಫೆಕ್ಷನ್ ಆದಂತಿದೆ. ಈಗಾಗಲೇ ಕಲುಷಿತ ನೀರು ಟೆಸ್ಟಿಂಗ್‌ಗೆ ಕಳಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಸದ್ಯ ಊರಿಗೆ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ. ಊರಲ್ಲಿ ಚಿಕಿತ್ಸೆಗೆ ವೈದ್ಯರ ತಂಡ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ