Site icon Vistara News

ಬಿಜೆಪಿಯವರು ಸರಕಾರ ಮಾಡಿದ್ದೇ ಕುದುರೆ ವ್ಯಾಪಾರ ಮಾಡಿ: ಲಕ್ಷ್ಮೀ ಹೆಬ್ಬಾಳ್ಕರ್ ಗೇಲಿ

lakshmi hebalkar

ಬೆಳಗಾವಿ: ವಾಯವ್ಯ ಶಿಕ್ಷಕರ ಕ್ಷೇತ್ರಕ್ಕೆ ಸೋಮವಾರವಷ್ಟೆ ಮತದಾನವಾಗಿದೆ. ಆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಗೆಲ್ಲುವ ವಿಶ್ವಾಸವಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು. ಬೆಳಗಾವಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತಾನಾಡಿದ ಅವರು ʼʼಬಿಜೆಪಿಯವರು ಕುದುರೆ ವ್ಯಾಪಾರ ಮಾಡಿ ಸರ್ಕಾರ ಮಾಡಿದ್ದಾರೆʼʼ ಎಂದು ಆರೋಪಿಸಿದರು.

ಇದನ್ನೂ ಓದಿ | ವಾಯವ್ಯ ಶಿಕ್ಷಕರ ಚುನಾವಣೆ: ಕಾಂಗ್ರೆಸ್ ಪಕ್ಷದಲ್ಲಿಯೂ ಭಿನ್ನಮತದ ಹೊಗೆ?

ವಿಧಾನ ಪರಿಷತ್‌ ಚುನಾವಣೆಯಲ್ಲಿ ಪ್ರಕಾಶ್‌ ಹುಕ್ಕೇರಿ ಹಣ ಹಂಚಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಉತ್ತರಿಸಿದ ಅವರು ʼʼಭೂತದ ಬಾಯಿಯಲ್ಲಿ ಭಗವದ್ಗೀತೆ ಕೇಳಿದಂತೆ ಆಗಿದೆʼʼ ಎಂದು ತಿರುಗೇಟು ಕೊಟ್ಟರು. ʼʼಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ಬೀಳಿಸಲು ಶಾಸಕ ವಿಶ್ವನಾಥ ಮನೆಗೆ ಹೋಗಿ 5 ಕೋಟಿ ನೀಡಿ, ತಮ್ಮೊಂದಿಗೆ ಬರುವಂತೆ ಬಿಜೆಪಿಯವರು ಆಮಿಷ ತೋರಿಸಿದ್ದಾಗಿ ವಿಧಾನಸಭೆ ಅಧಿವೇಶನ ವೇಳೆ ಜೆಡಿಎಸ್ ಶಾಸಕ ಶ್ರೀನಿವಾಸ್ ಅವರೇ ಹೇಳಿದ್ದರು. ಬಿಜೆಪಿ ಸರ್ಕಾರ ತರಲು 11 ಕೋಟಿ ರೂ. ಸಾಲ ತರಬೇಕಾಯ್ತು ಎಂದು ಮಾಜಿ ಸಚಿವರೊಬ್ಬರು ಹೇಳಿದ್ದರುʼʼ ಎಂದು ಹೆಬ್ಬಾಳ್ಕರ್‌ ರಮೇಶ್ ಜಾರಕಿಹೊಳಿ ಅವರಿಗೆ ಟಾಂಗ್ ಕೊಟ್ಟರು.

ಪ್ರಕಾಶ ಹುಕ್ಕೇರಿ ಮ್ಯಾಟ್ರಿಕ್ ಫೇಲ್ ಎಂದು ಬಿಜೆಪಿ ನಾಯಕ ಪ್ರಭಾಕರ ಕೋರೆ ಅವರು ವ್ಯಂಗವಾಡಿರುವ ಬಗ್ಗೆ ಪ್ರತಿಕ್ರಿಯಿಸಿ ʼʼಪ್ರಭಾಕರ್‌ ಕೋರೆ ಅವರು ನನಗಿಂತ ವಯಸ್ಸಿನಲ್ಲಿ, ಅನುಭವದಲ್ಲಿ ದೊಡ್ಡವರು. ಪ್ರಕಾಶ ಹುಕ್ಕೇರಿ ಅವರು SSLC ಪಾಸೋ, ಫೇಲೋ ಗೊತ್ತಿಲ್ಲ. ಆದರೆ ಜನರ ಪರೀಕ್ಷೆಯ ಚುನಾವಣೆಯಲ್ಲಿ 8 ಬಾರಿ ಪಾಸ್ ಆಗಿ ಭೇಷ್ ಎನಿಸಿಕೊಂಡಿದ್ದಾರೆʼʼ ಎಂದರು.

ಪ್ರಕಾಶ್ ಹುಕ್ಕೇರಿಯವರಿಗೆ ಮುದಿ ಎತ್ತು ಎಂದು ಗೇಲಿ ಮಾಡಿದ್ದ ಸಚಿವ ಗೋವಿಂದ ಕಾರಜೋಳ ಅವರಿಗೂ ಲಕ್ಷ್ಮಿ ಹೆಬ್ಬಾಳ್ಕರ್‌ ತಿರುಗೇಟು ನೀಡಿದರು. ʼʼಸ್ವತಃ ಗೋವಿಂದ ಕಾರಜೋಳರಿಗೆ 70ರ ಮೇಲೆ ವಯಸ್ಸಾಗಿದೆ. ಹೀಗಿರುವಾಗ ಮುದಿ ಎತ್ತು ಎಂದು ಅವರು ಬೇರೆಯವರಿಗೆ ಟೀಕಿಸುವುದು ಎಷ್ಟು ಸರಿʼʼ ಎಂದು ಪ್ರಶ್ನಿಸಿದರು.

ಇದನ್ನೂ ಓದಿ | ಬೆಳಗಾವಿಯಲ್ಲಿ ನೂಪುರ್‌ ಶರ್ಮಾ ಪ್ರತಿಕೃತಿಯನ್ನು ಗಲ್ಲಿಗೇರಿಸಿದ್ದ ಮೂವರ ಬಂಧನ

Exit mobile version