Site icon Vistara News

BY Vijayendra :‌ ನಾಸಿರ್‌ ಹುಸೇನ್‌ ಕೂಡಾ ಅಪರಾಧಿ, FIRನಲ್ಲಿ ಸೇರಿಸಿ; ವಿಜಯೇಂದ್ರ ಆಗ್ರಹ

Sedition Case BY Vijayendra

ಬೆಳಗಾವಿ: ವಿಧಾನ ಸೌಧದಲ್ಲಿ (Vidhana Soudha) ಪಾಕಿಸ್ತಾನ್ ಜಿಂದಾಬಾದ್‌ (Pakistan Zindabad) ಘೋಷಣೆ ಕೂಗಿದ ಪ್ರಕರಣದಲ್ಲಿ ರಾಜ್ಯಸಭಾ ಸದಸ್ಯರಾಗಿ (Rajyasabha Member) ಕಾಂಗ್ರೆಸ್‍ನಿಂದ ಆಯ್ಕೆಯಾದ ನಾಸಿರ್ ಹುಸೇನ್ (Nasir Husein) ಅವರನ್ನು ಕೂಡ ಅಪರಾಧಿ ಎಂದು ಎಫ್‍ಐಆರ್‌ನಲ್ಲಿ ಸೇರಿಸಬೇಕು. ಜಿಂದಾಬಾದ್‌ ಘೋಷಣೆ ಮಾಡಿದ ಮೂವರು ಆರೋಪಿಗಳ ವಿವರ ಲಭಿಸಿದೆ. ನಾಲ್ಕನೇ ಆರೋಪಿಯಾಗಿ ನಾಸೀರ್ ಹುಸೇನ್ ಹೆಸರು ಸೇರಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (BY Vijayendra) ಅವರು ಆಗ್ರಹಿಸಿದ್ದಾರೆ.

ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಖಾಸಗಿ ಎಫ್‍ಎಸ್‍ಎಲ್ ವರದಿ ಬಿಡುಗಡೆ ಆಗದೆ ಇದ್ದಿದ್ದರೆ ಸರಕಾರ ಈ ದೇಶದ್ರೋಹಿಗಳನ್ನು ಬಂಧಿಸಲು ಮೀನ ಮೇಷ ಎಣಿಸುವ ಸಾಧ್ಯತೆ ಇತ್ತು ಎಂದು ಅನುಮಾನ ವ್ಯಕ್ತಪಡಿಸಿದರು.

Sedition Case : ಇನ್ನೂ ಎಫ್‌ಎಸ್‌ಎಲ್‌ ವರದಿ ಯಾಕೆ ಬಿಡುಗಡೆ ಮಾಡಿಲ್ಲ?

ವಿಧಾನಸೌಧದ ಒಳಗೆ ಕೆಲವು ದೇಶದ್ರೋಹಿಗಳು ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿದ ನಂತರ ಬಿಜೆಪಿ ನಿರಂತರ ಹೋರಾಟದ ಪ್ರತಿಫಲವಾಗಿ ಸೋಮವಾರ ಮೂರು ದೇಶದ್ರೋಹಿಗಳನ್ನು ಬಂಧಿಸಿದ್ದಾರೆ. ಆದರೆ, ರಾಜ್ಯ ಸರಕಾರ ಇನ್ನೂ ಎಫ್.ಎಸ್.ಎಲ್ ವರದಿಯನ್ನು ಬಹಿರಂಗಪಡಿಸಿಲ್ಲ ಎಂದು ಆಕ್ಷೇಪಿಸಿದರು.

ಸರಕಾರ ಯಾವ ಕಾರಣಕ್ಕೆ ಎಫ್.ಎಸ್.ಎಲ್ ವರದಿಯನ್ನು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ ಅವರು, ಇದಕ್ಕೆ ಉತ್ತರ ಕೊಡಿ ಎಂದು ಆಗ್ರಹಿಸಿದರು. ಈ ದೇಶದ್ರೋಹಿ ಘಟನೆಯ ಸೂತ್ರಧಾರಿಗಳು ಯಾರು? ಪಾತ್ರಧಾರಿಗಳು ಯಾರು? ಎಂದು ಕೇಳಿದರು. ಪ್ರಮುಖರಾದ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಅವರ ಹೆಸರನ್ನೇ ಪೊಲೀಸರು ಕೈಬಿಟ್ಟಿದ್ದಾರೆ ಎಂದು ಆರೋಪಿಸಿದರು.

ತನಿಖೆ ಪೂರ್ಣ ಆಗುವವರೆಗೆ ನಾಸಿರ್‌ ಹುಸೇನ್‌ ಪ್ರಮಾಣವಚನ ಸ್ವೀಕರಿಸಬಾರದು

ಜನಪ್ರತಿನಿಧಿ, ರಾಜ್ಯಸಭಾ ಸದಸ್ಯ ಆಗುವವರು ಸಂವಿಧಾನ ಮತ್ತು ದೇಶದ ಸಾರ್ವಭೌಮತ್ವ- ಅಖಂಡತೆಯನ್ನು ಎತ್ತಿಹಿಡಿಯುವುದಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ. ಈ ತನಿಖೆ ಪೂರ್ಣಗೊಳ್ಳುವವರೆಗೆ ನಾಸೀರ್ ಹುಸೇನ್ ಅವರು ಪ್ರಮಾಣವಚನ ಸ್ವೀಕರಿಸಬಾರದು ಎಂದು ಅವರು ಒತ್ತಾಯಿಸಿದರು. ಈ ಸಂಬಂಧ ರಾಜ್ಯಸಭಾ ಅಧ್ಯಕ್ಷರಾದ ಉಪ ರಾಷ್ಟ್ರಪತಿಗಳಿಗೆ ಬಿಜೆಪಿ ವತಿಯಿಂದ ಇವತ್ತೇ ಪತ್ರ ಬರೆಯಲಿದ್ದೇವೆ. ತನಿಖೆ ಪೂರ್ಣಗೊಳ್ಳುವವರೆಗೆ ಅವರಿಗೆ ಪ್ರಮಾಣವಚನ ಬೋಧಿಸದೆ ಇರಲು ಒತ್ತಾಯ ಮಾಡಲಿದ್ದೇವೆ ಎಂದರು.

ಮುಖ್ಯಮಂತ್ರಿಗಳು, ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕತೆ ಇದ್ದರೆ, ದೇಶಪ್ರೇಮ ಇದ್ದಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಂದು ಒತ್ತಾಯಿಸಿದರು. ನಾಸೀರ್ ಹುಸೇನ್ ಅವರು ಪ್ರಕರಣದಲ್ಲಿ ನಿರ್ದೋಷಿ ಎಂದು ಹೊರಕ್ಕೆ ಬರುವವರೆಗೆ ಅವರಿಗೆ ರಾಜ್ಯಸಭಾ ಸದಸ್ಯತ್ವದ ಪ್ರಮಾಣವಚನ ಸ್ವೀಕಾರಕ್ಕೆ ಅವಕಾಶ ಕೊಡಬಾರದು ಎಂದು ಆಗ್ರಹವನ್ನು ಮುಂದಿಟ್ಟರು.

ರಾಜ್ಯ ಸರಕಾರವು ಈ ವಿಷಯದಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಯಾಕೆ ಒತ್ತಾಯ ಹಾಕುತ್ತಿದೆ? ಎಫ್‍ಎಸ್‍ಎಲ್ ವರದಿ ಬಹಿರಂಗಪಡಿಸಲು ಯಾಕೆ ಮೀನಮೇಷ ಮಾಡುತ್ತ ಇದ್ದೀರಿ? ಎಂದ ಅವರು, ಈ ವಿಚಾರವನ್ನು ಇನ್ನೂ ಗಂಭೀರವಾಗಿ ಪರಿಗಣಿಸಿ ಎಂದು ಆಗ್ರಹಿಸಿದರು.

ಇದನ್ನೂ ಓದಿ: Sedition Case : ಪಾಕಿಸ್ತಾನ್‌ ಮುರ್ದಾಬಾದ್‌ ಬದಲು ಜಿಂದಾಬಾದ್‌ ಎಂದ ಬಿಜೆಪಿ ಕಾರ್ಯಕರ್ತ ಜೈಲಿಗೆ!

ದೇಶದ್ರೋಹದ ಪ್ರಶ್ನೆ ಬಂದಾಗ ಜಾತಿ, ಧರ್ಮ ನೋಡಬಾರದು

ದೇಶದ್ರೋಹದ ಪ್ರಶ್ನೆ ಬಂದಾಗ ಅವನು ಹಿಂದೂ, ಇವನು ಮುಸಲ್ಮಾನ ಎಂಬ ಪ್ರಶ್ನೆ ಉದ್ಭವವಾಗುವುದಿಲ್ಲ. ದೇಶದ್ರೋಹಿಗಳಿಗೆ ಯಾವುದೇ ಜಾತಿ, ಧರ್ಮ ಅಡ್ಡಿ ಬರಬಾರದು. ಈ ವಿಚಾರವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದಂತೆ ನಮಗಂತೂ ತೋರುತ್ತಿಲ್ಲ ಎಂದು ಆಕ್ಷೇಪ ಸೂಚಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.

Exit mobile version