Site icon Vistara News

Belagavi Winter Session: ಮೋಡ ಬಿತ್ತನೆಗೆ ಮುಂದಾದ ಸರ್ಕಾರ; ಶೀಘ್ರ ತೀರ್ಮಾನವೆಂದ ಡಿಕೆಶಿ

Prakash Koliwada and cloud seeding

ಬೆಳಗಾವಿ: ರಾಜ್ಯದಲ್ಲಿ ತೀವ್ರ ಬರಗಾಲ ಕಾಡುತ್ತಿದೆ. ಮಳೆ ಅಂಶವೇ ಇಲ್ಲ ಎಂಬಂತೆ ಆಗಿದೆ.‌ ಇದರಿಂದ ರೈತರು ಕಂಗಾಲಾಗಿದ್ದಾರೆ. ಅಲ್ಲದೆ, ಕುಡಿಯಲು ಸೇರಿದಂತೆ ಅನೇಕ ಕಾರಣಗಳಿಗೆ ಮಳೆ ಬಂದರೆ ಅನುಕೂಲವಾಗಲಿದೆ. ಅಲ್ಲದೆ, ಕೇಂದ್ರ ಸರ್ಕಾರ ಈಗಾಗಲೇ ಮಳೆ ಸಮಸ್ಯೆ ಆಗಿರುವ ಬಗ್ಗೆ ವರದಿ ನೀಡಿದೆ. ಹೀಗಾಗಿ ರಾಜ್ಯದಲ್ಲಿ ಮೋಡ ಬಿತ್ತನೆ (cloud seeding) ಆಗಬೇಕು ಎಂದು ಶಾಸಕ ಪ್ರಕಾಶ್ ಕೋಳಿವಾಡ (MLA Prakash Koliwada) ಅವರು ವಿಧಾನಸಭಾ ಕಲಾಪದ (Belagavi Winter Session) ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಿದರು. ಇದಕ್ಕೆ ಸಚಿವ ಎಚ್‌.ಕೆ. ಪಾಟೀಲ್‌ (Minister HK Patil) ಧ್ವನಿಗೂಡಿಸಿದ್ದಾರೆ. ಆಗ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar), ಮೋಡ ಬಿತ್ತನೆ ಈ ಹಿಂದೆ ಯಶಸ್ಸು ಕಂಡಿದೆ. ಹೀಗಾಗಿ ಈ ಬಗ್ಗೆ ಆರ್ಥಿಕ ಇಲಾಖೆ ಜತೆ ಮಾತನಾಡಿ ತೀರ್ಮಾನ ಪ್ರಕಟಿಸಲಾಗುವುದು ಎಂದು ಹೇಳಿದರು.

ಶೂನ್ಯ ವೇಳೆಯಲ್ಲಿ ಮೋಡ ಬಿತ್ತನೆ ಬಗ್ಗೆ ಗಮನ ಸೆಳೆದ ಶಾಸಕ ಪ್ರಕಾಶ್ ಕೋಳಿವಾಡ, ಮಳೆ ಇಲ್ಲದೆ ರೈತರಿಗೆ ಸಮಸ್ಯೆ ಆಗಿದೆ. ಕೇಂದ್ರ ಸರ್ಕಾರ ಈಗಾಗಲೇ ಮಳೆ ಸಮಸ್ಯೆ ಆಗಿರುವ ಬಗ್ಗೆ ವರದಿ ನೀಡಿದೆ. ಮೋಡ ಬಿತ್ತನೆ ಮಾಡಿರುವುದರಿಂದ ಮಳೆಯಾಗಲಿದೆ. ಕಡಿಮೆ ವೆಚ್ಚದಲ್ಲಿ ಮಳೆ ತರಿಸಿ ರೈತರಿಗೆ ಅನುಕೂಲ ಮಾಡಬಹುದು. ಅದಕ್ಕಾಗಿ ಸರ್ಕಾರ ಅನುದಾನ ನೀಡುವಂತೆ ಮನವಿ ಮಾಡಿದರು.

ಬೇಗ ಮೋಡ ಬಿತ್ತನೆ ಆಗಲಿ: ಎಚ್.ಕೆ. ಪಾಟೀಲ್

ಇದಕ್ಕೆ ಸಹಮತ ವ್ಯಕ್ತಪಡಿಸಿದ ಸಚಿವ ಎಚ್.ಕೆ. ಪಾಟೀಲ್, ಅತ್ಯಂತ ಗಂಭೀರ ಹಾಗೂ ಮಹತ್ವದ ವೈಜ್ಞಾನಿಕ ವಿಚಾರ ಎತ್ತಿದ್ದಾರೆ. ಇಂದು ಸೇರಿದಂತೆ ಇನ್ನೆರಡು ದಿನ ಮೋಡ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದನ್ನು ಉಪಯೋಗ ಮಾಡಿಕೊಳ್ಳಬೇಕು. ಅನ್ನೋದು ಅವರ ಆಶಾಭಾವನೆಯಾಗಿದೆ. ಕಡಿಮೆ ವೆಚ್ಚದಲ್ಲಿ ಮಾಡಬಹುದು ಅಂತ ಹೇಳಿದ್ದಾರೆ. ಈ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಹೆಚ್ಚು ಮಾಹಿತಿ ಕೊಡುತ್ತಾರೆ ಎಂದು ಹೇಳಿದರು.

ಎಷ್ಟು ಖರ್ಚಾಗುತ್ತದೆಯೋ ಅಷ್ಟು ಕೊಟ್ಟರೆ ಸಾಕು

ಆಗ ಡಿಸಿಎಂ ಡಿಕೆಶಿ ಉತ್ತರ ನೀಡಿ, ಮೋಡ ಬಿತ್ತನೆಯನ್ನು ಬಹಳ ರಾಜ್ಯಗಳಲ್ಲಿ ಪ್ರಯೋಗ ಮಾಡುತ್ತಿದ್ದಾರೆ. ಈ ಹಿಂದೆ ಎಚ್.ಕೆ ಪಾಟೀಲ್ ಇದನ್ನು ಮಾಡಿದ್ದರು. ಅಲ್ಲದೆ, ಇದಕ್ಕೆ ಎಷ್ಟು ಖರ್ಚಾಗುತ್ತದೆಯೋ ಅಷ್ಟು ಕೊಟ್ಟರೆ ಸಾಕು. ಹೆಚ್ಚಿಗೆ ಏನನ್ನೂ ಕೊಡುವುದು ಬೇಡ ಅಂತ ಪ್ರಕಾಶ್‌ ಕೋಳಿವಾಡ ಹೇಳಿದ್ದಾರೆ. ಹೀಗಾಗಿ ನಾನು ಫೈನಾನ್ಸ್ ಅವರ ಜತೆ ಮಾತನಾಡುತ್ತೇನೆ. ಈ ಹಿಂದೆ ಅವರ ಜಿಲ್ಲೆಯಲ್ಲಿ ಮಾಡಿ ಅದರ ಅನುಕೂಲ ಪಡೆದಿದ್ದಾರೆ. ಹಣಕಾಸು ಇಲಾಖೆ ಜತೆ ಚರ್ಚೆ ಮಾಡಿ ಮಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: Belagavi Winter Session: ಗ್ಯಾರಂಟಿಗೆ 11000 ಕೋಟಿ ರೂ. ಬಳಕೆ; ಯಾವುದಕ್ಕೆ ಎಷ್ಟು? ಲೆಕ್ಕ ಕೊಟ್ಟ ಸರ್ಕಾರ!

ಸರ್ಕಾರ ಕೊಡದಿದ್ದರೆ ನನ್ನ ದುಡ್ಡಲ್ಲಿ ಮಾಡುತ್ತೇನೆ!

ಈ ವೇಳೆ ಮಾತನಾಡಿದ ಶಾಸಕ ಪ್ರಕಾಶ್‌ ಕೋಳಿವಾಡ, ಒಂದು ವೇಳೆ ಸರ್ಕಾರ ಹಣ ಕೊಡದಿದ್ದರೆ ನಾನೇ ಸ್ವತಃ ನನ್ನ ಹಣದಿಂದ ಮೋಡ ಬಿತ್ತನೆ ಮಾಡಿಸುತ್ತೇನೆ ಎಂದು ಹೇಳಿದರು.

Exit mobile version