Site icon Vistara News

ಬೆಳಗಾವಿ ಅಧಿವೇಶನ | ಕರ್ನಾಟಕದಲ್ಲೂ ಅಧಿವೇಶನ ಮೊಟಕು?; ಮೀಸಲಾತಿ ಕುರಿತೂ ನಿರ್ಧಾರ: ಸೋಮವಾರ ಮಹತ್ವದ ಸಂಪುಟ ಸಭೆ

cm basavaraj bommai chairing cabinet meeting during belagavi session

ಬೆಳಗಾವಿ: ಅವಧಿಗೆ ಮುನ್ನವೇ ಮೊಟಕುಗೊಂಡ ರೀತಿಯಲ್ಲೇ ಕರ್ನಾಟಕದಲ್ಲೂ ಬೆಳಗಾವಿ ಅಧಿವೇಶನ ಮೊಟಕುಗೊಳ್ಳುತ್ತದೆಯೇ ಎಂಬ ಚರ್ಚೆಗಳು ನಡೆದಿದ್ದು, ಸೋಮವಾರ ನಡೆಯುವ ಸಚಿವ ಸಂಪುಟ ಸಭೆಯ ಕುರಿತು ಕುತೂಹಲ ಮೂಡಿಸಿದೆ.

ಸಂಸತ್ತಿನಲ್ಲಿ ನಡೆಯುತ್ತಿದ್ದ ಚಳಿಗಾಲದ ಅಧಿವೇಶನ ಆರು ದಿನ ಮೊದಲೇ ಮುಕ್ತಾಯವಾಗಿತ್ತು. ಕ್ರಿಸ್‌ಮಸ್‌ ರಜೆಗಳು, ವರ್ಷಾಂತ್ಯದ ರಜೆಗಳ ಕಾರಣಕ್ಕೆ ಎಲ್ಲ ಪಕ್ಷದವರೂ ಒತ್ತಾಯ ಮಾಡಿದ್ದರಿಂದ ಸರ್ವಾನುಮತದಿಂದ ಮುಂದೂಡಿಕೆ ಮಾಡಲಾಯಿತು ಎಂದು ಲೋಕಸಭೆ ಸ್ಪೀಕರ್‌ ತಿಳಿಸಿದ್ದರು.

ಬೆಳಗಾವಿಯಲ್ಲಿ ಡಿಸೆಂಬರ್‌ 17ಕ್ಕೆ ಆರಂಭವಾಗಿರುವ ಅಧಿವೇಶನ ಐದು ದಿನ ನಡೆದಿದೆ. ಡಿಸೆಂಬರ್‌ 30ರವರೆಗೂ ನಡೆಯಬೇಕಿದೆ. ಆದರೆ ಇಲ್ಲಿಯೂ ವರ್ಷಾಂತ್ಯದ ರಜೆಗಳ ಕಾರಣಕ್ಕೆ ಸದಸ್ಯರು ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಕೋವಿಡ್‌ ಸೋಂಕು ಉಲ್ಬಣ ಆತಂಕ ಹಾಗೂ ಕಠಿಣ ಮಾರ್ಗಸೂಚಿ ಪಾಲನೆ ವಿಚಾರಗಳೂ ಮುನ್ನೆಲೆಗೆ ಬಂದಿವೆ. ಇದೆಲ್ಲದನ್ನೂ ಗಮನದಲ್ಲಿರಿಸಿಕೊಂಡು ಬೆಳಗಾವಿ ಅಧಿವೇಶನವನ್ನೂ ಮೊಟಕುಗೊಳಿಸುವ ಕುರಿತು ಚರ್ಚೆ ಹಾಗೂ ನಿರ್ಧಾರ ಮಾಡಲಾಗುತ್ತದೆ ಎನ್ನಲಾಗಿದೆ.

ಪಂಚಮಸಾಲಿ ಮೀಸಲಾತಿ

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಕುರಿತು ನಡೆಯುತ್ತಿರುವ ಹೋರಾಟ ಡಿಸೆಂಬರ್‌ 22ರ ಗಡುವು ಮುಕ್ತಾಯವಾಗಿದೆ. ಡಿಸೆಂಬರ್‌ 29ರವರೆಗೆ ಸಿಎಂ ಬಸವರಾಜ ಬೊಮ್ಮಾಯಿ ಕಾಲಾವಕಾಶ ಪಡೆದುಕೊಂಡಿದ್ದಾರೆ ಎಂದು ಹೋರಾಟದ ಮುಂಚೂಣಿಯಲ್ಲಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.

ಕಳೆದ ಸಚಿವ ಸಂಪುಟದ ವೇಳೆಗೆ ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿಯನ್ನು ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಪ್ರಸ್ತುತಪಡಿಸಿದ್ದರಾದರೂ ಸಂಪುಟದಲ್ಲಿ ಚರ್ಚೆ ಮಾಡಿರಲಿಲ್ಲ. ಮುಂದಿನ ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ಮಾಡಬೇಕು ಎಂದು ನಿರ್ಧರಿಸಲಾಗಿತ್ತು. ಸೋಮವಾರ ಸಂಪುಟ ಸಭೆಯಲ್ಲಿ ಈ ವಿಚಾರವೂ ಪ್ರಸ್ತಾಪ ಆಗಲಿದ್ದು, ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.

ಸಂಪುಟ ವಿಸ್ತರಣೆ ಚರ್ಚೆ

ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಸಚಿವ ಸಂಪುಟಕ್ಕೆ ಸೇರ್ಪಡೆ ಆಗುವವರ ಒತ್ತಡವೂ ಹೆಚ್ಚಾಗುತ್ತಿದೆ. ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಪ್ರಕರಣದಲ್ಲಿ ರಾಜೀನಾಮೆ ನೀಡಿದ್ದ ಕೆ.ಎಸ್‌. ಈಶ್ವರಪ್ಪ, ಸಿಡಿ ವಿಚಾರದಲ್ಲಿ ರಾಜೀನಾಮೆ ನೀಡಿದ್ದ ರಮೇಶ್‌ ಜಾರಕಿಹೊಳಿ ಈಗಾಗಲೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಸಂಪುಟಕ್ಕೆ ಸೇರ್ಪಡೆ ಮಾಡುವುದು ಖಚಿತ ಎಂದು ಬೊಮ್ಮಾಯಿ ಭರವಸೆ ನೀಡಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ. ಸಂಪುಟ ಸಭೆ ಮುಗಿಸಿದ ನಂತರ ಬೊಮ್ಮಾಯಿ ನವದೆಹಲಿಗೆ ತೆರಳಲಿದ್ದು, ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ. ಸಂಪುಟ ವಿಸ್ತರಣೆ ಆಗಬಹುದು, ಪುನಾರಚನೆಯೂ ಆಗಬಹುದು, ಮಾನಸಿಕವಾಗಿ ಸಿದ್ಧರಾಗಿರಿ ಎಂದು ಸಂಪುಟ ಸದಸ್ಯರಿಗೆ ಬೊಮ್ಮಾಯಿ ತಿಳಿಸುವ ಸಾಧ್ಯತೆಯಿದೆ.

ಇದನ್ನೂ ಓದಿ | ಬೆಳಗಾವಿ ಅಧಿವೇಶನ | ಒಂದು ಲಕ್ಷ ಹುದ್ದೆಗಳ ಭರ್ತಿಗೆ ಕ್ರಮ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Exit mobile version