ಬೆಳಗಾವಿ: ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ (Vokkaliga Reservation) ಹೆಚ್ಚಳಕ್ಕೆ ಆದಷ್ಟು ಶೀಘ್ರವಾಗಿ ವರದಿ ಸಲ್ಲಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚಿಸಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಒಕ್ಕಲಿಗ ಸಮುದಾಯಕ್ಕೆ ಪ್ರವರ್ಗ 3ಎ ಅಡಿ ಮೀಸಲಾತಿ ಪ್ರಮಾಣವನ್ನು ಶೇಕಡಾ 12ಕ್ಕೆ ಹೆಚ್ಚಿಸಬೇಕು ಎಂದು ರಾಜ್ಯ ಸರ್ಕಾರದಲ್ಲಿರುವ ಸಮುದಾಯಕ್ಕೆ ಸೇರಿದ ಸಚಿವರು ಹಾಗೂ ಶಾಸಕರಿಂದ ಮನವಿ ಸ್ವೀಕರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯದ ಜನಸಂಖ್ಯೆಯಲ್ಲಿ ಶೇಕಡ 16ರಷ್ಟಿರುವ ಹಾಗೂ ವಿವಿಧ ಯೋಜನೆಗಳಿಂದಾಗಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಕಳೆದುಕೊಳ್ಳುತ್ತಿರುವ ಒಕ್ಕಲಿಗ ಸಮುದಾಯಕ್ಕೆ ಪ್ರವರ್ಗ 3ಎ ಅಡಿ ಮೀಸಲಾತಿಯನ್ನು ಶೇಕಡ 12ಕ್ಕೆ ಹೆಚ್ಚಿಸಬೇಕು ಎಂದು ಮನವಿ ಪತ್ರದಲ್ಲಿ ವಿವರಿಸಲಾಗಿದೆ.
ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ್ ಮಾತನಾಡಿ, ನಗರೀಕರಣ ಹಾಗೂ ಕೈಗಾರಿಕೀಕರಣಕ್ಕಾಗಿ ಕೃಷಿಯನ್ನು ನೆಚ್ಚಿಕೊಂಡ ಒಕ್ಕಲಿಗರು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ದಕ್ಷಿಣ ಕರ್ನಾಟಕದಲ್ಲಿ ಭೂಮಿ ಕಳೆದುಕೊಳ್ಳುತ್ತಿರುವ ಒಕ್ಕಲಿಗರ ಸಂಖ್ಯೆ ಹೆಚ್ಚುತ್ತಿದೆ. ಈಗಿರುವ 3ಎ ಪ್ರವರ್ಗವು ಶೇಕಡ 20ರಷ್ಟು ಜನಸಂಖ್ಯೆ ಇರುವ ಸಮುದಾಯವನ್ನು ಪ್ರತಿನಿಧಿಸುತ್ತಿದೆ. ಆದರೆ ಇದಕ್ಕೆ ನಿಗದಿಗಾಗಿರುವುದು ಶೇಕಡ 4ರಷ್ಟು ಮೀಸಲಾತಿ ಮಾತ್ರ. ಇದರಲ್ಲಿ ಒಕ್ಕಲಿಗರಿಗೆ ಸಿಗುತ್ತಿರುವುದು ಶೇಕಡ 3ರಷ್ಟು ಮಾತ್ರ ಎಂಬ ಬಗ್ಗೆ ಗಮನ ಸೆಳೆದರು.
ಒಕ್ಕಲಿಗ ಸಮುದಾಯದ ಉಪಜಾತಿಗಳಾದ ಬಂಟರು, ರೆಡ್ಡಿಗಳು ಮತ್ತು ಕೊಂಚಟ್ಟಿಗರನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿಲ್ಲ. ಇದರಿಂದ ಈ ಸಮುದಾಯಗಳಿಗೆ ಅನ್ಯಾಯವಾಗಿದೆ. ತಕ್ಷಣವೇ ಇದನ್ನು ಸರಿಪಡಿಸಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ಒತ್ತಾಯಿಸಿದರು.
ಸಚಿವ ಗೋಪಾಲಯ್ಯ ಮಾತನಾಡಿ, ಒಕ್ಕಲಿಗ ಸಮುದಾಯವು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ. ಹೀಗಾಗಿ ಸಮುದಾಯಕ್ಕೆ ಆರ್ಥಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿ ಹೆಚ್ಚಿನ ಪ್ರಮಾಣದಲ್ಲಿ ಸಿಗಬೇಕು ಎಂದರು.
ಸಚಿವರಾದ ಅರಗ ಜ್ಞಾನೇಂದ್ರ, ಡಾ.ಸುಧಾಕರ, ಎಸ್ ಟಿ ಸೋಮಶೇಖರ್, ನಾರಾಯಣಗೌಡ, ಶಾಸಕರಾದ ಕೃಷ್ಣಪ್ಪ, ಕೆ.ಜೆ.ಭೋಪಯ್ಯ, ಸುಕುಮಾರ ಶೆಟ್ಟಿ, ಡಾ.ರಾಜೇಶ ಗೌಡ, ಮಸಾಲೆ ಜಯರಾಂ, ರಾಜೇಶ ನಾಯ್ಕ, ತುಳಸಿ ಮುನಿರಾಜು, ಸತೀಶ ರೆಡ್ಡಿ, ಪ್ರಾಣೇಶ್, ವೈ.ಎ. ನಾರಾಯಣಸ್ವಾಮಿ, ಸೋಮಶೇಖರ ರೆಡ್ಡಿ, ಸಂಜೀವ ಮಟಂದೂರು, ಎಲ್ ನಾಗೇಂದ್ರ, ಭಾರತಿ ಶೆಟ್ಟಿ, ಅ.ದೇವೇಗೌಡ, ಪುಟ್ಟಣ್ಣ, ಚಿದಾನಂದ ಗೌಡ, ಎಸ್ ಆರ್ ವಿಶ್ವನಾಥ ಮತ್ತಿತರರು ಮನವಿ ಪತ್ರ ನೀಡಿದರು.
ಶಿಕ್ಷಣ ಮತ್ತು ಉದ್ಯೋಗದಲ್ಲಿ ಆಶೋತ್ತರಗಳು ಈಡೇರಬೇಕು
ಒಕ್ಕಲಿಗ ಸಮುದಾಯದ ಜನಸಂಖ್ಯೆ ಹೆಚ್ಚಾಗಿದ್ದು, ಶಿಕ್ಷಣ ಮತ್ತು ಉದ್ಯೋಗದಲ್ಲಿ ಆಶೋತ್ತರಗಳು ಈಡೇರಬೇಕು, ಅವಕಾಶಗಳು ಹೆಚ್ಚಾಗಬೇಕೆಂಬ ಹಿನ್ನೆಲೆಯಲ್ಲಿ ಈಗಿನ ಮೀಸಲಾತಿ ಪ್ರಮಾಣದಲ್ಲಿ ಹೆಚ್ಚಳವಾಗಬೇಕೆಂದು ಒಕ್ಕಲಿಗ ಸಮುದಾಯದ ಎಲ್ಲಾ ಶಾಸಕ ಮಿತ್ರರು ಬೇಡಿಕೆ ಸಲ್ಲಿಸಿದ್ದಾರೆ. ಅದೇ ಸಮುದಾಯಕ್ಕೆ ಹೊಂದಿಕೊಂಡಿರುವ ರೆಡ್ಡಿ, ಬಂಟ ಸೇರಿದಂತೆ ಎಲ್ಲಾ ಸಮುದಾಯದ ಮೀಸಲಾತಿ ಅಗತ್ಯ. ಕುಂಚಿಟಿಗ ಸಮುದಾಯದ್ದು ಕೇಂದ್ರದ ಪಟ್ಟಿಯಲ್ಲಿ ಇಲ್ಲ. ಹೀಗಾಗಿ ಸಮುದಾಯವನ್ನು ಕೇಂದ್ರದ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕು ಎಂದು ಅವರು ಪ್ರತ್ಯೇಕ ಮನವಿ ಸಲ್ಲಿಸಿದ್ದಾರೆ.
ಈ ಹಿಂದೆಯೇ ಡಾ. ನಿರ್ಮಲಾನಂದನಾಥ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ನಡೆಸಿ ಮನವಿಯನ್ನು ಕೊಟ್ಟಿದ್ದರು. ಆ ಮನವಿಯನ್ನು ಈಗಾಗಲೇ ಹಿಂದುಳಿದ ವರ್ಗಗಳ ಆಯೋಗಕ್ಕೆ ಕಳುಹಿಸಲಾಗಿದೆ. ಅದರ ಪರಿಷ್ಕರಣೆ ಕೂಡ ಆಗುತ್ತಿದೆ. ಸಂವಿಧಾನದತ್ತವಾದ ಹಿಂದುಳಿದ ವರ್ಗಗಳ ಆಯೋಗ ಶಿಫಾರಸ್ಸು ಅಗತ್ಯವಿದೆ. ಹೀಗಾಗಿ ಕಳೆದ ನವೆಂಬರ್ 29ನೇ ತಾರೀಖಿನಂದೇ ಕಳುಹಿಸಲಾಗಿದೆ. ಇದರ ಅಂಶಗಳನ್ನು ಪರಿಶೀಲಿಸಿ ವರದಿಯನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ. ಈಗಿನ ಮನವಿಯನ್ನೂ ಆಯೋಗಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ | Yatnal Vs Ashok | ಅಶೋಕ್ 50 ಸೀಟ್ ಗೆಲ್ಲಿಸಿಕೊಂಡು ಬರಲಿ, ಆಮೇಲೆ ಮೀಸಲಾತಿ ಕೊಡೋಣ ಎಂದ ಯತ್ನಾಳ್!