ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನೂರ ಸರ್ಕಾರಿ ಶಾಲೆಯಲ್ಲಿ, ಶಾಲಾ ಕಟ್ಟಡ ದುರಸ್ತಿ ಬಗ್ಗೆ ಪ್ರಶ್ನಿಸಿದ್ದವರ ವಿರುದ್ಧವೇ FIR ದಾಖಲಾಗಿದೆ. ಶಾಲಾ ಕಟ್ಟಡ ದುರಸ್ತಿ ಕಾರ್ಯ ಬಗ್ಗೆ ಪ್ರಶ್ನಿಸುವುದೇ ತಪ್ಪಾ? ಎನ್ನುವ ಪ್ರಶ್ನೆ ಹುಟ್ಟಿದೆ.
ಮುದೇನೂರು ಸರ್ಕಾರಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ, ಸದಸ್ಯನ ವಿರುದ್ಧ ಶಾಲೆಯ ದುರಸ್ತಿ ಬಗ್ಗೆ ಬಿಇಒ ರಾಮದುರ್ಗ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿದ್ದಾರೆ. ಬಿಇಒಗೆ ಅವಾಚ್ಯವಾಗಿ ಬೈಯ್ದು ಕೈಹಿಡಿದು ಎಳೆದಾಡಿ ಜೀವಬೆದರಿಕೆ ಒಡ್ಡಿದ್ದಾರೆ ಎಂದು ಬಿಇಒ ಮಲ್ಲಿಕಾರ್ಜುನ ಅಲಸೆ ನೀಡಿದ ದೂರಿನ ಆಧಾರದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಮುತ್ತಣ್ಣ ಕಂಬಾರ, ಸದಸ್ಯ ನೀಲಪ್ಪ ಪೂಜಾರ್ ವಿರುದ್ಧ FIR ದಾಖಲು ಮಾಡಲಾಗಿದೆ.
ಐಪಿಸಿ ಸೆಕ್ಷನ್ 1860(U/s – 341, 353, 504, 506, 34)ರಡಿ ಕೇಸ್ ದಾಖಲಾಗಿದೆ. ಮುದೇನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಮಳೆಯಿಂದ ಶಿಥಿಲಾವಸ್ಥೆ ತಲುಪಿದ್ದು, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಊರಿನ ಗ್ರಾಮಸ್ಥರು ಶಾಲಾ ಆವರಣದಲ್ಲಿ ಸೀರೆ ಟೆಂಟ್‌ಗಳನ್ನು ನಿರ್ಮಿಸಿದ್ದಾರೆ.
ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ರಾಮದುರ್ಗ ಬಿಇಒ ಮಲ್ಲಿಕಾರ್ಜುನ ಅಲಸೆ, ಮಾಧ್ಯಮಗಳ ಕ್ಯಾಮರಾ ಕಂಡು ಸ್ಥಳದಿಂದ ತೆರಳಲು ಯತ್ನಿಸಿದ್ದರು. ಈ ವೇಳೆ ಬಿಇಒ ಕಾರು ತಡೆದು ಮಕ್ಕಳು, ಪಾಲಕರು, ಆಕ್ರೋಶ ವ್ಯಕ್ತಪಡಿಸಿದ್ದರು.
ಬಳಿಕ ಶಾಲಾ ಕಟ್ಟಡ ಎದುರು ಕರೆತಂದು, ಶಿಥಿಲಾವಸ್ಥೆ ತಲುಪಿದ ಕೊಠಡಿಗಳನ್ನು ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಪಾಲಕರು ತೋರಿಸಿದ್ದದ್ದರು. ಶಾಲಾ ಕಟ್ಟಡ ಮೈನರ್ ರಿಪೇರಿ ಕಾರ್ಯ ಇದೆ ಎಂದು ಬಿಇಒ ಮಲ್ಲಿಕಾರ್ಜುನ ಅಲಸೆ ತಿಳಿಸಿದ್ದರು. ಇದಕ್ಕೆ ನೀಲಪ್ಪ ಪೂಜಾರ್ ಆಕ್ರೋಶ ವ್ಯಕ್ತಪಡಿಸಿ, ಬಿಇಒ ಕೈ ಹಿಡಿದು, ಶಾಲಾ ಕೊಠಡಿಯ ಮೇಲ್ಛಾವಣಿ ಕುಸಿದದ್ದನ್ನು ತೋರಿಸಿದ್ದರು. ಬಳಿಕ ಆ ಸ್ಥಳದಿಂದ ತೆರಳಿದ್ದ ಬಿಇಒ ಮಲ್ಲಿಕಾರ್ಜುನ ಅಲಸೆ, ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ| ರಾಜ್ಯದೆಲ್ಲೆಡೆ ಧಾರಾಕಾರ ಮಳೆ: ಮನೆಗೆ ನುಗ್ಗಿದ ನೀರು, ಶಾಲೆ ಗೋಡೆ ಕುಸಿತ, ತುಂಬಿದ ಜಲಾಶಯ