Site icon Vistara News

Congress Politics : ಒಗ್ಗಟ್ಟು ಪ್ರದರ್ಶಿಸಿದ ಜಾರಕಿಹೊಳಿ, ಹೆಬ್ಬಾಳ್ಕರ್;‌ ಒಂದೇ ವಿಮಾನದಲ್ಲಿ ಪಯಣ

satish Jarakiholi and Lakshmi hebbalkar at Belagavi airport

ಬೆಳಗಾವಿ: ಪರಸ್ಪರ ವೈಮನಸ್ಸಿದೆ, ಭಿನ್ನಾಭಿಪ್ರಾಯವಿದೆ ಎಂದೇ ಸುದ್ದಿಯಲ್ಲಿರುವ ಬೆಳಗಾವಿ ಕಾಂಗ್ರೆಸ್‌ (Congress Politics) ನಾಯಕರಾದ ಸತೀಶ್‌ ಜಾರಕಿಹೊಳಿ (Satish Jarakiholi) ಮತ್ತು ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಅವರು ಒಂದೇ ವಿಮಾನದಲ್ಲಿ ಪ್ರಯಾಣಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಅವರು ಬೆಂಗಳೂರಿನಿಂದ ಬೆಳಗಾವಿಗೆ ಒಂದೇ ವಿಮಾನದಲ್ಲಿ ಪ್ರಯಾಣ (Bangalore-Belagavi flight) ಮಾಡಿದರು. ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರಿಬ್ಬರೂ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟಪಡಿಸಿದರು. ಮೈಸೂರಿಗೆ ಟೂರ್‌ ಹೋಗುವ ಬೆಳಗಾವಿ ಶಾಸಕರ ಪಟ್ಟಿಯಲ್ಲಿ ನನ್ನ ಹೆಸರೂ ಇತ್ತು ಎಂದು ಹೇಳುವ ಮೂಲಕ ತಮ್ಮ ಬಂಧ ಬಿಗಿಯಾಗಿದೆ ಎಂಬ ಸಂದೇಶ ರವಾನಿಸಲು ಯತ್ನಿಸಿದರು ಲಕ್ಷ್ಮೀ ಹೆಬ್ಬಾಳ್ಕರ್.‌

ಲಕ್ಷ್ಮೀ ಹೆಬ್ಬಾಳ್ಕರ್‌, ಡಿಕೆಶಿ ಜತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದ ಸತೀಶ್‌

ಲಕ್ಷ್ಮೀ ಹೆಬ್ಬಾಳಕರ್ ಮತ್ತು ನನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಡಿ.ಕೆ. ಶಿವಕುಮಾರ್‌ ಅವರ ಜತೆಗೂ ನನಗೆ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು ಸತೀಶ್‌ ಜಾರಕಿಹೊಳಿ.

ಮೇಲ್ಮನೆ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ ಸಹೋದರ ಚನ್ನರಾಜ್‌ ಹಟ್ಟಿಹೊಳಿ ಮತ್ತು ನನ್ನ ತಮ್ಮ ಲಖನ್‌ ಜಾರಕಿಹೊಳಿ ಇದ್ದರು. ನಾನು ಲಖನ್‌ ಅವರನ್ನೇ ವಿರೋಧ ಮಾಡಿ ಹೆಚ್ಚಿನ ಅಂತರಲ್ಲಿ ಚನ್ನರಾಜ್ ಅವರನ್ನು ಗೆಲ್ಲಿಸಿಲ್ಲವೇ ಎಂದು ಅವರು ಪ್ರಶ್ನಿಸಿದರು.

ಸರ್ಕಾರದಲ್ಲಿ ಎಲ್ಲವೂ ನಾವು ಹೇಳಿದ್ದು ಆಗಬೇಕು ಅಂತೇನಿಲ್ಲ. ಒಂದೊಂದು ಸಲ ಫೇಲ್ ಆಗುತ್ತದೆ. ನಾಯಕರಾದವರು ಎಲ್ಲರ ಮಾತೂ ಕೇಳಬೇಕಾಗುತ್ತದೆ ಎಂದು ಸತೀಶ್‌ ಜಾರಕಿಹೊಳಿ ಹೇಳಿದರು.

ನನ್ನನ್ನೂ ಮೈಸೂರಿಗೆ ಕರೆದಿದ್ದರು ಎಂದ ಲಕ್ಷ್ಮೀ ಹೆಬ್ಬಾಳ್ಕರ್‌

ನಾನು ಮತ್ತು ಸತೀಶ್‌ ಜಾರಕಿಹೊಳಿ ಅವರು ಬಹಳಷ್ಟು ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದೇವೆ. ನನ್ನ ಮತ್ತು ಅವರ ನಡುವೆ ಯಾವುದೇ ಸಮಸ್ಯೆ ಇಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದರು.

ಮೈಸೂರು ಪ್ರವಾಸಕ್ಕೆ ಹೋಗುವುದಕ್ಕೆ ಸತೀಶ್ ಜಾರಕಿಹೊಳಿ ಅವರು ನನ್ನನ್ನೂ ಕರೆದಿದ್ದರು. ನನ್ನ ಟಿಕೆಟ್ ಕೂಡ ಬುಕ್ ಮಾಡಿದ್ದರು. ಬೆಳಗಾವಿ ಜಿಲ್ಲೆಯ ಎಲ್ಲ ಶಾಸಕರು ಮೈಸೂರು ಹೋಗಲು ಪ್ಲ್ಯಾನ್ ಮಾಡಿದ್ದರು. ಅದರೆ, ನನಗೆ ಸಕ್ಕರೆ ಕಾರ್ಖಾನೆ ಬಾಯ್ಲರ್ ಪೂಜೆ ಇದ್ದಿದ್ದರಿಂದ ಬರಲಾಗುವುದಿಲ್ಲ ಎಂದು ಹೇಳಿದ್ದೆ ಎಂದು ಲಕ್ಷ್ಮೀ ಹೇಳಿದರು.

ಬೆಳಗಾವಿ ಶಾಸಕರ ಮೈಸೂರು ಪ್ರವಾಸವನ್ನು ಹೈಕಮಾಂಡ್ ಯಾಕೆ ತಡೆಯಿತು ಎನ್ನುವ ಬಗ್ಗೆ ಸತೀಶ್ ಜಾರಕಿಹೊಳಿ ಅವರಿಗೆ ಕೇಳಿ. ನೆಕ್ಸ್ಟ್ ಎಪಿಸೋಡ್ ಸತೀಶ್ ಅವರನ್ನೇ ಕೇಳಿ ಎಂದರು ಹೆಬ್ಬಾಳ್ಕರ್.

ನಮ್ಮಲ್ಲಿ ಸಣ್ಣ ಸಮಸ್ಯೆಯೂ ಇಲ್ಲ ಎಂದ ಲಕ್ಷ್ಮೀ ಹೆಬ್ಬಾಳ್ಕರ್‌

ಡಿಸಿಎಂ ಡಿಕೆ ಶಿವಕುಮಾರ್‌ ಅವರು ಜಿಲ್ಲೆಗೆ ಬರುವ ವಿಚಾರದಲ್ಲಿ ಗೊಂದಲ ಇತ್ತು. ಬರುತ್ತಾರಾ ಇಲ್ಲವೇ ಎನ್ನುವ ಸ್ಪಷ್ಟತೆ ಇರಲಿಲ್ಲ. ಆದರೂ ಯಾರಾದರೂ ಬಂದು ಸ್ವಾಗತ ಮಾಡಬೇಕಿತ್ತು ಎಂದರು ಲಕ್ಷ್ಮೀ ಹೆಬ್ಬಾಳ್ಕರ್‌. ಉಳಿದಂತೆ ಬೆಳಗಾವಿ ಕಾಂಗ್ರೆಸ್‌ನಲ್ಲಿ ಸಣ್ಣ ಗೊಂದಲವೂ ಇಲ್ಲ ಎಂದರು.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸತೀಶ್‌ ಜಾರಕಿಹೊಳಿ ಹೇಳಿದ್ದು ಇಷ್ಟು

ಸಮಾನ ಮನಸ್ಕರ ಗುಂಪು ಯಾವತ್ತೂ ಇದ್ದೇ ಇರುತ್ತದೆ

ʻʻನಾವು ಸ್ಟ್ರಾಂಗೂ ಇರಲ್ಲ. ವೀಕ್ ಇರಲ್ಲ. ಪಕ್ಷ ಅಧಿಕಾರಕ್ಕೆ ಬರೋಕೆ ನನ್ನ ಜತೆ ಸಾವಿರಾರು ಲಕ್ಷಾಂತರ ಕಾರ್ಯಕರ್ತರ ಪಾತ್ರ ಇದೆʼʼ ಎಂದು ಲೋಕೋಪಯೋಗಿ ಖಾತೆ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ʻʻನಾವು ಪ್ರವಾಸ ಹೋಗೋದರ ಹಿಂದೆ ಇನ್ನೊಂದು ಪವರ್ ಸೆಂಟರ್ ಮಾಡುವ ಉದ್ದೇಶ ಇಲ್ಲ. ಸಮಾನ ಮನಸ್ಕರ ತಂಡ ಇದ್ದೇ ಇರುತ್ತದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ಬಣ ಆಗಲಿ, ಬೇರೆ ಗುಂಪು ಮಾಡಬೇಕು ಅನ್ನೋದು ನಮ್ಮ ಉದ್ದೇಶವಲ್ಲ. ನಾವೆಲ್ಲ ಕೂಡಿಕೊಂಡೇ ಇದ್ದೇವೆ. ಕಾಂಗ್ರೆಸ್ ಪಕ್ಷದ ಒಳಗೆ ಇರುವ ಗುಟ್ಟದು. ಪಕ್ಷದಲ್ಲಿ ಯಾವ ಗೊಂದಲವೂ ಇಲ್ಲʼʼ ಎಂದು ಸತೀಶ್‌ ಜಾರಕಿಹೊಳಿ ಹೇಳಿದರು.

ನಮ್ಮಲ್ಲಿ ಬಣಗಳಿದ್ದರೂ ಚುನಾವಣೆ ಬಂದಾಗ ಒಂದಾಗುತ್ತೇವೆ

ನಮ್ಮಲ್ಲಿ ಏನೇ ಸಮಸ್ಯೆ ಆದರೂ ಸಿಎಂ ಇದ್ದಾರೆ, ಅಧ್ಯಕ್ಷರಿದ್ದಾರೆ. ಅವರ ಗಮನಕ್ಕೆ ತರುತ್ತೇವೆ. ಜೆಡಿಎಸ್‌ನಲ್ಲಿ ಕುಮಾರಸ್ವಾಮಿ ಮತ್ತು ಇಬ್ರಾಹಿಂ ಅವರ ಎರಡು ಬಣಗಳಿವೆ. ಬಿಜೆಪಿಯಲ್ಲಿ ಮೂರು ಗುಂಪು ಇದೆ. ನಮ್ಮಲ್ಲಿ ಸ್ವಾಭಾವಿಕವಾಗಿ ಗುಂಪಿದೆ, ಗುಂಪು ಇಲ್ಲ ಅಂತೇನಿಲ್ಲ. ಏನೇ ಇದ್ದರೂ ಪಕ್ಷದ ವಿಚಾರ ಬಂದಾಗ ನಾವೆಲ್ಲಾ ಒಂದಾಗುತ್ತೇವೆ. ಜಿಲ್ಲೆಯಲ್ಲಿ ಬೇರೆ ಬೇರೆ ಇದ್ರೂ ಚುನಾವಣೆ ಬಂದಾಗ ಒಂದಾಗುತ್ತೇವೆ ಎಂದು ಹೇಳಿದರು ಸತೀಶ್‌ ಜಾರಕಿಹೊಳಿ.

ಬೇರೆ ಪಕ್ಷದವರೂ ಊಟಕ್ಕೆ ಬರ್ತಾರೆ ಅಂದ ಸತೀಶ್‌ ಜಾರಕಿಹೊಳಿ

ಸತೀಶ್‌ ಜಾರಕಿಹೊಳಿ ಮನೆಯಲ್ಲಿ ನಡೆದ ಬೆಳಗ್ಗಿನ ಉಪಾಹಾರಕ್ಕೆ ಶಾಸಕರು ಬಂದಿದ್ದು ದೊಡ್ಡ ಸುದ್ದಿಯಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಬೆಳಗಾವಿ ಅಧಿವೇಶನಕ್ಕೆ ಬಂದಾಗ ಬೇರೆ ಪಕ್ಷದ ಶಾಸಕರೂ ಊಟಕ್ಕೆ ಬರುತ್ತಾರೆ. ಅದೂ ಸಹ ಬೇರೆ ಬೇರೆ ರೀತಿ ಚರ್ಚೆ ಆಗುತ್ತದೆ. ಅಧಿವೇಶನಕ್ಕೆ ಬಂದಾಗ ಶಾಸಕರು ಗೋವಾ, ಕೊಲ್ಹಾಪುರ ಸೇರಿದಂತೆ ಬೇರೆ ಕಡೆ ಪ್ರವಾಸ ಹೋಗ್ತಾರೆ. ಅದರಲ್ಲಿ ವಿಶೇಷವೇನೂ ಇಲ್ಲ ಎಂದರು. ಆದರೆ, ಪಕ್ಷ ಅಂತ ಬಂದಾಗ ಎಲ್ಲರೂ ಒಂದೇ ಧ್ವನಿಯಲ್ಲಿ ಮಾತನಾಡುವುದು ನಮ್ಮ ನಿಲುವು ಎಂದರು.

ಡಿ.ಕೆ ಶಿವಕುಮಾರ್‌ ಬಂದಾಗ ಯಾರೂ ಇರಲಿಲ್ಲ ಯಾಕೆ?

ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಬೆಳಗಾವಿಗೆ ಬಂದಾಗ ಅವರನ್ನು ಸ್ವಾಗತಿಸಲು ಯಾರೂ ಇರಲಿಲ್ಲ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಧ್ಯಕ್ಷರು ಕೊನೆಯ ಘಳಿಗೆಯಲ್ಲಿ ಕಾರ್ಯಕ್ರಮ ಫಿಕ್ಸ್‌ ಮಾಡಿಕೊಂಡು ಬಂದರು. ನಾವು ಬೇರೆ ಬೇರೆ ಕಾರಣಗಳಿಂದ ಬೇರೆಡೆ ಇದ್ದೆವು. ಲಕ್ಷ್ಮೀ ಹೆಬ್ಬಾಳಕರ್ ಬಂದಿರಲಿಲ್ಲ, ಚನ್ನರಾಜ್ ಹಟ್ಟಿಹೊಳಿ ಬಂದಿರಲಿಲ್ಲ, ಲಕ್ಷ್ಮಣ ಸವದಿ ಸಹ ಬಂದಿರಲಿಲ್ಲ ಎಂದರು.

ಕಾರ್ಯಾಧ್ಯಕ್ಷರ ಬದಲಾವಣೆಗೆ ನಾನೇ ಸಲಹೆ ಕೊಟ್ಟಿದ್ದೇನೆ ಎಂದ ಸತೀಶ್‌

ಕೆಪಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಬೇರೆಯವರನ್ನು ನೇಮಕ ಮಾಡುವ ವಿಚಾರದ ಚರ್ಚೆಯ ಬಗ್ಗೆ ವಿಚಾರಿಸಿದಾಗ, ನಾನೇ ಮೊದಲು ಬೇರೆಯವರನ್ನು‌ ಮಾಡಿ ಎಂದು ಹೇಳಿದ್ದೆ. ಕಾರ್ಯಾಧ್ಯಕ್ಷನಾದರೆ ಓಡಾಡಬೇಕು, ಕೆಲಸ ಮಾಡಬೇಕು. ಹಾಗಾಗಿ ಓಡಾಡುವವರನ್ನು ಮಾಡಿ ಎಂದು ಹೇಳಿದ್ದೇನೆ ಎಂದರು.

ಇದನ್ನೂ ಓದಿ: Lakshmi Hebbalkar : ಸತೀಶಣ್ಣನ ಜತೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದ ಲಕ್ಷ್ಮೀ ಹೆಬ್ಬಾಳ್ಕರ್

ಸತೀಶ ಜಾರಕಿಹೊಳಿಯವರ ಮೌನ ಮಿಸ್ ಯೂಸ್ ಆಗ್ತಿದೆಯೇ ಎಂದು ಕೇಳಿದಾಗ, ಹಾನೇನಿಲ್ಲ ವರ್ಗಾವಣೆ ಅದೊಂದು ದೊಡ್ಡ ವಿಚಾರವಲ್ಲ, ಜಿಲ್ಲೆಯಲ್ಲಿ ಯಾವ ಅಧಿಕಾರಿಗಳಿದ್ದರೂ ಸಹ ಕೆಲಸ ಮಾಡುತ್ತೇವೆ. ಯಾರೇ ಇದ್ದರೂ ಸರ್ಕಾರದ ಪರವಾಗಿ ಕೆಲಸ‌ ಮಾಡುತ್ತೇವೆ ಎಂದರು. ಇಲ್ಲಿ ಯಾರೂ ತಲೆ ಹಾಕಿಲ್ಲ, ಯಾರೂ ಸಹ ಡಿಸ್ಟರ್ಬ್ ಮಾಡಿಲ್ಲ ಎಂದು ಹೇಳಿದರು.

ರಾಜ್ಯದ ಕಾಂಗ್ರೆಸ್‌ ಸರ್ಕಾರಕ್ಕೆ ಏನೂ ಆಗೊಲ್ಲ. ವಿಮಾನ ಟೇಕ್‌ ಆಫ್‌ ಆದಾಗ ಸ್ವಲ್ಪ ಮೇಲೆ ಕೆಳಗೆ ಆಗುತ್ತದೆ. ಆದರೆ ಬಳಿಕ ಸರಿಯಾಗಿ ಓಡುತ್ತೆ ಎಂದು ವಿವರಣೆ ನೀಡಿದರು.

Exit mobile version