ಬೆಳಗಾವಿ: ಮುದೇನೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 94 ಜನರು ಅಸ್ವಸ್ಥರಾಗಿದ್ದು, ಒಬ್ಬರು ವೃದ್ಧರು ಮೃತಪಟ್ಟಿದ್ದಾರೆ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುದೇನೂರ ಗ್ರಾಮದಲ್ಲಿ ಘಟನೆ ನಡೆದಿದೆ. ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಒಬ್ಬರು ವೃದ್ಧರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದು, 94 ಜನರು ಅಸ್ವಸ್ಥಗೊಂಡಿದ್ದಾರೆ. ಇವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಬಾಗಲಕೋಟ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಮುದೇನೂರು ಗ್ರಾಮದ ನಿವಾಸಿ 70 ವರ್ಷದ ಶಿವಪ್ಪ ಸಾವನ್ನಪ್ಪಿದ್ದ ವ್ಯಕ್ತಿ. ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಶಿವಪ್ಪರನ್ನು ರಾಮದುರ್ಗ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ | Contaminated water | ಮುದೇನೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಮುದೇನೂರು ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆಯ ಪೈಪ್ ಒಡೆದು ಈ ಅವಘಡಕ್ಕೆ ಕಾರಣವಾಗಿದೆ. ಕಳೆದ 4 ದಿನಗಳ ಅಂತರದಲ್ಲಿ ಹಂತ ಹಂತವಾಗಿ ಒಟ್ಟು 94 ಜನ ಅಸ್ವಸ್ಥಗೊಂಡಿದ್ದಾರೆ. ಕುಡಿಯುವ ನೀರು ಪೂರೈಕೆಯ ಪೈಪ್ ಅಲ್ಲಲ್ಲಿ ಒಡೆದು ಚರಂಡಿಯ ನೀರು ಅದಕ್ಕೆ ಸೇರ್ಪಡೆಯಾಗುತ್ತಿತ್ತು. ಇದನ್ನು ಕುಡಿದ ಮುದೇನೂರು ಗ್ರಾಮದ ಬಸವಣ್ಣ ದೇವರ ಗುಡಿ ಓಣಿ, ಲಕ್ಕಮ್ಮದೇವಿ ಗುಡಿ ಓಣಿ, ಬೀರದೇವರ ಗುಡಿ ಓಣಿಯ 94 ನಿವಾಸಿಗಳು ಅಸ್ವಸ್ಥರಾಗಿದ್ದರು. 44 ಪುರುಷರು, 30 ಮಹಿಳೆಯರು, 12 ಬಾಲಕರು, 8 ಬಾಲಕಿಯರು ವಾಂತಿ ಭೇದಿ ಸಮಸ್ಯೆಯಿಂದ ಬಳಲುತ್ತಿದ್ದು, ಇವರಿಗೆ ಬಟಕುರ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರ, ರಾಮದುರ್ಗ ತಾಲೂಕು ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ.
ನಿನ್ನೆ ರಾಮದುರ್ಗ ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ ಮುದೇನೂರು ಗ್ರಾಮಕ್ಕೆ ಭೇಟಿ ನೀಡಿ ಅಸ್ವಸ್ಥಗೊಂಡ ಜನರಿಗೆ ಸೂಕ್ತ ವೈದ್ಯಕೀಯ ವ್ಯವಸ್ಥೆ ಕಲ್ಪಿಸುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಇದನ್ನೂ ಓದಿ | Contaminated water | ಕಲುಷಿತ ನೀರು ಸೇವಿಸಿ ಶಹಾಪುರದಲ್ಲಿ ಮತ್ತೊಬ್ಬರ ಸಾವು: ಮೃತರ ಸಂಖ್ಯೆ 3ಕ್ಕೆ ಏರಿಕೆ