ಬೆಳಗಾವಿ: ಟೆಲಿಗ್ರಾಂ ಆಪ್ (Telegram app) ಮೂಲಕ ಸೈಬರ್ ವಂಚನೆ (Cyber Crime) ಪ್ರಕರಣ ಜಾಲವೊಂದನ್ನು ಬೆಳಗಾವಿ ಸಿಇಎನ್ ಪೊಲೀಸರು ಭೇದಿಸಿದ್ದಾರೆ. ಟೆಲಿಗ್ರಾಂ ಆಪ್ ಮೂಲಕ ಚಾಟಿಂಗ್ ಬೆಳೆಸಿ ಲಕ್ಷ ಲಕ್ಷ ವಂಚಿಸಿದ, ಹಣವನ್ನು ಡಬಲ್ ಮಾಡುವುದಾಗಿ ಮೋಸ ಮಾಡಿದ್ದ ಖದೀಮರ ಜಾಲ ಬೆಳಕಿಗೆ ಬಂದಿದೆ.
ಪ್ರತ್ಯೇಕ ಎರಡು ಪ್ರಕರಣಗಳಲ್ಲಿ 46 ಲಕ್ಷ 15 ಸಾವಿರ 906 ರೂಪಾಯಿ ವಂಚಿಸಲಾಗಿದೆ. ಒಬ್ಬರು ಬ್ಯಾಂಕ್ ಉದ್ಯಮಿ ಮತ್ತೊಬ್ಬರು ವೈದ್ಯವೃತ್ತಿ ಮಾಡುವ ಮಹಿಳೆ ವಂಚನೆಗೊಳಗಾಗಿದ್ದಾರೆ.
ಈ ಜಾಲದ ಕಾರ್ಯವೈಖರಿ ಹೀಗಿದೆ: ಮೊದಲಿಗೆ ಟೆಲಿಗ್ರಾಂ ಆಪ್‌ನಲ್ಲಿ ಅನ್‌ನೋನ್ ನಂಬರಿನಿಂದ ಮೆಸೇಜ್ ಬರುತ್ತದೆ. ಆನ್‌ಲೈನ್ ಕೆಲಸ ಕೊಡಿಸುವುದಾಗಿ ನಂಬಿಸಿ ಚಾಟಿಂಗ್ ಮಾಡುತ್ತಾರೆ. ದಿನಕ್ಕೊಂದರಂತೆ ಬೇರೆ ಬೇರೆ ಟಾಸ್ಕ್ ನೀಡಿ ಹಾಕಿದ ಹಣಕ್ಕೆ ಡಬಲ್ ಹಣ ನೀಡುವ ಆಮಿಷ ಒಡ್ಡುತ್ತಾರೆ. ಹೀಗೆ ಮೊದಲ ಎರಡು ಮೂರು ಬಾರಿ ಹಾಕಿದ ಹಣಕ್ಕೆ ಡಬಲ್ ಹಣ ನೀಡುತ್ತಾರೆ ಕೂಡ. ನಂತರ ಇನ್ನಷ್ಟು ಇನ್‌ವೆಸ್ಟ್‌ಮೆಂಟ್ ಮಾಡಿದರೆ ಒಳ್ಳೆಯ ಹಣ ಬರುತ್ತದೆ ಎಂದು ಖದೀಮರು ನಂಬಿಸುತ್ತಾರೆ.
ಹೀಗೆ ನಂಬಿಸಿ ಒಬ್ಬ ಮಹಿಳೆಯಿಂದ 27 ಲಕ್ಷ, ಮತ್ತೊಬ್ಬ ಮಹಿಳೆಯಿಂದ 18 ಲಕ್ಷ ಲಪಟಾಯಿಸಿದ್ದಾರೆ. ಸುಮಾರು 21 ಬ್ಯಾಂಕ್ ಅಕೌಂಟ್‌ಳಿಗೆ ಇಬ್ಬರು ಮಹಿಳೆಯರು ಹಣ ಹಾಕಿದ್ದರು. ನಂತರ ಮೋಸ ಹೋದದ್ದು ತಿಳಿದು ಈ ಬಗ್ಗೆ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದರು. ಸಿಇಎನ್ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಆರ್.ಗಡೇಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಖದೀಮರ 21 ಅಕೌಂಟ್ ಫ್ರೀಜ್ ಮಾಡಿ ಎಲ್ಲ ಹಣ ಮಹಿಳೆಯರಿಗೆ ವಾಪಸ್ ಕೊಡಿಸಿದ್ದಾರೆ. ಈ 21 ಬ್ಯಾಂಕ್ ಅಕೌಂಟ್‌ನಲ್ಲಿ ಇನ್ನೂ 71 ಲಕ್ಷ ರೂ. ಹಣವಿದ್ದು ಅದರ ಮೂಲವನ್ನು ಪೊಲೀಸರು ಕೆದಕುತ್ತಿದ್ದಾರೆ. ಬೆಳಗಾವಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: Cyber Crime : ಎಚ್‌ಡಿ ಕುಮಾರಸ್ವಾಮಿ ಬಳಿಕ ಈಗ ರಾಜ್ಯಪಾಲರ ಮೇಲೆ ಸೈಬರ್ ವಂಚಕರ ಕಣ್ಣು!