Site icon Vistara News

DK Shivakumar : ನನ್ನನ್ನು ಜೈಲಿಗೆ ಕಳುಹಿಸಲು ಕಟೀಲ್‌, ಕುಮಾರಸ್ವಾಮಿ ಜಡ್ಜಾ?; ಡಿಕೆಶಿ ಕೆಂಡ

DK Shivakumar on Nalin and HD Kumaraswamy

ಬೆಳಗಾವಿ: “ನನ್ನನ್ನು ಜೈಲಿಗೆ ಕಳುಹಿಸಲು ನಳಿನ್ ಕುಮಾರ್ ಕಟೀಲ್ (Nalin kumar kateel) ಆಗಲಿ, ಕುಮಾರಸ್ವಾಮಿ (HD Kumaraswamy) ಅವರಾಗಲಿ ನ್ಯಾಯಾಧೀಶರಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ. “ಶಿವಕುಮಾರ್ ಅವರು ಎರಡನೇ ಬಾರಿಗೆ ತಿಹಾರ್ ಜೈಲಿಗೆ ಹೋಗಲು ಸಿದ್ಧತೆ ಮಾಡಿಕೊಳ್ಳಲಿ” ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ಹೇಳಿಕೆಗೆ ಅವರು ಬೆಳಗಾವಿಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದರು.

ಶಿವಕುಮಾರ್ ಅವರು ಕೇಡಿಯಂತೆ ವರ್ತಿಸಬಾರದು ಎಂಬ ಸಿ.ಟಿ ರವಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರಿಗೆ ಅವರ ಪಕ್ಷದವರೇ ಲೂಟಿ ರವಿ ಎಂಬ ಹೆಸರು ಕೊಟ್ಟಿದ್ದಾರೆ. ಅವರ ಪಕ್ಷದವರೇ ಏನೆಲ್ಲಾ ಹೇಳಿದ್ದಾರೆ ಎಂಬ ದಾಖಲೆ ನನ್ನ ಬಳಿ ಇದೆ. ಇದಕ್ಕೆ ಸಮಯ ಬಂದಾಗ ಉತ್ತರ ನೀಡುತ್ತೇನೆ” ಎಂದು ತಿಳಿಸಿದರು.

ನೀರಾವರಿ ಇಲಾಖೆಯ ಹುದ್ದೆಗಳು ಖಾಲಿ

“ಬೆಳಗಾವಿಯಲ್ಲಿ ಇಂದು ಈ ಭಾಗದ ವಿವಿಧ ನೀರಾವರಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳ ಸಭೆ ಮಾಡಿ ಚರ್ಚಿಸಿದ್ದೇನೆ. ಈ ಭಾಗದಲ್ಲಿ ಘಟಪ್ರಭ, ಮಾರ್ಕಂಡೇಯ, ಹಿಪ್ಪರಗಿ, ಆಲಮಟ್ಟಿ ಜಲಾಶಯಗಳಲ್ಲಿ ಶೇ. 90ರಷ್ಟು ನೀರು ತುಂಬಿದೆ. ಮಲಪ್ರಭದಲ್ಲಿ ಮಾತ್ರ ಶೇ. 52ರಷ್ಟಿದೆ. ಈ ಭಾಗದಲ್ಲಿ ನೀರಾವರಿ ಇಲಾಖೆಯ ಹುದ್ದೆಗಳ ನೇಮಕಾತಿ ಸಮಸ್ಯೆ ಇದೆ. ಒಟ್ಟು 1322 ಹುದ್ದೆಗಳು ಮಂಜೂರಾಗಿದ್ದು, 671 ಭರ್ತಿಯಾಗಿದ್ದು, 651 ಹುದ್ದೆಗಳು ಖಾಲಿ ಇವೆ. ಬೆಂಗಳೂರಿಗೆ ಹೋದ ಮೇಲೆ ಈ ಹುದ್ದೆಗಳನ್ನು ತುಂಬಲು ಕ್ರಮ ಕೈಗೊಳ್ಳುತ್ತೇನೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಯಾವ ಕಾಮಗಾರಿಗಳನ್ನು ಉಳಿಸಿಕೊಳ್ಳಬೇಕು, ಯಾವ ಅನಗತ್ಯ ಕಾಮಗಾರಿಗಳನ್ನು ಕೈಬಿಡಬೇಕು ಎಂಬುದರ ಬಗ್ಗೆ ಸಭೆ ಮಾಡಿ ತೀರ್ಮಾನಿಸುತ್ತೇವೆ. ನೀರು ಬಳಕೆದಾರರ ಸಂಘದ ಚಟುವಟಿಕೆಗಳು ಸರಿಯಾಗಿ ನಡೆಯುತ್ತಿಲ್ಲ. ಮುಂದಿನ ನೂರು ದಿನಗಳಲ್ಲಿ ಎಲ್ಲಾ ಕಡೆ ನೀರು ಬಳಕೆದಾರರ ಸಂಘ ಸ್ಥಾಪನೆಯಾಗಬೇಕು ಎಂದು ಕಾಡಾ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಈ ಮೂಲಕ ಸೂಚನೆ ನೀಡುತಿದ್ದೇನೆ. ಚಟುವಟಿಕೆ ನಡೆಯದ ಕಡೆ ಮತ್ತೆ ಚುನಾವಣೆ ಮಾಡಿ ಪುನರಾರಂಭಿಸಬೇಕು ಎಂದು ಡಿ.ಕೆ. ಶಿವಕುಮಾರ್‌ ಸೂಚನೆ ನೀಡಿದರು.

ಕಳಸಾ ಬಂಡೂರಿ ಯೋಜನೆಗೂ ಅಗತ್ಯ ಕ್ರಮ

ಕಳಸಾ ಬಂಡೂರಿ ಯೋಜನೆ ಯಾವ ಹಂತದಲ್ಲಿದೆ ಎಂದು ಕೇಳಿದಾಗ, “ಈ ಯೋಜನೆಗೆ ನಾವು ಬದ್ಧರಾಗಿದ್ದೇವೆ. ಕೇಂದ್ರ ಸರ್ಕಾರ ಈ ಯೋಜನೆ ವಿಚಾರವಾಗಿ ರಾಜ್ಯಗಳ ನಡುವೆ ಇರುವ ವ್ಯತ್ಯಾಸವನ್ನು ಸರಿಪಡಿಸಬೇಕು. ಈ ಬಗ್ಗೆ ಸಚಿವರ ಜತೆಯೂ ಚರ್ಚೆ ಮಾಡಿದ್ದೇವೆ. ಕಾವೇರಿ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದ ಕಾರಣ ಈ ವಿಚಾರ ಹಿಂದುಳಿದಿದೆ. ಮೇಕೆದಾಟು ಯೋಜನೆ ಆರಂಭಿಸಲು ಸುಪ್ರೀಂ ಕೋರ್ಟ್ ಮೆಟ್ಟಿಲೇರುವಂತೆ ಕಳಸಾ ಬಂಡೂರಿ ಯೋಜನೆಗೂ ಅಗತ್ಯ ಕ್ರಮ ಕೈಗೊಳ್ಳುತ್ತೇವೆ” ಎಂದು ಡಿ.ಕೆ ಶಿವಕುಮಾರ್‌ ತಿಳಿಸಿದರು.

ಕಳೆದ ಸರ್ಕಾರ ಕಳಸಾ ಬಂಡೂರಿ ಯೋಜನೆಯಲ್ಲಿ ಕುಡಿಯುವ ನೀರಿಗೆ ಅನುಮೋದನೆ ಸಿಕ್ಕಿದೆ ಎಂದು ಹೇಳಿತ್ತು ಎಂದು ಕೇಳಿದಾಗ, “ಅವರು ಕೇವಲ ಸಂಭ್ರಮಾಚರಣೆ ಮಾಡಿದ್ದರು, ಕೆಲಸ ಮಾಡಲಿಲ್ಲ. ಟೆಂಡರ್ ಕರೆದಿದ್ದು, ಕೆಲಸ ಮಾಡಲು ಅವಕಾಶ ನೀಡಿಲ್ಲ” ಎಂದು ತಿಳಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರವಾಗಿ ಕೇಳಿದಾಗ, “ನಾವು ಒಂದು ಕಡೆಯಿಂದ ಎಲ್ಲಾ ಯೋಜನೆಗಳ ಪರಿಶೀಲನೆ ಮಾಡುತ್ತಿದ್ದೇವೆ. ಈ ವಿಚಾರವಾಗಿ ಇದೇ 28ರಂದು ಸಭೆ ಕರೆದಿದ್ದೇವೆ. ಈ ವರ್ಷ ಐದು ಗ್ಯಾರಂಟಿ ನೀಡಿದ್ದು, ನಾವು ಮುಖ್ಯಮಂತ್ರಿಗಳ ಜತೆ ಹಣಕಾಸು ಪರಿಸ್ಥಿತಿ ಕುರಿತಾಗಿ ಚರ್ಚೆ ಮಾಡಿ ಈ ಯೋಜನೆಗೆ ಹಣ ಬಿಡುಗಡೆ ಮಾಡಲು ತೀರ್ಮಾನ ಮಾಡುತ್ತೇವೆ” ಎಂದು ತಿಳಿಸಿದರು.

ಇದನ್ನೂ ಓದಿ : CT Ravi : ನಿಮ್ಮನ್ನು ಡಿಕೆ ಬದಲು ಕೇಡಿ ಅನ್ಬೋದಲ್ವ; ಲೂಟಿ ರವಿ ಕಮೆಂಟ್‌ಗೆ ಸಿ.ಟಿ ರವಿ ತಿರುಗೇಟು

ಕೃಷ್ಣಾ ಯೋಜನೆಯಲ್ಲಿ 20ಕ್ಕೂ ಹೆಚ್ಚು ಹಳ್ಳಿಗಳ ಸ್ಥಳಾಂತರ ವಿಚಾರವಾಗಿ ಕೇಳಿದಾಗ, “ರೈತರ ವಿಚಾರದಲ್ಲಿ ನಾವು ನಮ್ಮ ಬದ್ಧತೆಯಂತೆ ಕೆಲಸ ಮಾಡಬೇಕು. ಭೂಸ್ವಾಧೀನ ವಿಚಾರಕ್ಕೆ ಆದ್ಯತೆ ನೀಡಬೇಕು. ನಾವು ನೀರನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಅನಗತ್ಯವಾಗಿ ವ್ಯರ್ಥ ಮಾಡಬಾರದು. ಈ ಯೋಜನೆಗೆ ಇರುವ ಅಡಚಣೆಗಳ ನಿವಾರಣೆಗೆ ಚರ್ಚೆ ಮಾಡುತ್ತೇವೆ” ಎಂದು ತಿಳಿಸಿದರು.

Exit mobile version