ಬೆಳಗಾವಿ: ಇಲ್ಲಿಯ ಶಾಹು ನಗರದಲ್ಲಿ ಸಂಭವಿಸಿದ ವಿದ್ಯುತ್ ದುರಂತದಲ್ಲಿ (Electric Shock) ಒಂದೇ ಕುಟುಂಬದ ಮೂವರು ಪ್ರಾಣ ಕಳೆದುಕೊಂಡ ಘಟನೆಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹಿರಿಯ ನಾಗರಿಕರು ಮತ್ತು ವಿಕಲಚೇತನರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar) ಕಂಬನಿ ಮಿಡಿದಿದ್ದಾರೆ. ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಿಕರಿಗೆ ಸಾಂತ್ವನ ಹೇಳಿದ ಅವರು ಜೊತೆಗೆ ಸರಕಾರದಿಂದ ತಲಾ 2 ಲಕ್ಷ ರೂ. ಪರಿಹಾರ ಮಂಜೂರು ಮಾಡಿಸಿದರು. ಜೊತೆಗೆ ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದ ಸಹ ಆರ್ಥಿಕ ಸಹಾಯ ಮಾಡಿದರು.
ಇಲ್ಲಿನ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಈರಪ್ಪ ಲಮಾಣಿ, ಅವರ ಪತ್ನಿ ಶಾಂತವ್ವ ಮತ್ತು ಮೊಮ್ಮಗಳು ಅನ್ನಪೂರ್ಣ (8) ವಿದ್ಯುತ್ ಶಾಕ್‌ಗೆ ಒಳಗಾಗಿ ಮೃತಪಟ್ಟಿದ್ದರು. ಬೋರ್‌ವೆಲ್‌ನ ಪಂಪ್ ಆಫ್ ಮಾಡಲು ಹೋದ ಅನ್ನಪೂರ್ಣ ವಿದ್ಯುತ್ ಶಾಕ್‌ಗೆ ಒಳಗಾಗಿದ್ದಳು. ಅವಳ ಕೂಗು ಕೇಳಿ ಧಾವಿಸಿದ ಈರಪ್ಪ ಮತ್ತು ಶಾಂತವ್ವ ಅವರು ಆಕೆಯನ್ನು ಹಿಡಿದು ಎಳೆದಾಗ ಅವರೂ ಆಘಾತಕ್ಕೆ ಒಳಗಾಗಿ ಅಲ್ಲೇ ಬಿದ್ದು ಪ್ರಾಣ ಕಳೆದುಕೊಂಡಿದ್ದರು.
ಪರಿಹಾರಕ್ಕೆ ಕುಟುಂಬಿಕರ ಆಗ್ರಹ
ಈ ನಡುವೆ, ಊರಿನಿಂದ ಧಾವಿಸಿ ಬಂದ ಈರಪ್ಪ ಅವರ ಕುಟುಂಬಿಕರು ಒಂದೆಡೆ ನೋವಿನಿಂದ ಗೋಳಾಡುತ್ತಿದ್ದರೆ ಇನ್ನೊಂದೆಡೆ ಯಾರದೋ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ. ಹೀಗಾಗಿ ಅವರಿಗೆ ಶಿಕ್ಷೆ ಮತ್ತು ತಮಗೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು. ಹಾಗೆ ಮಾಡುವವರೆಗೆ ಮೃತದೇಹ ತೆಗೆಯಲು ಬಿಡುವುದಿಲ್ಲ ಎಂದು ಹಠ ಹಿಡಿದರು.
ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆ ಮಾಲೀಕರಾದ ಸರೋಜಿನಿ ನರಸಿಂಹನವರ್, ಎಂಜಿನಿಯರ್ ಮತ್ತು ಹೆಸ್ಕಾಂ ಅಧಿಕಾರಿ ವಿರುದ್ಧ ಕೇಸ್ ದಾಖಲಿಸುವಂತೆ ಸೂಚಿಸಿದರು. ನಿರ್ಲಕ್ಷ್ಯ ತೋರಿದ ಮೂರು ಜನರ ವಿರುದ್ಧ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸುತ್ತೇವೆ, ಪರಿಹಾರದ ಕುರಿತು ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ಅವರು ಭರವಸೆ ನೀಡಿದರು.
ಆದರೆ, ಜನರು ಇದಕ್ಕೆ ಒಪ್ಪಲಿಲ್ಲ. ಸ್ಥಳದಲ್ಲೇ ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದರು. ಮೃತದೇಹ ಎತ್ತಲು ಬಂದ ಪೊಲೀಸರು ಮತ್ತು ಕುಟುಂಬಸ್ಥರ ನಡುವೆ ವಾಗ್ವಾದ, ತಳ್ಳಾಟ ನೂಕಾಟ ನಡೆಯಿತು. ಸ್ಥಳಕ್ಕೆ ಬಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮಾತನ್ನೂ ಮೊದಲು ಕೇಳಲಿಲ್ಲ. ಬಳಿಕ ಅವರನ್ನು ಸಮಾಧಾನ ಮಾಡಿದ ಬಳಿಕ ಶವ ತೆಗೆಯಲು ಅವಕಾಶ ಮಾಡಿಕೊಟ್ಟರು.
ಪರಿಹಾರ ಒದಗಿಸಿದ ಲಕ್ಷ್ಮೀ ಹೆಬ್ಬಾಳ್ಕರ್
ಘಟನೆಯ ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಲಕ್ಷ್ಮೀ ಹೆಬ್ಬಾಳಕರ್ ಅವರು ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿ, ಧೈರ್ಯವನ್ನು ತುಂಬಿದರು. ಜತೆಗೆ ಮುಖ್ಯಮಂತ್ರಿಗಳಿಗೆ ಸ್ಥಳದಿಂದಲೇ ಕರೆ ಮಾಡಿ ಈ ಘಟನೆಯ ಬಗ್ಗೆ ವಿವರಿಸಿ, ಪ್ರತಿ ವ್ಯಕ್ತಿಗೆ ತಲಾ 2 ಲಕ್ಷ ರೂ,ಗಳನ್ನು ಮಂಜೂರು ಮಾಡಿ ಕೊಡುವಂತೆ ಕೋರಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ತ್ವರಿತಗತಿಯಲ್ಲಿ ಪರಿಹಾರದ ಹಣ ಬಿಡುಗಡೆಗೊಳಿಸಲು ಆದೇಶ ಹೊರಡಿಸಿದ್ದಾರೆ. ಇದಲ್ಲದೆ ಲಕ್ಷ್ಮೀ ತಾಯಿ ಫೌಂಡೇಶನ್ ನಿಂದ ಸಹ ಆರ್ಥಿಕ ಸಹಾಯ ಮಾಡಿದರು.
ಇದನ್ನೂ ಓದಿ: Electric Shock: ವಿದ್ಯುದಾಘಾತದಿಂದ ಒಂದೇ ಕುಟುಂಬದ ಮೂವರ ದುರ್ಮರಣ; ಮೊಮ್ಮಗಳ ರಕ್ಷಣೆಗೆ ಹೋದ ಅಜ್ಜ-ಅಜ್ಜಿ ಸಾವು